
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 (IPL 2025) ರ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (PBKS vs MI) ಮುಖಾಮುಖಿಯಾಗಿದ್ದವು. ಪ್ಲೇಆಫ್ ಸುತ್ತಿನಲ್ಲಿ ಟಾಪ್ 2 ಸ್ಥಾನ ಪಡೆಯಲು ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವದಾಗಿತ್ತು. ಅದರಂತೆ ಈ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಪಂಜಾಬ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಕ್ವಾಲಿಫೈಯರ್ 1 ಆಡಲು ಅರ್ಹತೆ ಪಡೆದುಕೊಂಡಿದೆ. ಇತ್ತ ಸೋತ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 184 ರನ್ ಕಲೆಹಾಕಿದರೆ, ಈ ಗುರಿಯನ್ನು ಪಂಜಾಬ್ ಕೇವಲ 3 ವಿಕೆಟ್ ಕಳೆದುಕೊಂಡು ಸಾಧಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ತಂಡದ ಪರ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ 57 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 45 ರನ್‌ಗಳ ಪಾಲುದಾರಿಕೆ ಇತ್ತು. ಮಾರ್ಕೊ ಯಾನ್ಸೆನ್ ಎಸೆತದಲ್ಲಿ ರಿಕಲ್ಟನ್ 20 ಎಸೆತಗಳಲ್ಲಿ 27 ರನ್ ಗಳಿಸಿ ಕ್ಯಾಚ್ ನೀಡಿ ಔಟಾದರು. ರೋಹಿತ್ ಶರ್ಮಾ ಕೂಡ 21 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ಔಟಾದರು.
ಇದಾದ ನಂತರ, ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯನ್ನು ವಹಿಸಿಕೊಂಡು ಒಂದು ತುದಿಯಲ್ಲಿ ದೃಢವಾಗಿ ನಿಂತರು. ಆದರೆ ಇನ್ನೊಂದು ತುದಿಯಲ್ಲಿ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಇದರ ಹೊರತಾಗಿಯೂ, ಸೂರ್ಯ 34 ಎಸೆತಗಳಲ್ಲಿ ಸೀಸನ್ನ ಐದನೇ ಅರ್ಧಶತಕವನ್ನು ಪೂರೈಸಿದರು. ಅಂತಿಮವಾಗಿ ಸೂರ್ಯ 39 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 57 ರನ್ ಬಾರಿಸಿದರು. ಇವರಲ್ಲದೆ, ಮುಂಬೈ ಪರ ತಿಲಕ್ ವರ್ಮಾ ಒಂದು, ವಿಲ್ ಜಾಕ್ಸ್ 26, ಹಾರ್ದಿಕ್ ಪಾಂಡ್ಯ 26 ಮತ್ತು ನಮನ್ ಧೀರ್ 20 ರನ್‌ಗಳ ಕಾಣಿಕೆ ನೀಡಿದರು. ಪಂಜಾಬ್ ಪರ ಅರ್ಶ್ದೀಪ್ ಸಿಂಗ್, ಮಾರ್ಕೊ ಯಾನ್ಸೆನ್ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ ಎರಡು ವಿಕೆಟ್ ಪಡೆದರು. ಇವರಲ್ಲದೆ, ಹರ್‌ಪ್ರೀತ್ ಬ್ರಾರ್ ಕೂಡ 1 ವಿಕೆಟ್ ಪಡೆದರು.
IPL 2025: ಭಾರತದಲ್ಲಿ ಮಾನ್ಸೂನ್ ಅಬ್ಬರ; ಆರ್ಸಿಬಿ- ಲಕ್ನೋ ಪಂದ್ಯಕ್ಕಿದೆಯಾ ಮಳೆಯ ಆತಂಕ?
ಈ ಗುರಿ ಬೆನ್ನಟ್ಟಿದ ಪಂಜಾಬ್ ಪರ ಪ್ರಭ್ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ತ್ವರಿತ ಆರಂಭ ನೀಡಲು ಪ್ರಯತ್ನಿಸಿದರು. ಆದರೆ ಪ್ರಭ್ಸಿಮ್ರಾನ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಐದನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ಬಲಿಯಾದರು. ಮುಂಬೈ ತಂಡದ ಅತ್ಯುತ್ತಮ ಫಾರ್ಮ್ ಮತ್ತು ಮಾರಕ ಬೌಲಿಂಗ್ ನೋಡಿದರೆ ಪಂಜಾಬ್ ತಂಡ ಇಲ್ಲಿಂದ ಮತ್ತೆ ಗೆಲುವಿನ ಲಯಕ್ಕೆ ಮರಳುವುದು ಕಷ್ಟ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪ್ರಿಯಾಂಶ್ ಆರ್ಯ ಮತ್ತು ಜೋಶ್ ಇಂಗ್ಲಿಸ್ ಒಟ್ಟಾಗಿ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಹೆಡೆಮುರಿ ಕಟ್ಟಿದರು. ಇಬ್ಬರೂ ಶತಕದ ಜೊತೆಯಾಟ ನಡೆಸಿದ್ದು ಮಾತ್ರವಲ್ಲದೆ ಅತ್ಯಂತ ವೇಗವಾಗಿ ರನ್ ಗಳಿಸಿದರು. ಈ ಸಮಯದಲ್ಲಿ, ಇಬ್ಬರೂ ಅರ್ಧಶತಕ ಪೂರೈಸಿದರು. ಪ್ರಿಯಾಂಶ್ ಮತ್ತು ಇಂಗ್ಲಿಸ್ ಔಟಾದ ನಂತರ, ನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು ಮತ್ತು ಗೆಲುವಿನ ಸಿಕ್ಸರ್ ಕೂಡ ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 pm, Mon, 26 May 25