
2026 ರ ಐಪಿಎಲ್‌ನಲ್ಲಿ (IPL 2026) ಲಕ್ನೋ ಸೂಪರ್‌ಜೈಂಟ್ಸ್ (LSG) ತಂಡದ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ. ಆಡಿರುವ 10 ಪಂದ್ಯಗಳಲ್ಲಿ ತಂಡ 7 ಪಂದ್ಯಗಳನ್ನು ಸೋತು, ಪ್ಲೇಆಫ್ ರೇಸ್ನಿಂದ ಭಾಗಶಃ ಹೊರಬಿದ್ದಿದೆ. ಆದಾಗ್ಯೂ ತಂಡದ ಪರ ಯುವ ವೇಗದ ಬೌಲರ್ ಪ್ರಿನ್ಸ್ ಯಾದವ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಪ್ರಿನ್ಸ್ ಯಾದವ್ ಕಡಿಮೆ ಎಕಾನಮಿ ರೇಟ್ನಲ್ಲಿ ರನ್ ಬಿಟ್ಟುಕೊಡುವುದರ ಜೊತೆಗೆ ಅವಶ್ಯಕ ಸಮಯದಲ್ಲಿ ವಿಕೆಟ್‌ಗಳನ್ನು ತೆಗೆದುಕೊಟ್ಟಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಗೆಲುವು ಸಾಧಿಸುವಲ್ಲಿ ಪ್ರಿನ್ಸ್ ಯಾದವ್ (Prince Yadav) ಅವರ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು. ಈ ಪಂದ್ಯದಲ್ಲಿ ಅವರು ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದ್ದರು.
ಹೀಗಾಗಿ ಈ ಆವೃತ್ತಿಲ್ಲಿ ಅಮೋಘ ಪ್ರದರ್ಶನ ನೀಡಿರುವ ಪ್ರಿನ್ಸ್ ಯಾದವ್ಗೆ ಇಷ್ಟರಲ್ಲೇ ಟೀಂ ಇಂಡಿಯಾದ ಕದ ತೆರೆಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿರುವಂತಹ ಬೌಲರ್ ಎನಿಸಿಕೊಂಡಿರುವ ಪ್ರಿನ್ಸ್ ಯಾದವ್ ಟೀಂ ಇಂಡಿಯಾದ ಮುಂದಿನ ಟಿ20 ಸರಣಿಯಲ್ಲೇ ತಂಡದ ಪರ ಆಡುವುದನ್ನು ಕಾಣಬಹುದು. ಆದಾಗ್ಯೂ ಪ್ರಿನ್ಸ್ ಯಾದವ್ ಟಿ20 ತಂಡದಲ್ಲಿ ಯಾರ ಸ್ಥಾನವನ್ನು ತುಂಬಲಿದ್ದಾರೆ ಎಂಬ ಪ್ರಶ್ನೆ ಬಂದಾಗ ಅದಕ್ಕೆ ಉತ್ತರವೂ ಸಿದ್ಧವಾಗಿದ್ದು, ಅವರು ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, 2026 ರ ಟಿ20 ವಿಶ್ವಕಪ್ ಬಳಿಕ, ಬಿಸಿಸಿಐ ಮತ್ತು ತಂಡದ ಆಡಳಿತವು ಜಸ್ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಲು ಮುಂದಾಗಿದೆ. ಅದರ ಪ್ರಕಾರ ಮುಂದಿನ 18 ರಿಂದ 24 ತಿಂಗಳುಗಳ ಕಾಲ ಬುಮ್ರಾ ಅವರಿಗೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ವಿಶ್ರಾಂತಿ ನೀಡಿ, ಟೆಸ್ಟ್ ಕ್ರಿಕೆಟ್ (ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್) ಮತ್ತು 2027 ರ ಏಕದಿನ ವಿಶ್ವಕಪ್‌ನತ್ತ ಗಮನಹರಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಹೀಗಾಗಿ ಪ್ರಮುಖವಲ್ಲದ ಏಕದಿನ ಸರಣಿಗಳಿಂದಲೂ ಬುಮ್ರಾಗೆ ವಿಶ್ರಾಂತಿ ನೀಡಬಹುದು ಎನ್ನಲಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ, ಜಸ್ಪ್ರೀತ್ ಬುಮ್ರಾ ಬದಲಿಗೆ ಪ್ರಿನ್ಸ್ ಯಾದವ್ ಅವರನ್ನು ಭಾರತ ಟಿ20 ತಂಡದಲ್ಲಿ ಆಡಿಸಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಮೇಲೆ ಹೇಳಿದಂತೆ 2026 ರ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಪ್ರಿನ್ಸ್ ಯಾದವ್ ಶೀಘ್ರದಲ್ಲೇ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಬಹುದು. ಇದು ಪ್ರಿನ್ಸ್ ಯಾದವ್ ಅವರ ಎರಡನೇ ಐಪಿಎಲ್ ಸೀಸನ್ ಆಗಿದ್ದು, ಈ ಸೀಸನ್ನಲ್ಲಿ ಅವರು ಲಕ್ನೋ ತಂಡದ ಪರ 10 ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದಾರೆ. ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Fri, 8 May 26