ಬಿಸಿಸಿಐ ಮುಂದಿನ ಐದು ವರ್ಷಗಳ ಐಪಿಎಲ್ಗಾಗಿ ಭರ್ಜರಿ ತಯಾರಿಯಲ್ಲಿದೆ. ಈಗಾಗಲೇ 2023 ರಿಂದ 2027ರವರೆಗಿನ ಐಪಿಎಲ್ ಮೀಡಿಯಾ ರೈಟ್ಸ್ ಅನ್ನು ಬರೋಬ್ಬರಿ 48,390 ಕೋಟಿಗೆ ಮಾರಾಟ ಮಾಡಿದೆ. ಇತ್ತ ಐಪಿಎಲ್ನಲ್ಲಿ ಹರಿದು ಬಂದಿರುವ ಕೋಟಿ ಆದಾಯ ನೋಡಿ ಎಲ್ಲಾ ಕ್ರಿಕೆಟ್ ಮಂಡಳಿಗಳು ದಂಗಾಗಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಐಪಿಎಲ್ ಸೀಸನ್ ಅನ್ನು ಎರಡೂವರೆ ತಿಂಗಳುಗಳ ಕಾಲ ನಡೆಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಇದಕ್ಕಾಗಿ ಇತರೆ ಕ್ರಿಕೆಟ್ ಮಂಡಳಿ ಜೊತೆ ಕೂಡ ಮಾತುಕತೆ ನಡೆಸಲಿದ್ದು, ವಿದೇಶಿ ಆಟಗಾರರು ಸಂಪೂರ್ಣ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಎಲ್ಲಾ ಪ್ಲ್ಯಾನ್ಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಆದರೆ ಇತ್ತ ಜಯ್ ಶಾ ಎರಡೂವರೆ ತಿಂಗಳು ಐಪಿಎಲ್ ನಡೆಯಲಿದೆ ಎಂದು ಘೋಷಿಸುತ್ತಿದ್ದಂತೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಚಿಂತೆಗೀಡಾಗಿದೆ. ಏಕೆಂದರೆ ಐಪಿಎಲ್ ಎರಡೂವರೆ ತಿಂಗಳು ನಡೆದರೆ ಪ್ರಮುಖ ದೇಶಗಳ ತಂಡಗಳು ಸರಣಿ ಆಡುವುದು ಅನುಮಾನ. ಏಕೆಂದರೆ ಐಪಿಎಲ್ಗಾಗಿ ವಿಶೇಷ ಸಮಯವಕಾಶವನ್ನು ನೀಡಲು ಎಲ್ಲಾ ಕ್ರಿಕೆಟ್ ಮಂಡಳಿಗಳು ಮುಂದಾಗುತ್ತಿದೆ. ಇನ್ನು ಸರಣಿ ಆಡಿದರೂ 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಲಿದೆ. ಇದರಿಂದ ತಮ್ಮ ಆದಾಯಕ್ಕೆ ಕುತ್ತು ಬರಲಿದೆ ಎಂಬ ಚಿಂತೆ ಪಾಕ್ ಕ್ರಿಕೆಟ್ ಮಂಡಳಿಗೆ ಶುರುವಾಗಿದೆ.
ಐಪಿಎಲ್‌ಗೆ ಸಂಬಂಧಿಸಿದಂತೆ ಜಯ್ ಶಾ ಅವರ ಹೇಳಿಕೆಯಿಂದ ಪಾಕ್ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಒಳಗಾಗುವುದು ಸ್ಪಷ್ಟ. ಏಕೆಂದರೆ ಐಪಿಎಲ್ನಲ್ಲಿ ಪಾಕ್ ಆಟಗಾರರು ಕಾಣಿಸಿಕೊಳ್ಳುತ್ತಿಲ್ಲ. ಮತ್ತೊಂದೆಡೆ ವಿಶ್ವದ ಸ್ಟಾರ್ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸುತ್ತಾರೆ. ಒಂದು ವೇಳೆ ಎರಡೂವರೆ ತಿಂಗಳು ಐಪಿಎಲ್ ನಡೆದರೆ, ಪಾಕಿಸ್ತಾನ್ ತಂಡಕ್ಕೆ ಪ್ರಮುಖ ಸರಣಿಗಳು ಕೈ ತಪ್ಪಬಹುದು. ಅಥವಾ ಬೇರೆ ಕ್ರಿಕೆಟ್ ಮಂಡಳಿಗಳು 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸಬಹುದು. ಇದರಿಂದ ಪಾಕ್ ಸರಣಿಗಳ ಮೇಲೆ ಆಸಕ್ತಿ ಕಡಿಮೆಯಾಗಲಿದೆ.
ಅಷ್ಟೇ ಅಲ್ಲದೆ ಪ್ರಮುಖ ಆಟಗಾರರು ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ದೀರ್ಘಾವಧಿಯ ಲೀಗ್ ಆಗಿರುವುದರಿಂದ ಐಪಿಎಲ್ ಮುಗಿಯುತ್ತಿದ್ದಂತೆ ಆಟಗಾರರು ತಮ್ಮ ರಾಷ್ಟ್ರ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸ್ಟಾರ್ ಆಟಗಾರರು ಭಾಗವಹಿಸುವುದು ಕೂಡ ಅನುಮಾನ. ಇದೇ ಕಾರಣದಿಂದ ಬಿಸಿಸಿಐ ನಡೆಯನ್ನು ಪ್ರಶ್ನಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಜುಲೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪಾಕಿಸ್ತಾನವು ಈ ವಿಷಯವನ್ನು ಪ್ರಸ್ತಾಪಿಸುತ್ತದೆ. ಪ್ರಸ್ತುತ ಪಾಕಿಸ್ತಾನ ಮಂಡಳಿಯು ಬರುತ್ತಿರುವ ಆದಾಯದಿಂದ ಸಂತೋಷವಾಗಿದೆ. ಆದರೆ ಐಪಿಎಲ್‌ನ ಪ್ರತಿ ಸೀಸನ್‌ನ ಮೂಲಕ ಬಿಸಿಸಿಐ ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಕಟ್ಟಿಹಾಕಲು ಯೋಜಿಸುತ್ತಿದೆ. ಇದರಿಂದ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಡ್ಡಿಯಾಗಲಿದೆ. ಹೀಗಾಗಿ ಬಿಸಿಸಿಐ ನಡೆಯನ್ನು ಐಸಿಸಿ ಸಭೆಯಲ್ಲಿ ಪ್ರಶ್ನಿಸುವುದಾಗಿ ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ ವಿಶ್ವ ಮಟ್ಟದ ನಂಬರ್ 1 ಕ್ರಿಕೆಟ್ ಟೂರ್ನಿಯಾಗಿ ಮುನ್ನಡೆಯುತ್ತಿದ್ದಂತೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಆದಾಯದ ಚಿಂತೆ ಶುರುವಾಗಿದೆ. ಅದರಲ್ಲೂ ಎರಡೂವರೆ ತಿಂಗಳು ಐಪಿಎಲ್ ನಡೆದರೆ ಸ್ಟಾರ್ ಆಟಗಾರರಿಲ್ಲದೆ ಪಾಕಿಸ್ತಾನ್ ಸೂಪರ್ ಲೀಗ್ ನೆಲಕಚ್ಚುವ ಭೀತಿ ಶುರುವಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.