ಚಾಂಪಿಯನ್ಸ್ ಟ್ರೋಫಿ ರಂಪದ ನಡುವೆ IPL vs PSL ಸಂಘರ್ಷ

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಅದರಂತೆ ಭಾರತ, ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ. ಇನ್ನು 2025ರ ಚಾಂಪಿಯನ್ಸ್​ ಟ್ರೋಫಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೈಯಲ್ಲಿದ್ದು, ಹೀಗಾಗಿ ಭಾರತ ತಂಡ ಪಾಕ್​ಗೆ ತೆರಳಲು ನಿರಾಕರಿಸಿದೆ.

ಚಾಂಪಿಯನ್ಸ್ ಟ್ರೋಫಿ ರಂಪದ ನಡುವೆ IPL vs PSL ಸಂಘರ್ಷ
IPL vs PSL

Updated on: Nov 21, 2024 | 11:45 AM

ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ರಂಪ ಇನ್ನೂ ಸಹ ಮುಗಿದಿಲ್ಲ. ಇದರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ್ ಸೂಪರ್ ಲೀಗ್ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಏಕೆಂದರೆ ಮುಂಬರುವ ಪಿಎಸ್​ಎಲ್, ಐಪಿಎಲ್ ಅವಧಿಯಲ್ಲೇ ಆಯೋಜನೆಗೊಳ್ಳಲಿದೆ. ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ ಫ್ರಾಂಚೈಸಿ ಮಾಲೀಕರು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಸ್ಪಷ್ಟತೆ ನೀಡುವಂತೆ ಪಾಕ್ ಕ್ರಿಕೆಟ್ ಮಂಡಳಿಯನ್ನು ಕೋರಿದೆ.

ಪಿಎಸ್‌ಎಲ್ ಫ್ರಾಂಚೈಸಿಗೆ ನಿಕಟವಾಗಿರುವ ಮೂಲಗಳ ಮಾಹಿತಿ ಪ್ರಕಾರ, ಕೆಲ ಮಾಲೀಕರು ಪಿಎಸ್‌ಎಲ್ ನಿರ್ದೇಶಕ ಸಲ್ಮಾನ್ ನಸೀರ್‌ಗೆ ಪತ್ರ ಬರೆದಿದ್ದು, ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲೇ ಸಭೆ ಕರೆಯುವಂತೆ ಕೇಳಿದ್ದಾರೆ.

ಐಪಿಎಲ್ ಅವಧಿಯಲ್ಲೇ ಪಾಕಿಸ್ತಾನ್ ಸೂಪರ್ ಲೀಗ್​ ಆಯೋಜನೆಯಾದರೆ, ಯಾವ ವಿದೇಶಿ ಆಟಗಾರರು ಟೂರ್ನಿಗೆ ಲಭ್ಯರಿರಲಿದ್ದಾರೆ ಎಂಬುದರ ಬಗ್ಗೆ ಖಚಿತತೆ ಬೇಕಿದೆ. ಹಾಗೆಯೇ ಪ್ರಸಾರ ಮತ್ತು ವೇಳಾಪಟ್ಟಿಗಳ ಬಗ್ಗೆ ಪಿಸಿಬಿ ಸ್ಪಷ್ಟತೆಯನ್ನು ನೀಡಬೇಕೆಂದು ಮಾಲೀಕರು ಬಯಸಿದ್ದಾರೆ ಎಂದು ಪಿಟಿಐ ವರದಿಯಲ್ಲಿ ತಿಳಿಸಲಾಗಿದೆ.

ಅತ್ತ ಪಾಕಿಸ್ತಾನ್ ಸೂಪರ್ ಲೀಗ್ ಕುರಿತು ಅಸ್ಪಷ್ಟತೆ ಇರುವ ಕಾರಣ ಮಾಲೀಕರು ಚಿಂತಿತರಾಗಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮತ್ತು ಇತರ ಕೆಲವು ಮಂಡಳಿಗಳು ತಮ್ಮ ಆಟಗಾರರು ಲೀಗ್‌ಗಳಲ್ಲಿ ಆಡುವ ನಿರ್ಬಂಧಗಳ ಚರ್ಚಿಸಿದ್ದಾರೆ. ಹೀಗಾಗಿ ಪಿಎಸ್​ಎಲ್​​ ಆಟಗಾರರ ಡ್ರಾಫ್ಟ್ ಬಗ್ಗೆ ಸ್ಪಷ್ಟತೆ ಬೇಕಿದೆ ಎಂಬ ಬೇಡಿಕೆಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಿಟ್ಟಿದೆ.

ಪಾಕಿಸ್ತಾನ್ ಸೂಪರ್ ಲೀಗ್ ಯಾವಾಗ ಶುರು?

ಸಾಮಾನ್ಯವಾಗಿ ಪಾಕಿಸ್ತಾನ್ ಸೂಪರ್ ಲೀಗ್ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಸಲಾಗುತ್ತದೆ. ಆದರೆ ಈ ಬಾರಿ ಇದೇ ಅವಧಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಳ್ಳಲಿದೆ. ಹೀಗಾಗಿ ಪಿಎಸ್​ಎಲ್​ ಒಂದು ತಿಂಗಳು ತಡವಾಗಿ ಶುರುವಾಗಲಿದೆ.

ಅದರಂತೆ ಏಪ್ರಿಲ್​-ಮೇ ನಡುವೆ ಪಾಕಿಸ್ತಾನ್ ಸೂಪರ್ ಲೀಗ್ ಆಯೋಜಿಸಬೇಕಾಗುತ್ತದೆ. ಅತ್ತ ಏಪ್ರಿಲ್​ನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಲಿದೆ. ಇದರಿಂದ ವಿದೇಶಿ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಪಿಎಸ್​ಎಲ್​ನಿಂದ ಹಿಂದೆ ಸರಿಯಲಿದ್ದಾರೆ.

ಹೀಗಾಗಿಯೇ ಮುಂಬರುವ ಪಾಕಿಸ್ತಾನ್ ಸೂಪರ್ ಲೀಗ್​ ಆಯೋಜನೆಯ ಬಗ್ಗೆ ಇದೀಗ ಮಾಲೀಕರು ಚಿಂತಿತರಾಗಿದ್ದಾರೆ. ಅಲ್ಲದೆ ಈ ಬಗ್ಗೆ ಸ್ಪಷ್ಟತೆಯನ್ನು ಪಡೆಯಲು ಶೀಘ್ರದಲ್ಲೇ ಸಭೆ ಕರೆಯುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯನ್ನು ಕೋರಿದೆ.

ಮುಗಿಯದ ಚಾಂಪಿಯನ್ಸ್ ಟ್ರೋಫಿ ರಂಪ:

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕೈಯಲ್ಲಿದೆ. ಅದರಂತೆ ಫೆಬ್ರವರಿ-ಮಾರ್ಚ್ ನಡುವೆ ಟೂರ್ನಿ ಆಯೋಜಿಸಲು ಪಿಸಿಬಿ ಕರಡು ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದೆ. ಆದರೆ ಪಾಕ್​ನಲ್ಲಿ ಟೂರ್ನಿ ಆಡಲು ಬಿಸಿಸಿಐ ನಿರಾಕರಿಸಿದೆ.

ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿದರೆ ಮಾತ್ರ ಭಾರತ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಲಾಗಿದೆ. ಆದರೆ ಅತ್ತ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಿದ್ಧವಿಲ್ಲ. ಹೀಗಾಗಿಯೇ ಇದೀಗ ಚಾಂಪಿಯನ್ಸ್ ಟ್ರೋಫಿ ಆಯೋಜನೆಯು ಪಿಸಿಬಿಯ ಚಿಂತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: IPL 2025: ರಿಷಭ್ ಪಂತ್​ಗೆ 30 ಕೋಟಿ ರೂ!

ಇದರ ನಡುವೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ವಿಂಡೋ ಕೂಡ ಹೊಸ ತಲೆನೋವನ್ನು ಉಂಟು ಮಾಡಿದ್ದು, ಹೀಗಾಗಿ ಒಂದೇ ಸಮಯದಲ್ಲಿ ಎರಡು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಪಿಸಿಬಿ ಮುಂದಿದೆ.

 

Published On - 11:42 am, Thu, 21 November 24