ಪಾಕಿಸ್ತಾನದ ಖ್ಯಾತ ಕ್ರಿಕೆಟಿಗರನ್ನು ಪಂಚತಾರಾ ಹೋಟೆಲ್‌ನಿಂದ ಹೊರಹಾಕಿದ ಘಟನೆ ನಡೆದಿದೆ. ಪಾಕ್ನಲ್ಲಿ ನಡೆಯುತ್ತಿರುವ ಅಗ್ರ ದೇಶೀಯ ಟೂರ್ನಿ ಖ್ವೈದ್ ಎ ಆಜಂ ಟ್ರೋಫಿಯ ಫೈನಲಿಸ್ಟ್ ತಂಡಗಳಾದ ಖೈಬರ್ ಪಖ್ತುಂಕ್ವಾ ಮತ್ತು ನಾರ್ತನ್ ತಂಡ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದರು. ಆದರೆ ಡಿಸೆಂಬರ್ 22 ರ ಬಳಿಕ ತಂಡಗಳು ಯಾವುದೇ ರೂಮ್ ಬುಕ್ಕಿಂಗ್ ಮಾಡದಿರುವ ಕಾರಣ, ಎರಡೂ ತಂಡಗಳ ಆಟಗಾರರನ್ನು ಹೋಟೆಲ್ ಮ್ಯಾನೇಜ್ಮೆಂಟ್ ಹೊರಹಾಕಿದ್ದರು.
ಈ ಬಗ್ಗೆ ಮಾತನಾಡಿರುವ ಹೋಟೆಲ್ ಮ್ಯಾನೇಜ್ಮೆಂಟ್ ಸಿಬ್ಬಂದಿಗಳು, ಪಿಸಿಬಿ ಅಧಿಕಾರಿಗಳು ಡಿಸೆಂಬರ್ 22 ರವರೆಗೆ ಮಾತ್ರ ಕೊಠಡಿಗಳನ್ನು ಬುಕ್ ಮಾಡಿದ್ದರು. ಬೇರೊಂದು ದೊಡ್ಡ ಗುಂಪಿನ ಆಗಮನದಿಂದಾಗಿ ಹಿಂದಿನ ಬುಕಿಂಗ್ ಅನ್ನು ರದ್ದುಗೊಳಿಸಿದ ನಂತರವೇ ಡಿಸೆಂಬರ್ 22 ಕ್ಕೆ ಬುಕಿಂಗ್ ದೃಢೀಕರಣ ನಡೆಯಲಿದೆ ಎಂದು ಪಿಸಿಬಿ ಅಧಿಕಾರಿಗಳು ಹೋಟೆಲ್ ಆಡಳಿತಕ್ಕೆ ತಿಳಿಸಿದ್ದರು. ಅದಾಗ್ಯೂ ಪಿಸಿಬಿ ಡಿಸೆಂಬರ್ 22 ರ ನಂತರ ಯಾವುದೇ ಬುಕಿಂಗ್ ಮಾಡಿಲ್ಲ. ಇದರಿಂದಾಗಿ ಖೈಬರ್ ಪಖ್ತುಂಕ್ವಾ ಮತ್ತು ನಾರ್ತನ್ ಆಟಗಾರರು, ಸಿಬ್ಬಂದಿ ಸದಸ್ಯರಿಗೆ ರೂಮ್ ಖಾಲಿ ಮಾಡುವಂತೆ ತಿಳಿಸಲಾಗಿತ್ತು.
ಆದರೆ ಆಟಗಾರರು ಮತ್ತೆ ಹೋಟೆಲ್ನಲ್ಲೇ ತಂಗಲು ಮುಂದಾಗಿದ್ದರಿಂದ ಅವರನ್ನು ಹೊರಹಾಕಬೇಕಾಯಿತು. ಪಿಸಿಬಿ ಅಧಿಕಾರಿಗಳ ನಿರ್ಲಕ್ಷ್ಯದ ನಡೆಯಿಂದಾಗಿ ಆಟಗಾರರು ಬೀದಿಗೆ ಬರುವಂತಾಗಿದೆ ಹೊರತು ಹೋಟೆಲ್ ಸಿಬ್ಬಂದಿಗಳ ಕಡೆಯಿಂದ ಯಾವುದೇ ತಪ್ಪು ನಡೆದಿರಲಿಲ್ಲ ಎಂದು ಹೋಟೆಲ್ ಮ್ಯಾನೇಜ್ಮೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಅಚ್ಚರಿ ಅಂಶವೆಂದರೆ ಇದೇ ಹೋಟೆಲ್ನಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಕೂಡ ತಂಗಿದ್ದರು ಎಂಬುದು. ಇದಾಗ್ಯೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಮಾತನಾಡಿರುವ ರಮೀಜ್ ರಾಜಾ, ನಿನ್ನೆ ರಾತ್ರಿ ನಡೆದಿರುವ ಘಟನೆಯನ್ನು ತಮ್ಮ ಗಮನಕ್ಕೆ ತರಲಾಗಿದೆ. ಖ್ವೆದ್-ಎ-ಅಜಮ್ ಟ್ರೋಫಿ ಫೈನಲಿಸ್ಟ್ ತಂಡಗಳನ್ನು ಸ್ಥಳೀಯ ಪಂಚತಾರಾ ಹೋಟೆಲ್‌ನಿಂದ ಏಕೆ ಹೊರಹಾಕಲಾಯಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದೀಗ ಪಾಕಿಸ್ತಾನ್ ಆಟಗಾರರನ್ನು ಹೋಟೆಲ್‌ನಿಂದ ಹೊರಹಾಕಿರುವ ಘಟನೆ ಭಾರೀ ವೈರಲ್ ಆಗಿದ್ದು, ಪಿಸಿಬಿ ಅಧಿಕಾರಿಗಳ ವಿರುದ್ದ ಪಾಕ್ ಕ್ರಿಕೆಟ್ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ