Pakistan Team: ಪಾಕಿಸ್ತಾನದಂತಹ ಕೆಟ್ಟ ತಂಡವನ್ನು ನೋಡಿಲ್ಲ: ಕೋಚ್ ಗ್ಯಾರಿ ಕರ್ಸ್ಟನ್

|

Updated on: Jun 18, 2024 | 9:36 PM

T20 World Cup 2024: ಈ ಬಾರಿಯ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲೇ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಯುಎಸ್​ಎ ವಿರುದ್ಧ ಹೀನಾಯವಾಗಿ ಸೋತು ಪಾಕಿಸ್ತಾನ್ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಈ ಮುಖಭಂಗದಿಂದ ಹೊರಬರುವ ಮುನ್ನ ಪಾಕ್ ಪಡೆಯನ್ನು ಟೀಮ್ ಇಂಡಿಯಾ ಮಕಾಡೆ ಮಲಗಿಸಿತು.

Pakistan Team: ಪಾಕಿಸ್ತಾನದಂತಹ ಕೆಟ್ಟ ತಂಡವನ್ನು ನೋಡಿಲ್ಲ: ಕೋಚ್ ಗ್ಯಾರಿ ಕರ್ಸ್ಟನ್
Pakistan - Gary Kirsten
Follow us on

T20 World Cup 2024: ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಪಾಕಿಸ್ತಾನ್ ತಂಡದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಟೀಕೆ-ಟಿಪ್ಪಣಿಗಳ ನಡುವೆ ಪಾಕ್ ತಂಡ ಕೋಚ್ ಗ್ಯಾರಿ ಕಸ್ಟರ್ನ್ ಮೌನ ಮುರಿದಿದ್ದಾರೆ. ಪಾಕಿಸ್ತಾನ್ ತಂಡದಲ್ಲಿ ಒಗ್ಗಟ್ಟು ಎಂಬುದೇ ಇಲ್ಲ, ಇಂತಹ ತಂಡವನ್ನು ನಾನೆಂದೂ ನೋಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ಯಾರಿ ಕಸ್ಟರ್ನ್​, ಪಾಕಿಸ್ತಾನದ ತಂಡದಲ್ಲಿ ಯಾವುದೇ ಒಗ್ಗಟ್ಟು ಇಲ್ಲ. ಇಲ್ಲಿ ಆಟಗಾರರು ಪರಸ್ಪರ ಬೆಂಬಲ ನೀಡುವುದಿಲ್ಲ. ಇದನ್ನು ತಂಡ ಎಂದು ಕರೆಯುತ್ತಾರಾ?, ನಿಜಕ್ಕೂ ಇದು ಒಂದು ತಂಡವಲ್ಲ ಎಂದು ಪಾಕಿಸ್ತಾನ್ ಕೋಚ್ ಹೇಳಿದ್ದಾರೆ.

ಪಾಕ್ ತಂಡದಲ್ಲಿ ಪರಸ್ಪರ ಬೆಂಬಲಿಸಿಕೊಂಡು ಹೋಗುವ ಮನಸ್ಥಿತಿಯೇ ಇಲ್ಲ. ಎಲ್ಲರೂ ಪ್ರತ್ಯೇಕರಾಗಿದ್ದಾರೆ. ಆಟಗಾರರು ಎಡ-ಬಲ ಎಂಬಂತೆ ಗುಂಪುಗಳಾಗಿದ್ದಾರೆ. ನಾನು ಅನೇಕ ತಂಡಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂತಹ ಪರಿಸ್ಥಿತಿಯನ್ನು ಎಂದಿಗೂ ಎದುರಿಸಿಲ್ಲ. ಪಾಕಿಸ್ತಾನದಂತಹ ಕೆಟ್ಟ ತಂಡವನ್ನಂತು ನಾನು ನೋಡಿಲ್ಲ ಎಂದು ಗ್ಯಾರಿ ಕಸ್ಟರ್ನ್​ ಹೇಳಿದ್ದಾರೆ.

ಪಾಕ್ ತಂಡದ ಕೋಚ್​ನ ಈ ಹೇಳಿಕೆಯು ಇದೀಗ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಪಾಕಿಸ್ತಾನ್ ತಂಡದ ಕಳಪೆ ಪ್ರದರ್ಶನಕ್ಕೆ ಆಟಗಾರರ ನಡುವಣ ವೈಮನಸ್ಸೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಲ್ಲಿ ಆಟಗಾರರ ನಡುವೆ ಎರಡು ಗುಂಪುಗಳಿದ್ದು, ಇದನ್ನೇ ಗ್ಯಾರಿ ಕಸ್ಟರ್ನ್ ಕೂಡ ಒತ್ತಿ ಹೇಳಿದ್ದಾರೆ.

ಹೀಗಾಗಿ ಮುಂಬರುವ ಸರಣಿಗಳ ವೇಳೆಗೆ ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಪಾಕ್ ಬಳಗದಿಂದ ಯಾರು ಹೊರಬೀಳಲಿದ್ದಾರಾ? ಯಾರ ತಲೆದಂಡವಾಗಲಿದೆ ಕಾದು ನೋಡಬೇಕಿದೆ.

ಟೀಮ್ ಇಂಡಿಯಾದ ಯಶಸ್ವಿ ಕೋಚ್:

ಸೌತ್ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕಸ್ಟರ್ನ್​ ಈ ಹಿಂದೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ವಿಶೇಷ ಎಂದರೆ 2011 ರಲ್ಲಿ ಕಸ್ಟರ್ನ್ ಅವರ ಮುಂದಾಳತ್ವದಲ್ಲೇ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಇದೀಗ ಪಾಕ್ ತಂಡದ ನೂತನ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗ್ಯಾರಿ ಕಸ್ಟರ್ನ್​ಗೆ ಆಟಗಾರರ ನಡುವಣ ಕಿತ್ತಾಟವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಶ್ವಕಪ್​ನಲ್ಲಿ ಮಕಾಡೆ ಮಲಗಿದ ಪಾಕ್:

ಈ ಬಾರಿಯ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲೇ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಯುಎಸ್​ಎ ವಿರುದ್ಧ ಹೀನಾಯವಾಗಿ ಸೋತು ಪಾಕಿಸ್ತಾನ್ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಇದನ್ನೂ ಓದಿ: Nicholas Pooran: ಪೂರನ್​ ಸಿಡಿಲಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ

ಈ ಮುಖಭಂಗದಿಂದ ಹೊರಬರುವ ಮುನ್ನ ಪಾಕ್ ಪಡೆಯನ್ನು ಟೀಮ್ ಇಂಡಿಯಾ ಬಗ್ಗು ಬಡಿಯಿತು. ಈ ಎರಡು ಸೋಲುಗಳಿಂದ ಕಂಗೆಟ್ಟ ಪಾಕಿಸ್ತಾನ್ ತಂಡವು ಆ ಬಳಿಕ ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಜಯ ಸಾಧಿಸಿದೆ. ಈ ಗೆಲುವುಗಳ ಹೊರತಾಗಿಯೂ ಬಾಬರ್ ಆಝಂ ಪಡೆ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ.