7 ವರ್ಷಗಳಲ್ಲಿ ಪಾಕ್​​ ತಂಡದಲ್ಲಿ ಮಹತ್ವದ ಬದಲಾವಣೆ: ಟೀಮ್ ಇಂಡಿಯಾದಲ್ಲಿದ್ದಾರೆ ಪಂಚ ಪಾಂಡವರು..!

| Updated By: ಝಾಹಿರ್ ಯೂಸುಫ್

Updated on: Aug 07, 2023 | 3:02 PM

India vs Pakistan: ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವು ಅಕ್ಟೋಬರ್ 14 ರಂದು ನಡೆಯಲಿದೆ.

7 ವರ್ಷಗಳಲ್ಲಿ ಪಾಕ್​​ ತಂಡದಲ್ಲಿ ಮಹತ್ವದ ಬದಲಾವಣೆ: ಟೀಮ್ ಇಂಡಿಯಾದಲ್ಲಿದ್ದಾರೆ ಪಂಚ ಪಾಂಡವರು..!
IND vs PAK
Follow us on

ODI World Cup 2023: ಏಕದಿನ ವಿಶ್ವಕಪ್​ಗಾಗಿ ಭಾರತಕ್ಕೆ ತೆರಳಲು ಪಾಕಿಸ್ತಾನ್ (Pakistan) ತಂಡಕ್ಕೆ ಅಲ್ಲಿನ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ 7 ವರ್ಷಗಳ ಬಳಿಕ ಪಾಕ್ ಪಡೆ ಭಾರತಕ್ಕೆ ಕಾಲಿಡುವುದು ಖಚಿತವಾಗಿದೆ. ಅಂದರೆ 2016 ರ ಟಿ20 ವಿಶ್ವಕಪ್​ ಬಳಿಕ ಪಾಕಿಸ್ತಾನ್ ಭಾರತದಲ್ಲಿ ಪಂದ್ಯವಾಡಿಲ್ಲ. ಹೀಗಾಗಿ ಭಾರತದಲ್ಲೇ ಇಂಡೊ-ಪಾಕ್ (India vs Pakistan) ಕದನವನ್ನು ವೀಕ್ಷಿಸಲು ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಕಳೆದ 7 ವರ್ಷಗಳಲ್ಲಿ ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆಯಾಗಿದೆ. ಅದರಲ್ಲೂ ಪಾಕಿಸ್ತಾನ್ ತಂಡವು ಈ ಹಿಂದೆಗಿಂತಲೂ ಬಲಿಷ್ಠವಾಗಿದೆ ಎಂದರೆ ತಪ್ಪಾಗಲಾರದು.

ಏಕೆಂದರೆ ಕಳೆದೊಂದು ದಶಕದಲ್ಲಿ ಏಕಪಕ್ಷೀಯವಾಗಿ ಸಾಗುತ್ತಿದ್ದ ಇಂಡೊ-ಪಾಕ್ ಕದನದಲ್ಲಿ ಇದೀಗ ಪಾಕಿಸ್ತಾನ್ ತಂಡ ಪೈಪೋಟಿ ನೀಡಲು  ಪ್ರಾರಂಭಿಸಿದೆ. ಇದಕ್ಕೆ ಸಾಕ್ಷಿಯೇ ಉಭಯ ತಂಡಗಳ ನಡುವಣ ಕಳೆದ 4 ಪಂದ್ಯಗಳ ಫಲಿತಾಂಶ. ಕೊನೆಯ ನಾಲ್ಕು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ 2 ಪಂದ್ಯ ಗೆದ್ದಿದ್ದರೆ, ಪಾಕಿಸ್ತಾನ್ ತಂಡ ಕೂಡ 2 ರಲ್ಲಿ ಜಯ ಸಾಧಿಸಿದೆ. ಹೀಗಾಗಿಯೇ ಈ ಬಾರಿ ಕೂಡ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

7 ವರ್ಷಗಳಲ್ಲಿ ಮಹತ್ವದ ಬದಲಾವಣೆ:

2016 ರಲ್ಲಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ್ ತಂಡದ ಯಾವುದೇ ಆಟಗಾರರು ಪ್ರಸ್ತುತ ಟೀಮ್​ನಲ್ಲಿಲ್ಲ. ಅಂದು ತಂಡದಲ್ಲಿದ್ದ ಬಹುತೇಕ ಪಾಕಿಸ್ತಾನಿ ಆಟಗಾರರು ನಿವೃತ್ತಿ ಹೊಂದಿದ್ದರೆ, ಕೆಲವರು ತಂಡದಿಂದ ಹೊರಬಿದ್ದಿದ್ದಾರೆ.

2016ರಲ್ಲಿ ಟೀಮ್ ಇಂಡಿಯಾ ವಿರುದ್ಧ ಆಡಿದ್ದ ಪಾಕಿಸ್ತಾನ್ ಪ್ಲೇಯಿಂಗ್ 11:

ಶರ್ಜೀಲ್ ಖಾನ್ , ಅಹ್ಮದ್ ಶೆಹಝಾದ್ , ಮೊಹಮ್ಮದ್ ಹಫೀಜ್ , ಉಮರ್ ಅಕ್ಮಲ್ , ಶೋಯೆಬ್ ಮಲಿಕ್ , ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್) , ಶಾಹಿದ್ ಅಫ್ರಿದಿ (ನಾಯಕ) , ವಹಾಬ್ ರಿಯಾಝ್ , ಮೊಹಮ್ಮದ್ ಸಮಿ , ಮೊಹಮ್ಮದ್ ಅಮೀರ್ , ಮೊಹಮ್ಮದ್ ಇರ್ಫಾನ್.

ನಾಯಕ ಸೇರಿದಂತೆ ಎಲ್ಲವೂ ಬದಲು:

ಈ ಬಾರಿ ಬಾಬರ್ ಆಝಂ ನೇತೃತ್ವದಲ್ಲಿ ಪಾಕ್ ಪಡೆ ಭಾರತಕ್ಕೆ ಆಗಮಿಸಲಿದೆ. ಇಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಾಬರ್ ಹಾಗೂ ರಿಝ್ವಾನ್ ಮುನ್ನಡೆಸಲಿದ್ದಾರೆ. ಹಾಗೆಯೇ ಬೌಲಿಂಗ್ ವಿಭಾಗದ ಜವಾಬ್ದಾರಿ ಶಾಹಿನ್ ಅಫ್ರಿದಿಗೆ ಹೆಗಲೇರಲಿದೆ. ಹೀಗಾಗಿ ಈ ಸಲ ಟೀಮ್ ಇಂಡಿಯಾ ಏಕದಿನ ಪಂದ್ಯದಲ್ಲಿ ಎದುರಿಸುತ್ತಿರುವುದು ಯಂಗ್ ಪಾಕಿಸ್ತಾನ್ ತಂಡವನ್ನು ಎಂಬುದು ವಿಶೇಷ.

ಭಾರತದಲ್ಲಿ ಆಡಿದ ಅನುಭವವಿಲ್ಲ:

ಪ್ರಸ್ತುತ ಪಾಕ್ ತಂಡದಲ್ಲಿರುವ ಯಾವುದೇ ಆಟಗಾರರು 2016ರ ತಂಡದಲ್ಲಿರಲಿಲ್ಲ. ಹೀಗಾಗಿಯೇ ಭಾರತದಲ್ಲಿ ಆಡಿದ ಅನುಭವ ಹೊಂದಿಲ್ಲ. ಹೀಗಾಗಿ ಎಲ್ಲಾ ಆಟಗಾರರು ಭಾರತದಲ್ಲಿ ಚೊಚ್ಚಲ ಪಂದ್ಯವಾಡಲಿದ್ದಾರೆ. ಇದುವೇ ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.

ಟೀಮ್ ಇಂಡಿಯಾದಲ್ಲಿದ್ದಾರೆ ಪಂಚ ಪಾಂಡವರು:

2016 ರಲ್ಲಿ ಪಾಕಿಸ್ತಾನ್ ವಿರುದ್ಧ ಆಡಿದ ಭಾರತ ತಂಡ ಐವರು ಆಟಗಾರರು ಈಗಲೂ ತಂಡದಲ್ಲಿದ್ದಾರೆ. ಅಂದು ಪಾಕ್ ತಂಡಕ್ಕೆ ಸೋಲುಣಿಸಿದ್ದ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದರು.

ಈ ಬಾರಿಯ ಏಕದಿನ ವಿಶ್ವಕಪ್ ತಂಡದಲ್ಲೂ  ಐವರು ಕಾಣಿಸಿಕೊಳ್ಳುವುದು ಖಚಿತ. ಅದರಲ್ಲೂ ಈ ಐವರು ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರು ಎಂಬುದು ವಿಶೇಷ. ಈ ಅನುಭವಿ ಆಟಗಾರರೇ  ಪಾಕ್​ ತಂಡದ ಚಿಂತೆಯನ್ನು ಹೆಚ್ಚಿಸಲಿದ್ದಾರೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ ಸೆಮಿಫೈನಲ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಗ್ಲೆನ್ ಮೆಕ್​ಗ್ರಾಥ್

2016 ರಲ್ಲಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿದ ಭಾರತದ ಪ್ಲೇಯಿಂಗ್ 11:

ಶಿಖರ್ ಧವನ್ , ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ , ಸುರೇಶ್ ರೈನಾ , ಯುವರಾಜ್ ಸಿಂಗ್ , ಎಂಎಸ್​ ಧೋನಿ (ನಾಯಕ) , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್ , ಆಶಿಶ್ ನೆಹ್ರಾ , ಜಸ್ಪ್ರೀತ್ ಬುಮ್ರಾ.

ಯಾವಾಗ ಭಾರತ-ಪಾಕಿಸ್ತಾನ್ ಪಂದ್ಯ:

ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ. ಇನ್ನು ಅಕ್ಟೋಬರ್ 14 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 15 ರಂದು ಭಾರತ-ಪಾಕ್ ಮುಖಾಮುಖಿಗೆ ದಿನಾಂಕ ನಿಗದಿಯಾಗಿತ್ತು.

ಆದರೆ ಅದೇ ದಿನ ಗುಜರಾತ್​ನಲ್ಲಿ ನವರಾತ್ರಿ ಕಾರ್ಯಕ್ರಮ ನಡೆಯುವುದರಿಂದ ಸೂಕ್ತ ಪೊಲೀಸ್​ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಅಹಮದಾಬಾದ್​ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪಂದ್ಯದ ದಿನಾಂಕವನ್ನು ಬದಲಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಒಂದು ದಿನ ಮುಂಚಿತವಾಗಿ, ಅಂದರೆ ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದೆ. ಅಲ್ಲದೆ ಮರುನಿಗದಿಯಾಗಿರುವ ಪಂದ್ಯಗಳ ಹೊಸ ವೇಳಾಪಟ್ಟಿ ಶ್ರೀಘ್ರದಲ್ಲೇ ಪ್ರಕಟಿಸಲಾಗುತ್ತದೆ.