‘ನಿಮ್ಮಿಂದ ನಷ್ಟವಾಗಿದೆ ಪರಿಹಾರ ಕೊಡಿ’; ಹೊಸ ಕ್ಯಾತೆ ತೆಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ

|

Updated on: Sep 07, 2023 | 10:38 AM

Asia Cup 2023: ಶ್ರೀಲಂಕಾದಲ್ಲಿ ನಿರಂತರ ಮಳೆಯ ಕಾರಣ, ನಿರೀಕ್ಷೆಯಂತೆ ಕಡಿಮೆ ಟಿಕೆಟ್ ಮಾರಾಟವಾಗಿದೆ. ಹೀಗಾಗಿ ಆತಿಥ್ಯದ ಹಕ್ಕು ಹೊಂದಿರುವ ಪಾಕ್ ಮಂಡಳಿಗೆ ಎಸಿಸಿ ಪರಿಹಾರ ನೀಡಬೇಕು ಎಂದು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ

‘ನಿಮ್ಮಿಂದ ನಷ್ಟವಾಗಿದೆ ಪರಿಹಾರ ಕೊಡಿ’; ಹೊಸ ಕ್ಯಾತೆ ತೆಗೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಜಯ್ ಶಾ, ಝಕಾ ಅಶ್ರಫ್
Follow us on

ಈ ಬಾರಿಯ ಏಷ್ಯಾಕಪ್​ಗೆ (Asia Cup 2023) ಸಂಬಂಧಿಸಿದಂತೆ ಪಿಸಿಬಿ (PCB), ಎಸಿಸಿ ಹಾಗೂ ಬಿಸಿಸಿಐ ನಡುವೆ ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಆರಂಭವಾದ ಶೀತಲ ಸಮರ ಇಲ್ಲಿಯವರೆಗೂ ನಿಂತಿಲ್ಲ. ಈ ಕಾಂಟಿನೆಂಟಲ್ ಈವೆಂಟ್​ನಲ್ಲಿ ಒಂದಿಲ್ಲೊಂದು ತಗಾದೆಯೊಂದಿಗೆ ಎಸಿಸಿ (ACC) ಹಾಗೂ ಬಿಸಿಸಿಐ (BCCI) ವಿರುದ್ಧ ಮುಗಿಬೀಳುತ್ತಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ಹೊಸ ಬೇಡಿಕೆಯೊಂದನ್ನು ಎಸಿಸಿ ಮುಂದಿಟ್ಟಿದ್ದು, ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಪಂದ್ಯಗಳಿಗೆ ಪರಿಹಾರ ನೀಡುವಂತೆ ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ (Zaka Ashraf) ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ (Jay Shah) ಅವರಿಗೆ ಮೇಲ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಡಿಮೆ ಟಿಕೆಟ್ ಮಾರಾಟವಾಗಿದೆ

ಶ್ರೀಲಂಕಾದಲ್ಲಿ ನಿರಂತರ ಮಳೆಯ ಕಾರಣ, ನಿರೀಕ್ಷೆಯಂತೆ ಕಡಿಮೆ ಟಿಕೆಟ್ ಮಾರಾಟವಾಗಿದೆ. ಹೀಗಾಗಿ ಆತಿಥ್ಯದ ಹಕ್ಕು ಹೊಂದಿರುವ ಪಾಕ್ ಮಂಡಳಿಗೆ ಎಸಿಸಿ ಪರಿಹಾರ ನೀಡಬೇಕು ಎಂದು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಜಿಯೋಟಿವಿಯಲ್ಲಿನ ವರದಿಯ ಪ್ರಕಾರ, ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್, ಎಸಿಸಿ ಅಧ್ಯಕ್ಷರಾದ ಜಯ್ ಶಾ ಅವರಿಗೆ ಮೇಲ್ ಕಳುಹಿಸಿದ್ದು ಅದರಲ್ಲಿ, ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯಗಳಿಗೆ ಮಳೆ ಅಡ್ಡಿಯನ್ನುಂಟು ಮಾಡುವ ಮುನ್ಸೂಚನೆ ಇದ್ದರೂ ಕೊಲಂಬೊದಲ್ಲಿಯೇ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Asia Cup 2023: ಏಷ್ಯಾಕಪ್ ಆಯೋಜನೆಗೆ ಸಂಬಂಧಿಸಿದಂತೆ ಹೊಸ ಕ್ಯಾತೆ ತೆಗೆದ ಪಾಕಿಸ್ತಾನ..!

ನಮಗೆ ಸ್ಪಷ್ಟೀಕರಣ ಬೇಕಿದೆ

ವಾಸ್ತವವಾಗಿ ಈ ಮೊದಲು ಕೊಲಂಬೊದಲ್ಲಿನ ಹವಾಮಾನ ವೈಪರಿತ್ಯದಿಂದಾಗಿ ಏಷ್ಯಾಕಪ್​ನ ಸೂಪರ್ 4 ಪಂದ್ಯಗಳನ್ನು ಹಂಬಂಟೋಟಾದಲ್ಲಿ ನಡೆಸುವ ತೀರ್ಮಾನಕ್ಕೆ ಎಸಿಸಿ ಬಂದಿದೆ ವರದಿಯಾಗಿತ್ತು. ಆದಾಗ್ಯೂ, ತನ್ನ ನಿರ್ಧಾರವನ್ನು ಬದಲಿಸದ ಎಸಿಸಿ ಮೂಲತಃ ಯೋಜಿಸಿದಂತೆ ಪಂದ್ಯಗಳನ್ನು ಕೊಲಂಬೊದಲ್ಲಿ ನಡೆಸುವ ತೀರ್ಮಾನ ಕೈಗೊಂಡಿತು. ಈ ತೀರ್ಮಾನದಿಂದ ಮತ್ತಷ್ಟು ಅಸಮಾಧಾನಗೊಂಡಿರುವ ಪಿಸಿಬಿ ತನ್ನ ಮೇಲ್​ನಲ್ಲಿ, ಕೊಲಂಬೊದಲ್ಲಿಯೇ ಪಂದ್ಯಾವಳಿಯನ್ನು ಮುಂದುವರೆಸುವ ನಿರ್ಧಾರವನ್ನು ಯಾರು ತೆಗೆದುಕೊಂಡರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಈ ವಿಚಾರದಲ್ಲಿ ನಮಗೆ ಸ್ಪಷ್ಟೀಕರಣ ಬೇಕಿದೆ ಎಂದು ಆಗ್ರಹಿಸಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುತ್ತಿದ್ದರೆ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಿವೆ. ಆದಾಗ್ಯೂ, ಪಿಸಿಬಿ ಪಂದ್ಯಾವಳಿಯ ಅಧಿಕೃತ ಅತಿಥೇಯವಾಗಿರುವುದರಿಂದ ಪಂದ್ಯಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ.

ಎರಡೂ ಪಂದ್ಯಗಳಿಗೂ ಮಳೆ ಅಡ್ಡಿ

ಏಷ್ಯಾಕಪ್‌ನಲ್ಲಿ ಭಾರತ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಿಗೂ ಮಳೆ ಅಡ್ಡಿಯುಂಟು ಮಾಡಿದೆ. ನೇಪಾಳ ವಿರುದ್ಧ ಪಂದ್ಯವನ್ನು ಭಾರತ ಡಕ್‌ವರ್ತ್ ಲೂಯಿಸ್ ವಿಧಾನದ ಪ್ರಕಾರ 10 ವಿಕೆಟ್‌ಗಳಿಂದ ಜಯಗಳಿಸಿದರೆ, ಪಾಕಿಸ್ತಾನದ ವಿರುದ್ಧದ ಪಂದ್ಯವು ಮಳೆಯಿಂದಾಗಿ ಸಂಪೂರ್ಣವಾಗಿ ರದ್ದಾಗಿತ್ತು. ಇದೀಗ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ. ಆದರೆ ಆ ಪಂದ್ಯಕ್ಕೂ ಮಳೆ ಅಡ್ಡಿಯನ್ನುಂಟು ಮಾಡಲಿದೆ ಎಂದು ಹವಾಮಾನ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Thu, 7 September 23