VIDEO: ನಾನಾ ನೀನಾ… ನೋಡೇ ಬಿಡೋಣ… ಕೈ ಕೈ ಮಿಲಾಯಿಸಲು ಹೋದ ಪಾಕ್ ವೇಗಿ
T20 World Cup 2024: ಪಾಕಿಸ್ತಾನ್ ತಂಡವು ಈ ಬಾರಿಯ ಟಿ20 ವಿಶ್ವಕಪ್ನ ಮೊದಲ ಸುತ್ತಿನಿಂದಲೇ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತಿದ್ದ ಪಾಕ್ ಪಡೆ ಆ ಬಳಿಕ ಟೀಮ್ ಇಂಡಿಯಾ ವಿರುದ್ಧ ಮಂಡಿಯೂರಿತ್ತು. ಇದಾದ ಬಳಿಕ ಕೆನಡಾ ಹಾಗೂ ಐರ್ಲೆಂಡ್ ವಿರುದ್ಧ ಜಯ ಸಾಧಿಸಿದರೂ ಸೂಪರ್-8 ಹಂತಕ್ಕೇರಲು ಸಾಧ್ಯವಾಗಲಿಲ್ಲ.
T20 World Cup 2024: ಟಿ20 ವಿಶ್ವಕಪ್ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಪಾಕಿಸ್ತಾನ್ ತಂಡವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಕಳಪೆ ಪ್ರದರ್ಶನ ಕಹಿ ನೆನಪುಗಳು ಮಾಸುವೇ ಮುನ್ನವೇ ಇದೀಗ ಪಾಕ್ ವೇಗಿ ಹ್ಯಾರಿಸ್ ರೌಫ್ (Harris Rauf) ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಅದು ಕೂಡ ಗೂಂಡಾ ರೀತಿ ವರ್ತಿಸುವ ಮೂಲಕ ಎಂಬುದೇ ಅಚ್ಚರಿ.
ಹ್ಯಾರಿಸ್ ರೌಫ್ ತನ್ನ ಪತ್ನಿಯೊಂದಿಗೆ ಹೊಟೇಲ್ಗೆ ಹೋಗುವಾಗ ಯುವಕನೊಬ್ಬ ಅದೇನೊ ಹೇಳಿದ್ದಾನೆ. ಈ ವೇಳೆ, ಸಿಟ್ಟುಗೊಂಡ ಹ್ಯಾರಿಸ್ ಆ ಯುವಕನ ಕಡೆಗೆ ಧಾವಿಸಿದ. ಇತ್ತ ಪತ್ನಿಯು ಜಗಳಕ್ಕೆ ಹೋಗದಂತೆ ಕೈ ಹಿಡಿದು ತಡೆದರೂ ಹ್ಯಾರಿಸ್ ರೌಫ್ ಕೇಳಲಿಲ್ಲ. ಬದಲಾಗಿ ಕೈ ಮಿಲಾಯಿಸಲು ಯುವಕನತ್ತ ಸಾಗಿದ್ದರು. ಇದರ ನಡುವೆ ಕೆಲವರು ಮಧ್ಯ ಪ್ರವೇಶಿಸಿದ್ದಾರೆ. ಆದರೂ ಇಬ್ಬರ ಕೋಪ ಮಾತ್ರ ತಣ್ಣಗಾಗಲಿಲ್ಲ. ಅತ್ತ ಯುವಕನು ನೀನೇನು ಹೊಡೀತೀಯ ಎಂದು ಪ್ರಶ್ನಿಸುತ್ತಿದ್ದಂತೆ ಹ್ಯಾರಿಫ್ ರೌಫ್ ಅವರ ಸಿಟ್ಟು ನೆತ್ತಿಗೇರಿದೆ.
ಇದೇ ವೇಳೆ ನೀವು ಭಾರತೀಯನಾಗಿರಬೇಕು, ಅದಕ್ಕೆ ಜಗಳಕ್ಕೆ ಬರುತ್ತಿದ್ದೀಯಾ ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ. ಈ ವೇಳೆ ಯುವಕನು ನಾನು ಪಾಕಿಸ್ತಾನಿ ಎಂಬ ಮರುತ್ತರ ನೀಡುತ್ತಾನೆ.
ಇದರಿಂದ ಮತ್ತಷ್ಟು ರೋಷಗೊಂಡ ಹ್ಯಾರಿಸ್ ರೌಫ್, ನೀನು ಪಾಕಿಸ್ತಾನದವನಾಗಿ ಹೀಗೆ ವರ್ತಿಸುತ್ತೀಯಾ, ನಿನ್ನ ಪೋಷಕರು ಈ ರೀತಿಯಾಗಿ ಬೆಳೆಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಈ ಜಗಳದ ವಿಡಿಯೋವನ್ನು ಪಕ್ಕದಲ್ಲಿದವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇದರ ಬೆನ್ನಲ್ಲೇ ಹ್ಯಾರಿಸ್ ರೌಫ್ ಅವರ ವರ್ತನೆ ಬಗ್ಗೆ ಭಾರೀ ಆಕ್ರೋಶಗಳು ಕೇಳಿ ಬರುತ್ತಿದೆ. ಅಲ್ಲದೆ ಪಾಕ್ ಆಟಗಾರನ ನಡೆಯ ಬಗ್ಗೆ ಪಿಸಿಬಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: Haris Rauf: ವಿಶ್ವ ದಾಖಲೆ ನಿರ್ಮಿಸಿದ ಹ್ಯಾರಿಸ್ ರೌಫ್
ಪಾಕ್ ತಂಡದ ಕಳಪೆ ಪ್ರದರ್ಶನ:
ಈ ಬಾರಿಯ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವು ಯುಎಸ್ಎ ವಿರುದ್ಧ ಸೋಲನುಭವಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದಾದ ಬಳಿಕ ಟೀಮ್ ಇಂಡಿಯಾ ವಿರುದ್ಧ ಕೂಡ ಮಂಡಿಯೂರಿದೆ. ಈ ಎರಡು ಸೋಲುಗಳಿಂದ ಪಾಕಿಸ್ತಾನ್ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್ನ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ಕಾರಣ ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆಕ್ರೋಶಗಳಿಂದಾಗಿಯೇ ಹ್ಯಾರಿಸ್ ರೌಫ್ ಮೇಲೆ ಯುವಕನೊಬ್ಬ ನಾಲಿಗೆ ಹರಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.