ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಕಾಣಿಸಿಕೊಳ್ಳುವುದು ಅನುಮಾನ. ಇತ್ತೀಚೆಗೆ ಮುಕ್ತಾಯಗೊಂಡ ಆ್ಯಶಸ್ ಸರಣಿಯ ಐದನೇ ಟೆಸ್ಟ್ ಪಂದ್ಯದ ವೇಲೆ ಕಮಿನ್ಸ್ ಅವರ ಎಡ ಮಣಿಕಟ್ಟಿನ ಭಾಗಕ್ಕೆ ಗಾಯವಾಗಿತ್ತು. ಈ ಗಾಯದ ಹಿನ್ನೆಲೆಯಲ್ಲಿ ಆಸೀಸ್ ನಾಯಕ ಟೀಮ್ ಇಂಡಿಯಾ ವಿರುದ್ಧದ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಭಾರತದ ವಿರುದ್ಧ ಆಸ್ಟ್ರೇಲಿಯಾದ ಏಕದಿನ ಸರಣಿ ಸೆಪ್ಟೆಂಬರ್ 22 ರಂದು ಶುರುವಾಗಲಿದೆ. ಈ ಸರಣಿಗೆ ಇನ್ನೂ ಕೂಡ ಸಮಯವಕಾಶವಿದೆ. ಆದರೆ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದಿರಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಪ್ಯಾಟ್ ಕಮಿನ್ಸ್ಗೆ ಸೂಚಿಸಿದೆ.
ಹೀಗಾಗಿ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಕಮಿನ್ಸ್ ಬದಲು ಮತ್ತೋರ್ವ ಆಟಗಾರ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಮಿಚೆಲ್ ಮಾರ್ಷ್ ಅಥವಾ ಸ್ಟೀವ್ ಸ್ಮಿತ್ ನಾಯಕ?
ಟೀಮ್ ಇಂಡಿಯಾ ವಿರುದ್ಧದ ಸರಣಿಯಿಂದ ಪ್ಯಾಟ್ ಕಮಿನ್ಸ್ ಹೊರಗುಳಿದರೆ ಸ್ಟೀವ್ ಸ್ಮಿತ್ ಅಥವಾ ಮಿಚೆಲ್ ಮಾರ್ಷ್ ತಂಡವನ್ನು ಮುನ್ನಡೆಸಬಹುದು. ಕಳೆದ ಬಾರಿ ಭಾರತದ ವಿರುದ್ಧದ ಏಕದಿನ ಸರಣಿಯಿಂದ ಕಮಿನ್ಸ್ ಹೊರಗುಳಿದಿದ್ದರು. ಈ ವೇಳೆ ಸ್ಮಿತ್ ತಂಡವನ್ನು ಮುನ್ನಡೆಸಿದ್ದ ಕಾರಣ, ಈ ಬಾರಿಯೂ ಅವರಿಗೆ ನಾಯಕತ್ವ ಒಲಿಯುವ ಸಾಧ್ಯತೆಯಿದೆ.
ಏಕದಿನ ವಿಶ್ವಕಪ್ಗೂ ಆರಂಭಕ್ಕೂ 2 ವಾರ ಮುಂಚಿತವಾಗಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲಿದೆ. ಇದು ಒಂದಾರ್ಥದಲ್ಲಿ ಆಸೀಸ್ ತಂಡಕ್ಕೆ ಭಾರತದ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಪೂರ್ವಭಾವಿ ಪಂದ್ಯವಾಗಿರಲಿದೆ. ಏಕದಿನ ವಿಶ್ವಕಪ್ ಆರಂಭಕ್ಕೂ ಇಂತಹದೊಂದು ಸರಣಿ ಆಯೋಜಿಸಿರುವುದೇ ಅಚ್ಚರಿ. ಏಕೆಂದರೆ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿರುವುದು ಆಸ್ಟ್ರೇಲಿಯಾ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಅಂದರೆ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಬಳಿಕ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದ್ದು, ಅಲ್ಲೂ ಕೂಡ ಆಸೀಸ್ ಪಡೆಯನ್ನೇ ತನ್ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯು ಟೀಮ್ ಇಂಡಿಯಾ ಮುಂದಿರುವ ದೊಡ್ಡ ಸವಾಲು. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸಮಸ್ಯೆಗಳು ಬಹಿರಂಗವಾದರೆ, ಎದುರಾಳಿ ತಂಡಗಳಿಗೆ ಪ್ಲ್ಯಾನ್ ರೂಪಿಸಲು ಮತ್ತಷ್ಟು ಅನುಕೂಲವಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: Tilak Varma: ದಾಖಲೆಯೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿದ ತಿಲಕ್ ವರ್ಮಾ