‘ಹೈಬ್ರಿಡ್ ಮಾದರಿ ಸಾಧ್ಯವೇ ಇಲ್ಲ’; ಸಾರ್ವಜನಿಕವಾಗಿ ಘೋಷಿಸಿದ ಪಾಕ್ ಮಂಡಳಿ ಅಧ್ಯಕ್ಷ
Champions Trophy 2024: ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದಿಂದ ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹತಿ ಹೊರಬಿದ್ದಿಲ್ಲ. ಬಿಸಿಸಿಐ, ಪಾಕಿಸ್ತಾನಕ್ಕೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸುತ್ತಿದೆ. ಪಾಕಿಸ್ತಾನ ಹೈಬ್ರಿಡ್ ಮಾದರಿಯನ್ನು ಒಪ್ಪಲು ನಿರಾಕರಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿ, ಪಂದ್ಯಾವಳಿಯು ಪಾಕಿಸ್ತಾನದಲ್ಲಿಯೇ ನಡೆಯಲ್ಲಿದೆ ಎಂದು ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ನಡೆಯಲು ಇನ್ನು ಸಾಕಷ್ಟು ಸಮಯವಿದ್ದರೂ ಅದರ ಬಗ್ಗೆ ಎದ್ದಿರುವ ವಿವಾದಗಳಿಗೆ ಸದ್ಯಕ್ಕೆ ಮುಕ್ತಿ ಸಿಗುತ್ತಿಲ್ಲ. ಒಂದೆಡೆ ಭಾರತ ತನ್ನ ಪಟ್ಟು ಸಡಿಲಿಸುತ್ತಿಲ್ಲ. ಇನ್ನೊಂದೆಡೆ ಪಾಕಿಸ್ತಾನ ಕೂಡ ತಲೆ ಬಾಗುತ್ತಿಲ್ಲ. ಈ ಇಬ್ಬರ ನಡುವಿನ ಪ್ರತಿಷ್ಠೆಯ ಕದನದಲ್ಲಿ ಅಕ್ಷರಶಃ ಐಸಿಸಿ ನಲುಗಿ ಹೋಗಿದೆ. ಬಿಸಿಸಿಐ, ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧವಿಲ್ಲ. ಹೀಗಾಗಿ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿ ಎಂಬುದು ಬಿಸಿಸಿಐ ವಾದ. ಆದರೆ ಇದಕ್ಕೆ ಒಪ್ಪದ ಪಾಕಿಸ್ತಾನ, ಹೈಬ್ರಿಡ್ ಮಾದರಿಗೆ ನಾವು ಸಿದ್ಧರಿಲ್ಲ ಎಂಬುದನ್ನು ಆರಂಭದಿಂದಲೂ ಹೇಳುತ್ತಲೇ ಬಂದಿದೆ. ಇದೀಗ ಮತ್ತೊಮ್ಮೆ ಆ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಯ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಲು ನಾವು ಸಿದ್ಧರಿಲ್ಲ ಎಂದಿದ್ದಾರೆ.
ಉತ್ತರಕ್ಕಾಗಿ ಕಾಯುತ್ತಿದ್ದೇವೆ
ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯ ಪರಿಶೀಲನೆಗೆ ಬಂದಿದ್ದರು. ಈ ಸಂದರ್ಭದಲ್ಲಿ, ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಪ್ರಯಾಣಿಸದಿರುವ ಬಗ್ಗೆ ಬಿಸಿಸಿಐ ಯಿಂದ ಸ್ಪಷ್ಟನೆ ಕೇಳುವಂತೆ ನಾವು ಐಸಿಸಿಗೆ ಪತ್ರ ಬರೆದಿದ್ದೇವೆ. ಇದೀಗ ನಾವು ಐಸಿಸಿಯ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಐಸಿಸಿಯಿಂದ ಉತ್ತರ ಬಂದ ನಂತರವೇ ನಾವು ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಇದರ ಜೊತೆಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ದವಾಗಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇತರ ತಂಡಗಳು ಪಾಕಿಸ್ತಾನಕ್ಕೆ ಬರಲು ಸಿದ್ಧವಾಗಿವೆ. ಯಾವ ತಂಡಕ್ಕೂ ಪಾಕಿಸ್ತಾನಕ್ಕೆ ಬರಲು ಆತಂಕವಿಲ್ಲ. ಭಾರತಕ್ಕೆ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ನಾವು ಅದನ್ನು ಪರಿಹರಿಸುತ್ತೇವೆ. ಭಾರತವು ಪಾಕಿಸ್ತಾನಕ್ಕೆ ಭೇಟಿ ನೀಡದಿರಲು ಯಾವುದೇ ಕಾರಣವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಎಲ್ಲ ತಂಡಗಳು ಪಾಕಿಸ್ತಾನಕ್ಕೆ ಬರುವ ನಿರೀಕ್ಷೆ ಇದೆ.
ಒಟ್ಟಿಗೆ ನೋಡಬಾರದು
ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ನಖ್ವಿ ಭರವಸೆ ವ್ಯಕ್ತಪಡಿಸಿದ್ದಾರೆ. ಐಸಿಸಿ ಶೀಘ್ರದಲ್ಲೇ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ, ಇದರಿಂದಾಗಿ ಪಾಕಿಸ್ತಾನವು ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಕ್ರೀಡೆ ಮತ್ತು ರಾಜಕೀಯ ಎರಡು ವಿಭಿನ್ನ ವಿಷಯಗಳಾಗಿದ್ದು, ದೇಶವು ಇದನ್ನು ಒಟ್ಟಿಗೆ ನೋಡಬಾರದು ಎಂಬುದು ನನ್ನ ಭಾವನೆ. ಐಸಿಸಿ ವೇಳಾಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು, ಶೀಘ್ರದಲ್ಲೇ ಐಸಿಸಿ ಈ ಕೆಲಸವನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಇದರಿಂದ ನಾವು ಸಿದ್ಧತೆಗಳನ್ನು ಅಂತಿಮಗೊಳಿಸಬಹುದು. ಪಂದ್ಯಾವಳಿಯಲ್ಲಿ ಬಾಗವಹಿಸುವುದರ ಬಗ್ಗೆ ಬಿಸಿಸಿಐ ಬಳಿ ಏನೇ ಪ್ರಶ್ನೆಗಳಿದ್ದರೂ, ನಾವು ಅದನ್ನು ಲಿಖಿತವಾಗಿ ಕೇಳಿದ್ದೇವೆ.
ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ
ಒಂದು ವೇಳೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಬೇಕಾಗಿ ಬಂದರೆ, ಪಾಕಿಸ್ತಾನ ಪಂದ್ಯಾವಳಿಯ ಆತಿಥ್ಯದಿಂದ ಹಿಂದೆ ಸರಿಯುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡದ ನಖ್ವಿ, ಇಡೀ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ ಎಂಬ ಭರವಸೆ ನನಗಿದೆ. ದೇಶದ ಗೌರವಕ್ಕೆ ಮೊದಲ ಸ್ಥಾನ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೀವೇ ನೋಡುತ್ತೀರಿ. ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ, ನಾವು ಈ ಹಿಂದೆಯೂ ಈ ಬಗ್ಗೆ ಸ್ಪಷ್ಟಪಡಿಸಿದ್ದೇವೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ