Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ಕರಡು ವೇಳಾಪಟ್ಟಿ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಲಿದೆ. ಪಾಕ್ನಲ್ಲಿ ನಡೆಯಲಿರುವ ಈ ಟೂರ್ನಿಯ ಕರಡು ವೇಳಾಪಟ್ಟಿ ಪ್ರಕಟವಾಗಿದ್ದು, ಈ ವೇಳಾಪಟ್ಟಿಯಂತೆ ಟೀಮ್ ಇಂಡಿಯಾದ ಪಂದ್ಯಗಳು ಲಾಹೋರ್ನಲ್ಲಿ ನಡೆಯಲಿದೆ. ಆದರೆ ಈ ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.
ಒಂದೆಡೆ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಚರ್ಚೆ ತಾರಕ್ಕೇರಿದ್ದರೆ, ಮತ್ತೊಂದೆಡೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಟೂರ್ನಿ ಆಯೋಜನೆಗಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ನಡುವೆ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಸಹ ಸಿದ್ಧಪಡಿಸಿಕೊಂಡಿದೆ. ಈ ವೇಳಾಪಟ್ಟಿಯಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಶುರುವಾಗಲಿದೆ.
ಇನ್ನು ಉದ್ಘಾಟನಾ ಪಂದ್ಯವನ್ನು ಕರಾಚಿಯಲ್ಲಿ ಆಯೋಜಿಸಲಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ ಎಂದು ವರದಿಯಾಗಿದೆ.
8 ತಂಡಗಳು 2 ಗುಂಪು:
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿರುವುದರಿಂದ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿರುವುದು ಖಚಿತ.
ಅದರಂತೆ ಮಾರ್ಚ್ 1 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ 11ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಣಕ್ಕಿಳಿಯಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಲಾಹೋರ್ನ ಗಡ್ಡಾಫಿ ಸ್ಟೇಡಿಯಂ ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ ತಂಡಗಳು:
ಗ್ರೂಪ್-A
- ಭಾರತ
- ಪಾಕಿಸ್ತಾನ್
- ಬಾಂಗ್ಲಾದೇಶ್
- ನ್ಯೂಝಿಲೆಂಡ್
ಇದನ್ನೂ ಓದಿ: Team India: ಕೊನೆಯ 10 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಗ್ರೂಪ್-B
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ಸೌತ್ ಆಫ್ರಿಕಾ
- ಅಫ್ಘಾನಿಸ್ತಾನ್.
ಚಾಂಪಿಯನ್ಸ್ ಟ್ರೋಫಿ ಕರಡು ವೇಳಾಪಟ್ಟಿ ಈ ಕೆಳಗಿನಂತಿದೆ:
ದಿನಾಂಕ | ಮುಖಾಮುಖಿ | ಸ್ಥಳ |
ಫೆಬ್ರವರಿ, 19 | ಪಾಕಿಸ್ತಾನ್ vs ನ್ಯೂಝಿಲೆಂಡ್ | ಕರಾಚಿ |
ಫೆಬ್ರವರಿ, 20 | ಬಾಂಗ್ಲಾದೇಶ್ vs ಭಾರತ | ಲಾಹೋರ್ |
ಫೆಬ್ರವರಿ, 21 | ಅಫ್ಘಾನಿಸ್ತಾನ್ vs ಸೌತ್ ಆಫ್ರಿಕಾ | ಕರಾಚಿ |
ಫೆಬ್ರವರಿ, 22 | ಆಸ್ಟ್ರೇಲಿಯಾ vs ಇಂಗ್ಲೆಂಡ್ | ಲಾಹೋರ್ |
ಫೆಬ್ರವರಿ, 23 | ನ್ಯೂಝಿಲೆಂಡ್ vs ಭಾರತ | ಲಾಹೋರ್ |
ಫೆಬ್ರವರಿ, 24 | ಪಾಕಿಸ್ತಾನ್ vs ಬಾಂಗ್ಲಾದೇಶ | ರಾವಲ್ಪಿಂಡಿ |
ಫೆಬ್ರವರಿ, 25 | ಅಫ್ಘಾನಿಸ್ತಾನ್ vs ಇಂಗ್ಲೆಂಡ್ | ಲಾಹೋರ್ |
ಫೆಬ್ರವರಿ, 26 | ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ | ರಾವಲ್ಪಿಂಡಿ |
ಫೆಬ್ರವರಿ, 27 | ಬಾಂಗ್ಲಾದೇಶ್ vs ನ್ಯೂಝಿಲೆಂಡ್ | ಲಾಹೋರ್ |
ಫೆಬ್ರವರಿ, 28 | ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ | ರಾವಲ್ಪಿಂಡಿ |
ಮಾರ್ಚ್, 1 | ಪಾಕಿಸ್ತಾನ್ vs ಭಾರತ | ಲಾಹೋರ್ |
ಮಾರ್ಚ್, 2 | ಸೌತ್ ಆಫ್ರಿಕಾ vs ಇಂಗ್ಲೆಂಡ್ | ರಾವಲ್ಪಿಂಡಿ |
ಮಾರ್ಚ್, 5 | ಸೆಮಿಫೈನ್-1 | ಕರಾಚಿ |
ಮಾರ್ಚ್, 6 | ಸೆಮಿಫೈನಲ್-2 | ರಾವಲ್ಪಿಂಡಿ |
ಮಾರ್ಚ್, 9 | ಫೈನಲ್ ಪಂದ್ಯ | ಲಾಹೋರ್ |
ಭಾರತದ ಬೇಡಿಕೆ:
ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಬಿಸಿಸಿಐ ನಿರಾಕರಿಸಿದೆ. ಅಲ್ಲದೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಐಸಿಸಿಗೆ ಮನವಿ ಮಾಡಿದೆ. ಆದರೀಗ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಹೀಗಾಗಿ ಬಿಸಿಸಿಐನ ಮುಂದಿನ ನಡೆಯೇನು ಎಂಬುದೇ ಈಗ ಕುತೂಹಲ.