
ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ಹ್ಯಾಂಡ್‌ಶೇಕ್ ವಿವಾದ ಏಷ್ಯಾಕಪ್‌ನಲ್ಲಿ (Asia Cup) ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಟೀಂ ಇಂಡಿಯಾ ಆಟಗಾರರ ಕ್ರೀಡಾ ಸ್ಫೂರ್ತಿಯ ಬಗ್ಗೆ ಪ್ರಶ್ನೆ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಆ ಬಳಿಕ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಈ ವಿವಾದಕ್ಕೆಲ್ಲ ಕಾರಣ ಎಂದು ಐಸಿಸಿಗೆ ದೂರು ನೀಡಿದೆ. ಆ ದೂರಿನಲ್ಲಿ ಮ್ಯಾಚ್ ರೆಫರಿಯನ್ನು ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗಿಡಬೇಕು ಎಂಬುದನ್ನು ಉಲ್ಲೇಖಿಸಿದೆ. ಇದೀಗ ಅದರ ಮುಂದುವರೆದ ಭಾಗವೆಂಬಂತೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಪಂದ್ಯಾವಳಿಯಿಂದ ಹೊರಹಾಕದಿದ್ದರೆ, ಏಷ್ಯಾಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಸವಾಲು ಹಾಕಿದೆ.
ಸೆಪ್ಟೆಂಬರ್ 14 ರ ಭಾನುವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಯಾವುದೇ ರೋಮಾಂಚನ ಕ್ಷಣಗಳು ಇರಲಿಲ್ಲ. ಆದಾಗ್ಯೂ ಮುಂದ್ಯ ಮುಗಿದ ಬಳಿಕ ನಡೆದ ಘಟನೆಗಳು ಇದೀಗ ವಿವಾದಕ್ಕೆ ಕಾರಣವಾಗಿವೆ. ವಾಸ್ತವವಾಗಿ ಪಂದ್ಯ ಮುಗಿದ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದೆ ಡ್ರೆಸ್ಸಿಂಗ್ ರೂಮ್ ಸೇರಿಕೊಂಡರು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮುಜುಗರಕ್ಕೀಡು ಮಾಡಿದೆ.
ಆದರೆ ನಿಜವಾದ ವಿವಾದ ಇದಕ್ಕೂ ಮೊದಲೇ ಆರಂಭವಾಗಿತ್ತು. ಟಾಸ್ ಸಮಯದಲ್ಲಿ ಪೈಕ್ರಾಫ್ಟ್ ಎರಡೂ ತಂಡಗಳ ನಾಯಕರನ್ನು ಕೈಕುಲುಕದಂತೆ ಕೇಳಿಕೊಂಡಿದ್ದರು ಎಂದು ಪಿಸಿಬಿ ಆರೋಪಿಸಿದೆ. ಈ ವಿಷಯದ ಬಗ್ಗೆ, ಪಾಕಿಸ್ತಾನ ಮಂಡಳಿಯು ರೆಫರಿಯ ವಿರುದ್ಧ ಅವರನ್ನು ಪಂದ್ಯಾವಳಿಯಿಂದ ತೆಗೆದುಹಾಕಬೇಕೆಂದು ಐಸಿಸಿಗೆ ದೂರು ನೀಡಿದೆ. ಇದಲ್ಲದೆ, ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕದಿದ್ದರೆ, ಪೈಕ್ರಾಫ್ಟ್ ರೆಫರಿಯಾಗಿರುವ ಪಂದ್ಯಾವಳಿಯ ಪ್ರತಿಯೊಂದು ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆ ಹಾಕಿದೆ.
ಈ ದೂರಿನ ಬಗ್ಗೆ ಐಸಿಸಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಥವಾ ಯಾವುದೇ ಕ್ರಮ ಕೈಗೊಂಡಿಲ್ಲ. ವಿಶೇಷವೆಂದರೆ ಪಾಕಿಸ್ತಾನದ ಮುಂದಿನ ಪಂದ್ಯ ಯುಎಇ ವಿರುದ್ಧವಾಗಿದ್ದು, ಪೂರ್ವ ನಿರ್ಧರಿಸಿದ ವೇಳಾಪಟ್ಟಿಯ ಪ್ರಕಾರ, ಪೈಕ್ರಾಫ್ಟ್ ಆ ಪಂದ್ಯದಲ್ಲಿ ರೆಫರಿಯಾಗಿರುತ್ತಾರೆ. ಈಗ ಐಸಿಸಿ ಪೈಕ್ರಾಫ್ಟ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪಾಕಿಸ್ತಾನ ತಂಡ ಈ ಪಂದ್ಯದಿಂದ ಹೊರಗುಳಿಯಬಹುದು.
IND vs PAK: ಹ್ಯಾಂಡ್ ಶೇಕ್ ವಿವಾದಕ್ಕೆ ಮ್ಯಾಚ್ ರೆಫರಿ ಕಾರಣ; ಐಸಿಸಿಗೆ ಪಾಕ್ ಮಂಡಳಿ ದೂರು
ಈ ಪಂದ್ಯಾವಳಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಕಜಿಸುತ್ತಿದ್ದು, ಇದರಲ್ಲಿ ಐಸಿಸಿಯ ಹಸ್ತಕ್ಷೇಪವಿರುವುದಿಲ್ಲ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಥಾನಮಾನ ಹೊಂದಿರುವ ಪಂದ್ಯಾವಳಿಯಾಗಿರುವುದರಿಂದ, ಪಂದ್ಯದ ಅಧಿಕಾರಿಗಳ ನೇಮಕಾತಿಯನ್ನು ಐಸಿಸಿ ಮಾತ್ರ ಮಾಡುತ್ತದೆ. 2025 ರ ಏಷ್ಯಾಕಪ್‌ಗೆ ಐಸಿಸಿ ಕೇವಲ ಇಬ್ಬರು ಪಂದ್ಯಗಳ ರೆಫರಿಗಳನ್ನು ನೇಮಿಸಿದೆ. ಪೈಕ್ರಾಫ್ಟ್ ಹೊರತುಪಡಿಸಿ, ವೆಸ್ಟ್ ಇಂಡೀಸ್‌ನ ರಿಚಿ ರಿಚರ್ಡ್ಸನ್ ಇದರಲ್ಲಿ ಎರಡನೇ ರೆಫರಿಯಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ