T20 World Cup 2022: ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಹೈವೊಲ್ಟೇಜ್ ಪಂದ್ಯಕ್ಕೂ ಮುನ್ನ ಏಷ್ಯಾಕಪ್ 2023 ಟೂರ್ನಿಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅಂದರೆ ಮುಂಬರುವ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದ್ದು, ಆದರೆ ಈ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಬಿಸಿಸಿಐ ತಿಳಿಸಿದೆ. ಅಷ್ಟೇ ಅಲ್ಲದೆ ಪಾಕ್ನಲ್ಲಿ ಏಷ್ಯಾಕಪ್ ನಡೆದರೆ ಭಾರತ ಭಾಗವಹಿಸುವುದಿಲ್ಲ ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಇದುವೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿರುವ ಜಯ್ ಶಾ ಅವರ ಹೇಳಿಕೆ ಬಗ್ಗೆ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಡದಿದ್ದರೆ, ಭಾರತದಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವಕಪ್ನಿಂದ ಪಾಕ್ ತಂಡ ಹಿಂದೆ ಸರಿಯಬೇಕೆಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಆಟಗಾರರಾದ ಸಯೀದ್ ಅನ್ವರ್ ಮತ್ತು ಶಾಹಿದ್ ಅಫ್ರಿದಿ ಜಯ್ ಶಾ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ಒಂದು ಹೆಜ್ಜೆ ಮುಂದೆ ಹೋಗಿ ಭಾನುವಾರ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವಂತೆ ಸೂಚಿಸಿದ್ದಾರೆ.
ಜಯ್ ಶಾ ಅವರ ಹೇಳಿಕೆ ಅನಿರೀಕ್ಷಿತವಾಗಿದೆ. ಈ ವರ್ಷದ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ-ಭಾರತ ಮುಖಾಮುಖಿಯಾಗಿತ್ತು. ಇದೀಗ ಕ್ರೀಡೆಯಲ್ಲೂ ರಾಜಕೀಯ ತರಬೇಡಿ. 2023 ರ ಏಷ್ಯಾಕಪ್ ಪಾಕಿಸ್ತಾನದಲ್ಲೇ ನಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ಒಂದು ವೇಳೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಡಲು ಭಾರತ ಬರದಿದ್ದರೆ, ಪಾಕಿಸ್ತಾನ್ ತಂಡವು ಯಾವುದೇ ಟೂರ್ನಿಯಲ್ಲೂ ಭಾರತದ ವಿರುದ್ಧ ಆಡಬಾರದು. ಅದು ಐಸಿಸಿ ಪಂದ್ಯಗಳಾಗಿರಲಿ ಅಥವಾ ಏಷ್ಯಾಕಪ್ ಆಗಿರಲಿ. ಅಷ್ಟೇ ಅಲ್ಲದೆ ಅಕ್ಟೋಬರ್ 23 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲೂ ಭಾರತದ ವಿರುದ್ಧ ಪಾಕ್ ಕಣಕ್ಕಿಳಿಯಬಾರದು ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಮುಂಬರುವ ಏಷ್ಯಾಕಪ್ನ ಚರ್ಚೆಗಳ ಬೆನ್ನಲ್ಲೇ ಕಮ್ರಾನ್ ಅಕ್ಮಲ್ ಈ ಬಾರಿಯ ಟಿ20 ವಿಶ್ವಕಪ್ನಿಂದ ಪಾಕಿಸ್ತಾನ್ ತಂಡವು ಹಿಂದೆ ಸರಿಯಬೇಕೆಂದಿರುವುದು ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಭಾರತ-ಪಾಕ್ ಮುಖಾಮುಖಿ:
ಭಾರತ ಮತ್ತು ಪಾಕಿಸ್ತಾನ್ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ಆಡಿದ್ದು 2012-13 ರಲ್ಲಿ. ಅಂದು ಪಾಕ್ ತಂಡವು ಭಾರತದಲ್ಲಿ ಸರಣಿ ಆಡಿತ್ತು. ಆ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಕಾರಣಗಳಿಂದ ಯಾವುದೇ ಸರಣಿ ನಡೆದಿಲ್ಲ. ಇದಾಗ್ಯೂ 2016 ರಲ್ಲಿ ಟಿ20 ವಿಶ್ವಕಪ್ಗಾಗಿ ಪಾಕ್ ತಂಡ ಬಂದಿತ್ತು. ಇದೀಗ 2023 ರಲ್ಲಿ ಪಾಕಿಸ್ತಾನ್ ಏಷ್ಯಾಕಪ್ ಅನ್ನು ಆಯೋಜಿಸಲಿದೆ. ಇತ್ತ ಭಾರತ ಕೂಡ ಅದೇ ವರ್ಷ ಏಕದಿನ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಇದೀಗ ಭಾರತ ಏಷ್ಯಾಕಪ್ ಅನ್ನು ಬಹಿಷ್ಕರಿಸಿದರೆ, ಪಾಕ್ ಏಕದಿನ ವಿಶ್ವಕಪ್ನಿಂದ ಹಿಂದೆ ಸರಿಯುವುದಾಗಿ ತಿಳಿಸಿದೆ. ಇದುವೇ ಈಗ ಹೊಸ ಚರ್ಚೆಗೆ ಕಾರಣವಾಗಿದೆ.