ಟೀಮ್ ಇಂಡಿಯಾ (Team India) ಆಟಗಾರ ಪೃಥ್ವಿ ಶಾ (Prithvi Shaw) ಹಾಗೂ ಅಭಿಮಾನಿಗಳ ನಡುವಣ ಸೆಲ್ಫಿ ವಿವಾದವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಪೃಥ್ವಿ ಶಾ ತಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೆಲವು ಕಿಡಿಗೇಡಿಗಳು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ದೂರು ದಾಖಲಿಸಿದ್ದರು. ಅದರಂತೆ 8 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಪೃಥ್ವಿ ಶಾ ವಿರುದ್ಧ ಹಲ್ಲೆಗೆ ಮುಂದಾಗಿರುವ ಯುವತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಪೃಥ್ವಿ ಶಾ ಅವರೊಂದಿಗೆ ಕೆಲ ಅಭಿಮಾನಿಗಳು ಸೆಲ್ಫಿಗೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರಿಗೆ ಸೆಲ್ಫಿ ನೀಡಿದ್ದಾರೆ. ಇದರ ನಂತರ ಇನ್ನಷ್ಟು ಮಂದಿ ಸೆಲ್ಫಿ ಕ್ಲಿಕ್ಕಿಸಲು ಕೇಳಿಕೊಂಡಿದ್ದಾರೆ.
ಈ ವೇಳೆ ಪೃಥ್ವಿ ಶಾ ನಿರಾಕರಿಸಿದ್ದರು. ಇದಾದ ಬಳಿಕ ಬೇಸ್ಬಾಲ್ ಬ್ಯಾಟ್ ಮೂಲಕ ಕಿಡಿಗೇಡಿಗಳ ಗುಂಪೊಂದು ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾಗಿದೆ. ಇತ್ತ ವಿಡಿಯೋದಲ್ಲೂ ಪೃಥ್ವಿ ಶಾ ಯುವತಿಯ ಕೈಯಿಂದ ಬೇಸ್ಬಾಲ್ ಬ್ಯಾಟ್ ಕಸಿದುಕೊಳ್ಳಲು ಯತ್ನಿಸುತ್ತಿರುವುದು ಕಾಣಬಹುದು. ಈ ವಿಡಿಯೋದಲ್ಲಿರುವ ಯುವತಿಯನ್ನು ಸಪ್ನಾ ಗಿಲ್ ಎಂದು ಗುರುತಿಸಲಾಗಿದೆ.
ಇದೀಗ ಯುವತಿಯು ಪೃಥ್ವಿ ಶಾ ತನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಪೃಥ್ವಿ ಶಾ ಆರೋಪದಂತೆ, ಸೆಲ್ಫಿ ನೀಡದಿರುವ ಕಾರಣ ಆರೋಪಿಗಳು ಅವರನ್ನು ಹಿಂಬಾಲಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಸಪ್ನಾ ಗಿಲ್ ಅವರ ವಕೀಲ ಅಲಿ ಕಾಸಿಫ್ ಖಾನ್ ದೇಶಮುಖ್ ಪ್ರಕಾರ, ಪೊಲೀಸರು ನನ್ನ ಕಕ್ಷಿದಾರರಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Hustle video of #Cricketer #Prithvishaw & #influencer #Sapnagill outside Barrel mansion club in vile parle east #Mumbai, it is said that related to click photo with cricketer later whole fight started. @PrithviShaw @MumbaiPolice @DevenBhartiIPS @CPMumbaiPolice @BCCI pic.twitter.com/6LIpiWGkKg
— Mohsin shaikh ?? (@mohsinofficail) February 16, 2023
8 ಜನರ ವಿರುದ್ಧ ಪ್ರಕರಣ ದಾಖಲು:
ಮುಂಬೈನ ಓಶಿವಾರ ಪೊಲೀಸ್ ಠಾಣಾ ಮಾಹಿತಿ ಪ್ರಕಾರ, ಪೃಥ್ವಿ ಶಾ ನೀಡಿದ ದೂರಿನ ಅನ್ವಯ 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ಆರೋಪಿಗಳು ಪೃಥ್ವಿ ಶಾ ಅವರಲ್ಲಿ ಸೆಲ್ಫಿಗಾಗಿ ಒತ್ತಾಯಿಸಿದ್ದರು. ಈ ವೇಳೆ ಅವರ ಸ್ನೇಹಿತ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಇದಾದ ನಂತರ ಮ್ಯಾನೇಜರ್ ಆರೋಪಿಗಳನ್ನು ಅಲ್ಲಿಂದ ಹೊಟೇಲ್ನಿಂದ ಹೊರಗೆ ಕಳುಹಿಸಿದ್ದಾರೆ.
ಇದರಿಂದ ಕೋಪಗೊಂಡಿದ್ದ ಆರೋಪಿಗಳು, ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಕ್ಲಬ್‌ನಿಂದ ಹೊರಬರಲು ಕಾಯುತ್ತಿದ್ದರು. ಆ ಬಳಿಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಬೇಸ್ ಬಾಲ್ ಬ್ಯಾಟ್ನಿಂದ ಕಾರಿನ ಗಾಜು ಒಡೆದಿದ್ದಾರೆ. ಈ ಸಂಬಂಧ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
Published On - 7:09 pm, Thu, 16 February 23