IND vs AUS: 9999 ರನ್​​ಗೆ ಔಟ್; ಸ್ಮಿತ್​ಗೆ ಮರೆಯಲಾಗದ ನೋವು ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

|

Updated on: Jan 05, 2025 | 3:05 PM

IND vs AUS: ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವೆ ಸಿಡ್ನಿಯಲ್ಲಿ ನಡೆದಿದ್ದ 5ನೇ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಪ್ರಸಿದ್ಧ್ ಕೃಷ್ಣ ಅವರು ಸ್ಟೀವ್ ಸ್ಮಿತ್ ಅವರನ್ನು ಕೇವಲ 4 ರನ್‌ಗಳಿಗೆ ಔಟ್ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಾಸ್ತವವಾಗಿ ಸ್ಮಿತ್​ಗೆ ಟೆಸ್ಟ್​ನಲ್ಲಿ 1000 ರನ್ ಪೂರೈಸಲು 5 ರನ್ ಬೇಕಿತ್ತು. ಆದರೆ 4 ರನ್​ಗಳಿಗೆ ಅವರನ್ನು ಔಟ್ ಮಾಡಿದ ಪ್ರಸಿದ್ಧ್, ಸ್ಮಿತ್​ 10000 ರನ್ ಪೂರೈಸದಂತೆ ತಡೆದಿದ್ದಾರೆ.

IND vs AUS: 9999 ರನ್​​ಗೆ ಔಟ್; ಸ್ಮಿತ್​ಗೆ ಮರೆಯಲಾಗದ ನೋವು ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಪ್ರಸಿದ್ಧ್ ಕೃಷ್ಣ
Follow us on

ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ 10 ವರ್ಷಗಳ ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಭಾರತ ನೀಡಿದ್ದ 162 ರನ್​ಗಳ ಗುರಿಯನ್ನು ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ನಾಲ್ಕು ವಿಕೆಟ್​ಗಳಲ್ಲಿ ಅನುಭವಿ ಸ್ಟೀವ್ ಸ್ಮಿತ್ ಅವರ ವಿಕೆಟ್ ಕೂಡ ಸೇರಿತ್ತು. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಮೊದಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಸ್ಮಿತ್ ಅವರ ವಿಕೆಟ್ ಪಡೆದರು. 4 ರನ್​ಗಳಿಗೆ ಸ್ಮಿತ್ ವಿಕೆಟ್ ಉರುಳಿಸಿದ ಪ್ರಸಿದ್ಧ್, ಈ ಮೂಲಕ ಅದೊಂದು ಐತಿಹಾಸಿಕ ಸಾಧನೆಗೆ ಅಡ್ಡಿಯಾದರು.

ಮೊದಲ 3 ವಿಕೆಟ್ ಉರುಳಿಸಿದ ಪ್ರಸಿದ್ಧ್

ಸಿಡ್ನಿ ಟೆಸ್ಟ್‌ನ ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಪ್ರಸಿದ್ಧ್ ಕೃಷ್ಣ ಆಸ್ಟ್ರೇಲಿಯಾದ ಮೊದಲ ಮೂರು ವಿಕೆಟ್‌ಗಳನ್ನು ಪಡೆದರು. ಅವರು ಸ್ಯಾಮ್ ಕೊನ್​ಸ್ಟಾಸ್, ಮಾರ್ನಸ್ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ಬಲಿಪಶುಗಳನ್ನಾಗಿ ಮಾಡಿದರು. ಆದರೆ ಸ್ಟೀವ್ ಸ್ಮಿತ್ ಅವರ ವಿಕೆಟ್ ಅವರಿಗೆ ಅತ್ಯಂತ ವಿಶೇಷವಾಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ 9 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಪ್ರಸಿದ್ಧ್ ಕೃಷ್ಣನಿಗೆ ಬಲಿಯಾದರು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿಯೂ ಸ್ಟೀವ್ ಸ್ಮಿತ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಇದೇ ಪ್ರಸಿದ್ಧ್ ಕೃಷ್ಣ.

ಈ ಸಾಧನೆ ಮಾಡಿದ ಮೊದಲ ವೇಗಿ

ಸಿಡ್ನಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದ ಸ್ಟೀವ್ ಸ್ಮಿತ್ ಮತ್ತೊಮ್ಮೆ ಟೆಸ್ಟ್‌ನಲ್ಲಿ ತಮ್ಮ 10,000 ರನ್‌ಗಳನ್ನು ಪೂರ್ಣಗೊಳಿಸುವುದನ್ನು ತಪ್ಪಿಸಿಕೊಂಡರು. ಸ್ಟೀವ್ ಸ್ಮಿತ್ ಟೆಸ್ಟ್‌ನಲ್ಲಿ 10 ಸಾವಿರ ರನ್‌ಗಳ ಗಡಿ ಮುಟ್ಟಲು ಇನ್ನೂ 1 ರನ್ ಅಗತ್ಯವಿತ್ತು. ಆದರೀಗ 9999 ರನ್​ಗಳಿಗೆ ಈ ಸರಣಿಯನ್ನು ಮುಗಿಸಿರುವ ಸ್ಮಿತ್, ಟೆಸ್ಟ್​ನಲ್ಲಿ 10000 ರನ್​ಗಳನ್ನು ಪೂರೈಸಲು ಮುಂದಿನ ಸರಣಿಯವರೆಗೂ ಕಾಯಬೇಕಾಗಿದೆ. ಇನ್ನು ಸ್ಮಿತ್​ರನ್ನು ಔಟ್ ಮಾಡುವ ಮೂಲಕ ಪ್ರಸಿದ್ಧ್ ಕೃಷ್ಣ ಅವರು 9999 ರನ್‌ಗಳಲ್ಲಿ ಬ್ಯಾಟ್ಸ್‌ಮನ್‌ ಒಬ್ಬನನ್ನು ಔಟ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಲಂಕಾ ವಿರುದ್ಧ ಸ್ಮಿತ್ ದಾಖಲೆ

ಸ್ಟೀವ್ ಸ್ಮಿತ್​ಗೂ ಮೊದಲು, ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಕೂಡ 9999 ಟೆಸ್ಟ್ ರನ್‌ ಕಲೆಹಾಕಿ ವಿಕೆಟ್ ಒಪ್ಪಿಸಿದ್ದರು. ಆದರೆ ಅವರು ರನೌಟ್ ಆಗಿದ್ದರಿಂದ ಯಾವುದೇ ಬೌಲರ್​ಗೆ ಅವರ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಸ್ಟೀವ್ ಸ್ಮಿತ್ ಕ್ಯಾಚಿತ್ತು ಔಟಾದ ಕಾರಣದಿಂದ ಪ್ರಸಿದ್ಧ್ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಆಸ್ಟ್ರೇಲಿಯಾ ಈಗ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಹೀಗಾಗಿ ಸ್ಟೀವ್ ಸ್ಮಿತ್ ಈ ಸರಣಿಯಲ್ಲಿ ತಮ್ಮ 10 ಸಾವಿರ ಟೆಸ್ಟ್ಗಳನ್ನು ಪೂರ್ಣಗೊಳಿಸುವ ಸಾಧ್ಯತೆಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:00 pm, Sun, 5 January 25