ಸಚಿನ್ಗೆ ಬಾಬರ್ನ ಹೋಲಿಕೆ: ರೊಚ್ಚಿಗೆದ್ದ ಪಾಕ್ ಕ್ರಿಕೆಟ್ ವಿಶ್ಲೇಷಕ
Babar Azam and Sachin Tendulkar: ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂಗೆ ಹೋಲಿಕೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಪಾಕಿಸ್ತಾನದ ಕ್ರಿಕೆಟ್ ವಿಶ್ಲೇಷಕರು ಲೈವ್ ಕಾರ್ಯಕ್ರಮದಲ್ಲೇ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಬಾಬರ್ ಆಝಂ (Babar Azam) ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಗೆ (Sachin Tendulkar) ಹೋಲಿಸಿದಕ್ಕೆ ಪಾಕ್ ಕ್ರಿಕೆಟ್ ವಿಶ್ಲೇಷಕ ಆಕ್ರೋಶ ಹೊರಹಾಕಿದ್ದಾರೆ. ಜಿಟಿವಿ ನ್ಯೂಸ್‌ನ ಕಾರ್ಯಕ್ರಮವೊಂದರಲ್ಲಿ, ಬಾಬರ್ ಆಝಂ ಅವರನ್ನು ಸಚಿನ್ ತೆಂಡೂಲ್ಕರ್ ನಡುವಣ ಹೋಲಿಕೆಯನ್ನು ಪ್ರಸ್ತಾಪಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ವಿಶ್ಲೇಷಕರಾಗಿ ಭಾಗವಹಿಸಿದ್ದ ವಸೇ ಹಬೀಬ್ ಆಕ್ರೋಶ ವ್ಯಕ್ತಪಡಿಸಿದರು.
ನೀವು ಯಾರ ಜೊತೆ ಯಾರನ್ನು ಹೋಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದ ಹಬೀಬ್, ಬಾಬರ್ ಅವರನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಜೊತೆ ಯಾವತ್ತೂ ತುಲನೆ ಮಾಡಬೇಡಿ ಎಂದರು. ಸಚಿನ್ ಯಾವತ್ತಿದ್ದರೂ ಲೆಜೆಂಡ್ ಆಟಗಾರ, ಅಂತಹ ಆಟಗಾರನೊಂದಿಗೆ ಬಾಬರ್ ಆಝಂ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹಬೀಬ್ ಲೈವ್ ಚರ್ಚೆಯಲ್ಲೇ ಆ್ಯಂಕರ್ಗೆ ತಿಳಿಸಿದರು.
ಜನರು ಮೊದಲು ಬಾಬರ್ ಆಝಂ ಅವರನ್ನು ವಿರಾಟ್ ಕೊಹ್ಲಿ, ನಂತರ ಶುಭಮನ್ ಗಿಲ್ ಅವರೊಂದಿಗೆ ಹೋಲಿಸುತ್ತಿದ್ದರು. ಈಗ ನೀವು ಸಚಿನ್ ತೆಂಡೂಲ್ಕರ್ ಅವರಂತಹ ದಂತಕಥೆಯನ್ನೇ ಎಳೆದು ತಂದಿದ್ದೀರಿ. ನೀವು ಸಚಿನ್ ಆಟವನ್ನು ನೋಡಿದ್ದೀರಾ? ಇಂತಹ ಪ್ರಶ್ನೆಯನ್ನು ನನಗೆ ಕೇಳಬೇಡಿ. ನಾನು ಒಬ್ಬ ಕ್ರಿಕೆಟ್ ಅಭಿಮಾನಿ. ಇಂತಹ ಪ್ರಶ್ನೆಗಳನ್ನು ಯಾರನ್ನು ಕೇಳುತ್ತಿದ್ದಾರೆ? ಬಾಬರ್ ಮತ್ತು ತೆಂಡೂಲ್ಕರ್ ಹೋಲಿಕೆ ಹೇಗೆ ಸಾಧ್ಯ? ಎಂದು ಹಬೀಬ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಾನು ಸಹ ಬಾಬರ್ ಆಝಂ ಅವರನ್ನು ಇಷ್ಟಪಡುತ್ತೇನೆ. ಆತ ಪಾಕಿಸ್ತಾನ್ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಆದರೆ ಇಂತಹ ಹೋಲಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹಬೀಬ್ ತಿಳಿಸಿದರು.
Babar Azam can’t be Sachin Tendulkar pic.twitter.com/L6S4pqlUwV
— Cricketopia (@CricketopiaCom) March 5, 2024
ಅಂದಹಾಗೆ ಪಾಕಿಸ್ತಾನ್ ಚಾನೆಲ್ನಲ್ಲಿ ಇಂತಹದೊಂದು ಚರ್ಚೆ ನಡೆಯಲು ಮುಖ್ಯ ಕಾರಣ ಇತ್ತೀಚೆಗೆ ಎ ಸ್ಪೋರ್ಟ್ಸ್ ಚಾನೆಲ್ನಲ್ಲಿ ನಡೆದ ದಿ ಪೆವಿಲಿಯನ್ ಶೋ. ಈ ಕಾರ್ಯಕ್ರಮದಲ್ಲಿ ಪಾಕ್ ಮಾಜಿ ಆಟಗಾರ ವಾಸಿಂ ಅಕ್ರಮ್ ಕ್ರಿಕೆಟ್ ಲೆಜೆಂಡ್ಸ್ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಅವರ ಕುರಿತಾದ ಚರ್ಚೆ ನಡೆಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ಬಾಬರ್ ಆಝಂಗೆ ಬೌಲಿಂಗ್ ಮಾಡುವ ಬಗ್ಗೆ ಪ್ರಶ್ನಿಸಿದ್ದರು.
ಇದನ್ನೂ ಓದಿ: IPL 2024: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಐಪಿಎಲ್ನಿಂದ ಔಟ್..!
ಇಲ್ಲಿ ಅಕ್ರಮ್ ಸಚಿನ್ ಹಾಗೂ ಲಾರಾಗೆ ಬೌಲಿಂಗ್ ಮಾಡಲು ವಿಶೇಷ ಯೋಜನೆ ರೂಪಿಸಬೇಕಿತ್ತು. ಅವರನ್ನು ಅಂತಹ ಆಟಗಾರರಾಗಿದ್ದರು ಎಂದು ತಿಳಿಸಿದ್ದರು. ಇದೇ ವೇಳೆ ಇವರ ಜೊತೆ ಬಾಬರ್ ಆಝಂ ಅವರನ್ನು ಎಳೆದು ತಂದಿರುವ ವಿಚಾರವಾಗಿ ಇದೀಗ ವಸೇ ಹಬೀಬ್ ಆಕ್ರೋಶ ಹೊರಹಾಕಿದ್ದಾರೆ.