2025ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಟೀಮ್ ಇಂಡಿಯಾ ಹಿಂದೆ ಸರಿಯುವ ಸಾಧ್ಯತೆಯಿದೆ. ಅಲ್ಲದೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ಅಥವಾ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಬಿಸಿಸಿಐ ಮನವಿ ಮಾಡುವ ಸಾಧ್ಯತೆ ಹೆಚ್ಚಿದೆ.
ಆದರೆ ಹೈಬ್ರಿಡ್ ಮಾದರಿಯಲ್ಲಿ ಅಥವಾ ತಟಸ್ಥ ಸ್ಥಳಗಳಲ್ಲಿ ಟೂರ್ನಿ ನಡೆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯಕ್ಕೆ ಹೊಡೆತ ಬೀಳಲಿದೆ. ಹೀಗಾಗಿಯೇ ಇದೀಗ ಪಿಸಿಬಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆತರಲು ಹೊಸ ಪ್ಲ್ಯಾನ್ ರೂಪಿಸಿದೆ.
ಭಾರತ ತಂಡವು ಪಾಕಿಸ್ತಾನಕ್ಕೆ ತೆರಳದಿರಲು ಮುಖ್ಯ ಕಾರಣ ಭದ್ರತಾ ಕಾಳಜಿ. ಅದರಲ್ಲೂ ಪಾಕ್ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಸಂಪೂರ್ಣ ಸುರಕ್ಷತೆ ಸಿಗುವ ಬಗ್ಗೆ ಖಾತ್ರಿಯಿಲ್ಲ. ಹೀಗಾಗಿ ಭಾರತ ತಂಡವು ಪಾಕ್ಗೆ ತೆರಳುವ ಸಾಧ್ಯತೆ ತುಂಬಾ ಕಡಿಮೆ. ಆದರೆ ಈ ಸಮಸ್ಯೆಯನ್ನು ಪರಿಹಾರ ಕಾಣಲು ಪಾಕ್ ಕ್ರಿಕೆಟ್ ಮಂಡಳಿ ಹೊಸ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್ ಬಗ್ಗೆ ಬಿಸಿಸಿಐಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಈ ಪತ್ರದಲ್ಲಿ ಭಾರತ ತಂಡವು ಪಾಕಿಸ್ತಾನದಲ್ಲಿ ಉಳಿದುಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ. ಅಂದರೆ ಪ್ರತಿ ಪಂದ್ಯಕ್ಕೆ ಪಾಕಿಸ್ತಾನಕ್ಕೆ ತೆರಳಿ, ಮ್ಯಾಚ್ ಮುಗಿದ ಬಳಿಕ ಭಾರತಕ್ಕೆ ಹಿಂತಿರುಗಬಹುದು. ಇದಕ್ಕಾಗಿ ಭಾರತ ತಂಡದ ಪಂದ್ಯಗಳನ್ನು ಲಾಹೋರ್ನಲ್ಲಿ ಆಯೋಜಿಸುವುದಾಗಿಯೂ ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಏಕೆಂದರೆ ಲಾಹೋರ್ ನಗರವು ಭಾರತದ ಗಡಿಗೆ ಹತ್ತಿರದಲ್ಲಿದೆ. ಅದರಲ್ಲೂ ಪಂಜಾಬ್ನ ಚಂಡೀಗಢ ಹಾಗೂ ಲಾಹೋರ್ ನಡುವಣ ದೂರ ಕೇವಲ 246 ಕಿಲೋ ಮೀಟರ್ಗಳು ಮಾತ್ರ. ಅಲ್ಲದೆ ಲಾಹೋರ್ ಹಾಗೂ ಚಂಡೀಗಢ ನಗರಗಳಲ್ಲಿ ವಿಮಾನ ನಿಲ್ದಾಣಗಳಿವೆ.
ಹೀಗಾಗಿ ಭಾರತದ ಪಂದ್ಯಗಳನ್ನು ಲಾಹೋರ್ನಲ್ಲಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅದರಂತೆ ಭಾರತ ತಂಡವು ತನ್ನ ಪಂದ್ಯಗಳಿಗೆ ನೇರವಾಗಿ ಲಾಹೋರ್ಗೆ ಆಗಮಿಸಿ, ಮ್ಯಾಚ್ ಮುಗಿದ ಬಳಿಕ ಚಂಡೀಗಢ ಅಥವಾ ದೆಹಲಿಗೆ ತೆರಳಬಹುದು ಎಂದು ಪಿಸಿಬಿ ತಿಳಿಸಿದೆ.
ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಲ್ಲಿಸಿರುವ ಈ ಪ್ರಸ್ತಾವನೆಯನ್ನು ಬಿಸಿಸಿಐ ಒಪ್ಪಲಿದೆಯಾ ಎಂಬುದೇ ಈಗ ಕುತೂಹಲ. ಏಕೆಂದರೆ ಈ ಹಿಂದೆ ಬಿಸಿಸಿಐ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಬೇಕೆಂಬ ಬೇಡಿಕೆಯಿಟ್ಟಿದೆ ಎಂದು ವರದಿಯಾಗಿತ್ತು.
ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆದರೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಇಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಯೋಜನೆಗೊಳ್ಳಬಹುದು. ಹೀಗೆ ಒಂದು ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸುವುದನ್ನು ಹೈಬ್ರಿಡ್ ಮಾದರಿ ಎನ್ನಲಾಗುತ್ತದೆ.
ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಡಿಮ್ಯಾಂಡ್ ಮಾಡಬಹುದು. ಏಕೆಂದರೆ 2023 ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕ್ ಕ್ರಿಕೆಟ್ ಮಂಡಳಿ ಬಳಿಯಿತ್ತು. ಆದರೆ ಭಾರತ ತಂಡವು ಪಾಕ್ಗೆ ತೆರಳಲು ಹಿಂದೇಟು ಹಾಕಿದ್ದರಿಂದ ಟೂರ್ನಿಯನ್ನು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು.
ಅದರಂತೆ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ನ್ನು ಆಯೋಜಿಸಲಾಗಿತ್ತು. ಇಲ್ಲಿ ಭಾರತ ತಂಡವು ಫೈನಲ್ ಸೇರಿದಂತೆ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯನ್ನೂ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಬಿಸಿಸಿಐ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಶೂನ್ಯದೊಂದಿಗೆ ಶತಕ… ವಿಶೇಷ ದಾಖಲೆ ಬರೆದ ಸರ್ಫರಾಝ್ ಖಾನ್
ಇದೇ ಕಾರಣದಿಂದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಪಾಕ್ಗೆ ಬಂದು ಪಂದ್ಯ ಆಡಿ ಹೋಗಿ ಎಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಈ ಪ್ರಸ್ತಾವನೆಯನ್ನು ಬಿಸಿಸಿಐ ಒಪ್ಪಲಿದೆಯಾ ಕಾದು ನೋಡಬೇಕಿದೆ.