DPL 2025: ಸಿಕ್ಸರ್​ಗಳಿಂದಲೇ ಅರ್ಧಶತಕ; ಸ್ಫೋಟಕ ಶತಕ ಬಾರಿಸಿದ ಪ್ರಿಯಾಂಶ್ ಆರ್ಯ

Priyansh Arya's Century in Delhi Premier League: ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ್ದ ಯುವ ಆಟಗಾರ ಪ್ರಿಯಾಂಶ್ ಆರ್ಯ, ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ 56 ಎಸೆತಗಳಲ್ಲಿ ಅದ್ಭುತ 111 ರನ್‌ಗಳ ಶತಕ ಬಾರಿಸಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಶತಕ ಬಾರಿಸಿದ್ದ ಪ್ರಿಯಾಂಶ್, ಈ ಲೀಗ್‌ನಲ್ಲಿಯೂ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ.

DPL 2025: ಸಿಕ್ಸರ್​ಗಳಿಂದಲೇ ಅರ್ಧಶತಕ; ಸ್ಫೋಟಕ ಶತಕ ಬಾರಿಸಿದ ಪ್ರಿಯಾಂಶ್ ಆರ್ಯ
Priyansh Arya

Updated on: Aug 08, 2025 | 5:18 PM

ತನ್ನ ಹೊಡಿಬಡಿ ಆಟದ ಮೂಲಕ ಐಪಿಎಲ್‌ನಲ್ಲಿ (IPL) ಸಂಚಲನ ಮೂಡಿಸಿದ್ದ ಯುವ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ (Priyansh Arya), ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್​ಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2025 ರ ಐಪಿಎಲ್​ನಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸ್ಫೋಟಕ ಶತಕ ಬಾರಿಸಿ ಸದ್ದು ಮಾಡಿದ್ದ ಪ್ರಿಯಾಂಶ್ ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ದೆಹಲಿ ಪ್ರೀಮಿಯರ್ ಲೀಗ್​ನಲ್ಲಿಯೂ (Delhi Premier League) ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ಈ ಲೀಗ್‌ನಲ್ಲಿ ಔಟರ್ ದೆಹಲಿ ವಾರಿಯರ್ಸ್ ಪರ ಆಡುತ್ತಿರುವ ಪ್ರಿಯಾಂಶ್, ಈಸ್ಟ್ ದೆಹಲಿ ರೈಡರ್ಸ್ ತಂಡದ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದರು.

ಕೇವಲ 52 ಎಸೆತಗಳಲ್ಲಿ ಶತಕ

ಈಸ್ಟ್ ಡೆಲ್ಲಿ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಕೇವಲ 56 ಎಸೆತಗಳಲ್ಲಿ 111 ರನ್ ಚಚ್ಚಿದರು. ಅವರು ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಕೇವಲ 52 ಎಸೆತಗಳಲ್ಲಿ ಪ್ರಿಯಾಂಶ್ ತಮ್ಮ ಶತಕವನ್ನು ಪೂರೈಸಿದರು. ವಾಸ್ತವವಾಗಿ ಪ್ರಿಯಾಂಶ್ ಆರ್ಯ ಈ ಟೂರ್ನಮೆಂಟ್‌ನ ಮೊದಲ ಮೂರು ಪಂದ್ಯಗಳಲ್ಲಿ ದೊಡ್ಡ ರನ್ ಗಳಿಸಲು ವಿಫಲರಾಗಿದ್ದರು ಆದರೆ ನಿರ್ಣಾಯಕ ಸಮಯದಲ್ಲಿ ಫಾರ್ಮ್‌ಗೆ ಮರಳಿರುವ ಪ್ರಿಯಾಂಶ್ ಶತಕ ಬಾರಿಸಿದ್ದಾರೆ. ಅವರ ಈ ಇನ್ನಿಂಗ್ಸ್‌ನಿಂದಾಗಿ, ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 231 ರನ್ ಗಳಿಸಿತು. ಪ್ರಿಯಾಂಶ್ ಆರ್ಯ ಜೊತೆಗೆ, ಕರಣ್ ಗಾರ್ಗ್ ಕೂಡ 43 ರನ್‌ಗಳ ಕೊಡುಗೆ ನೀಡಿದರು.

ಈ ಪಂದ್ಯಕ್ಕೂ ಮೊದಲು ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಪ್ರಿಯಾಂಶ್ ಒಟ್ಟು 50 ರನ್ ಗಳಿಸಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಆಡುವುದರೊಂದಿಗೆ ತನ್ನ ಫಾರ್ಮ್‌ ಕೂಡ ಕಂಡುಕೊಂಡಿದ್ದಾರೆ. ಈ ಮೂಲಕ ಪ್ರಿಯಾಂಶ್ ಈ ಲೀಗ್‌ನಲ್ಲಿ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಿಯಾಂಶ್​​ಗಿಂತ ಮೊದಲು ಆಯುಷ್ ದಾಸೋಜ ಮತ್ತು ಯಶ್ ಧುಲ್ ಶತಕದ ಇನ್ನಿಂಗ್ಸ್ ಆಡಿದ್ದಾರೆ.

ಪಂದ್ಯ ಹೀಗಿತ್ತು

ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ಮೊದಲ ಓವರ್‌ನಲ್ಲಿಯೇ ಆರಂಭಿಕ ಆಟಗಾರ ಸನತ್ ಅವರ ವಿಕೆಟ್ ಕಳೆದುಕೊಂಡಿತು. ಇದರ ನಂತರ ಜೊತೆಯಾದ ಕರಣ್ ಗಾರ್ಗ್ ಮತ್ತು ಪ್ರಿಯಾಂಶ್ ನಡುವೆ ಎರಡನೇ ವಿಕೆಟ್‌ಗೆ 92 ರನ್‌ಗಳ ಪಾಲುದಾರಿಕೆ ಇತ್ತು. ಕರಣ್ 24 ಎಸೆತಗಳಲ್ಲಿ 43 ರನ್ ಗಳಿಸಿ ಔಟಾದರೆ, ಮೋಹಿತ್ ಕೇವಲ ಎರಡು ರನ್ ಗಳಿಸಲು ಸಾಧ್ಯವಾಯಿತು. ಕೇಶವ್ 13 ಎಸೆತಗಳಲ್ಲಿ 17 ರನ್ ಗಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಸಿಂಗ್ ಖಾತೆ ತೆರೆಯದೆಯೇ ರನ್ ಔಟ್ ಆದರು. ಇದಾದ ನಂತರ ಪ್ರಿಯಾಂಶ್ 111 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಯ ಓವರ್‌ನಲ್ಲಿ ಹರ್ಷ್ ತ್ಯಾಗಿ 8 ಎಸೆತಗಳಲ್ಲಿ 16 ರನ್ ಗಳಿಸಿ ರನೌಟ್ ಆದರು.

IPL 2025: ಪ್ರಿಯಾಂಶ್ ಸಿಡಿಲಬ್ಬರದ ಬ್ಯಾಟಿಂಗ್; ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ

ಪ್ರಿಯಾಂಶ್ ಐಪಿಎಲ್ ಪ್ರದರ್ಶನ

ಈ ಲೀಗ್​ಗೂ ಮೊದಲು 2025 ರ ಐಪಿಎಲ್​ನಲ್ಲಿ ಅಬ್ಬರಿಸಿದ್ದ ಪ್ರಿಯಾಂಶ್ ಪಂಜಾಬ್ ಕಿಂಗ್ಸ್ ಪರ ಆಡಿದ 17 ಪಂದ್ಯಗಳಲ್ಲಿ 27.95 ಸರಾಸರಿಯಲ್ಲಿ 475 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಸೇರಿದ್ದವು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಪ್ರಿಯಾಂಶ್ ಕೇವಲ 39 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ನಾಲ್ಕನೇ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ