Phil Salt: ಸಾಲ್ಟ್ ಅಬ್ಬರಕ್ಕೆ ರಿಝ್ವಾನ್ ವಿಶ್ವ ದಾಖಲೆ ಉಡೀಸ್..!
Phil Salt Records: 4ನೇ ಪಂದ್ಯದಲ್ಲಿ 57 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 119 ರನ್ ಸಿಡಿಸಿದ್ದರು. ಇನ್ನು ಕೊನೆಯ ಟಿ20 ಪಂದ್ಯದಲ್ಲಿ 38 ರನ್ಗಳ ಕೊಡುಗೆ ನೀಡಿದ್ದರು. ಇದರೊಂದಿಗೆ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಸಾಲ್ಟ್ ಪಾಲಾಯಿತು.
ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ (Phil Salt) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತ್ಯಧಿಕ ರನ್ಗಳನ್ನು ಪೇರಿಸುವ ಮೂಲಕ ಎಂಬುದು ವಿಶೇಷ. ವಿಂಡೀಸ್ ವಿರುದ್ಧದ ಈ ಸರಣಿಯ ಮೊದಲ ಪಂದ್ಯದಲ್ಲಿ ಫಿಲ್ ಸಾಲ್ಟ್ 40 ರನ್ ಬಾರಿಸಿ ಮಿಂಚಿದ್ದರು. ಇನ್ನು 2ನೇ ಟಿ20 ಪಂದ್ಯದಲ್ಲಿ 25 ರನ್ ಬಾರಿಸಿದ್ದರು. ಹಾಗೆಯೇ 3ನೇ ಪಂದ್ಯದಲ್ಲಿ ಕೇವಲ 56 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 109 ರನ್ ಬಾರಿಸಿ ಅಬ್ಬರಿಸಿದ್ದರು.
ಹಾಗೆಯೇ 4ನೇ ಪಂದ್ಯದಲ್ಲಿ 57 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 119 ರನ್ ಸಿಡಿಸಿದ್ದರು. ಇನ್ನು ಕೊನೆಯ ಟಿ20 ಪಂದ್ಯದಲ್ಲಿ 38 ರನ್ಗಳ ಕೊಡುಗೆ ನೀಡಿದ್ದರು. ಇದರೊಂದಿಗೆ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಸಾಲ್ಟ್ ಪಾಲಾಯಿತು.
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಪಾಕಿಸ್ತಾನ್ ತಂಡದ ಆರಂಭಿಕ ಆಟಗಾರ ಮೊಹಮ್ಮದ್ ರಿಝ್ವಾನ್ ಹೆಸರಿನಲ್ಲಿತ್ತು. 2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ರಿಝ್ವಾನ್ 6 ಇನಿಂಗ್ಸ್ ಆಡಿದ್ದರು. ಈ ವೇಳೆ ಒಟ್ಟು 316 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಫಿಲ್ ಸಾಲ್ಟ್ ಒಟ್ಟು 331 ರನ್ ಬಾರಿಸಿದ್ದಾರೆ. ಈ ಮೂಲಕ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಯನ್ನು ಫಿಲ್ ಸಾಲ್ಟ್ ತಮ್ಮದಾಗಿಸಿಕೊಂಡಿದ್ದಾರೆ.
ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿ ಇಲ್ಲಿದೆ:
- ಫಿಲ್ ಸಾಲ್ಟ್: 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ 331 ರನ್ ಕಲೆಹಾಕಿದ್ದಾರೆ.
- ಮೊಹಮ್ಮದ್ ರಿಝ್ವಾನ್: 2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ 6 ಇನಿಂಗ್ಸ್ಗಳ ಮೂಲಕ ಒಟ್ಟು 316 ರನ್ ಕಲೆಹಾಕಿದ್ದರು.
- ಮಾರ್ಕ್ ಚಾಪ್ಮನ್: 2023 ರಲ್ಲಿ ಪಾಕಿಸ್ತಾನ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಝಿಲೆಂಡ್ ಆಟಗಾರ ಮಾರ್ಕ್ ಚಾಪ್ಮನ್ ಒಟ್ಟು 290 ರನ್ ಕಲೆಹಾಕಿದ್ದರು.
- ಬಾಬರ್ ಆಝಂ: 2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 7 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ್ದ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಒಟ್ಟು 285 ರನ್ ಕಲೆಹಾಕಿದ್ದರು.
ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!
ಕಿಂಗ್ ಕೊಹ್ಲಿ ದಾಖಲೆ:
ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಿಂಗ್ ಕೊಹ್ಲಿ ಒಟ್ಟು 231 ರನ್ ಕಲೆಹಾಕಿದ್ದರು. ಈ ಮೂಲಕ ಭಾರತದ ಪರ ಟಿ20 ಸರಣಿಯಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ.
Published On - 9:58 am, Sat, 23 December 23