IPL 2025: ಇಬ್ಬರು ತಂಡದಿಂದ ಔಟ್, ಇನ್ನಿಬ್ಬರಿಗೆ ಇಂಜುರಿ; ಹೇಗಿರಲಿದೆ ಆರ್‌ಸಿಬಿ ಪ್ಲೇಯಿಂಗ್ 11?
IPL 2025 RCB vs LSG: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದೊಂದಿಗೆ ಲೀಗ್ ಹಂತ ಮುಗಿಯಲಿದೆ. ಆರ್‌ಸಿಬಿ ಗೆದ್ದರೆ ಅಗ್ರ ಸ್ಥಾನ ಖಚಿತ, ಸೋತರೆ ಎಲಿಮಿನೇಟರ್ ಆಡಬೇಕಾಗುತ್ತದೆ. ಆರ್‌ಸಿಬಿಯಲ್ಲಿ ಆಟಗಾರರ ಗಾಯ ಮತ್ತು ಅನುಪಸ್ಥಿತಿ ಪ್ಲೇಯಿಂಗ್ 11 ಅನ್ನು ಬದಲಾಯಿಸಿದೆ.

ಐಪಿಎಲ್ 2025 (IPL 2025) ರಲ್ಲಿ ಅಗ್ರ ಎರಡು ಸ್ಥಾನ ಪಡೆಯುವುದಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಲೀಗ್ ಹಂತದ ಕೊನೆಯ ಪಂದ್ಯ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಬಳಿಕ ಮೊದಲೆರಡು ಸ್ಥಾನಗಳನ್ನು ಪಡೆದ ಆ ಎರಡು ತಂಡಗಳು ಯಾವುವು ಎಂಬುದು ಖಚಿತವಾಗಲಿದೆ. ಆರ್‌ಸಿಬಿ ಲಕ್ನೋ ವಿರುದ್ಧ ಗೆದ್ದರೆ ಅಗ್ರ ಎರಡರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಆದರೆ ಲಕ್ನೋ ವಿರುದ್ಧ ಆರ್‌ಸಿಬಿ ಸೋತರೆ ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಲಕ್ನೋ ತಂಡ ಉತ್ತಮ ಫಾರ್ಮ್‌ನಲ್ಲಿದ್ದು ಕಳೆದ ಪಂದ್ಯವನ್ನು ಗೆದ್ದು ಬರುತ್ತಿದ್ದರೆ, ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತು ಬರುತ್ತಿದೆ. ಇದರ ಜೊತೆಗೆ ತಂಡದಿಂದ ಇಬ್ಬರು ಆಟಗಾರರು ಹೊರಬಿದ್ದಿದ್ದರೆ, ನಾಯಕ ರಜತ್ ಹಾಗೂ ಟಿಮ್ ಡೇವಿಡ್ ಇಂಜುರಿಗೊಂಡಿದ್ದಾರೆ. ಹೀಗಾಗಿ ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಖಚಿತ ಎನ್ನಬಹುದು.
ಸೋಲು- ಗೆಲುವಿನ ಲೆಕ್ಕಾಚಾರ
ವಾಸ್ತವವಾಗಿ ಐಪಿಎಲ್ ಅರ್ಧಕ್ಕೆ ನಿಲ್ಲುವ ಮೊದಲು ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿತ್ತು. ಅದು ಸತತ ನಾಲ್ಕು ಪಂದ್ಯಗಳನ್ನು ಗೆದ್ದಿತ್ತು, ಆದರೆ ಈ ವಿರಾಮ ತಂಡದ ಲಯದ ಮೇಲೆ ಪರಿಣಾಮ ಬೀರಿದೆ. ಲೀಗ್ ಪುನರಾರಂಭವಾದ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದರೆ, ನಂತರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್‌ಗಳಿಂದ ಸೋತಿತು. ಹೀಗಾಗಿ ಲಯ ಕಳೆದುಕೊಂಡಿರುವ ಆರ್‌ಸಿಬಿ ಮತ್ತೆ ಗೆಲುವಿನ ಮಯಕ್ಕೆ ಮರಳಬೇಕೆಂದರೆ ತನ್ನ ಅತ್ಯುತ್ತಮ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯಬೇಕಿದೆ.
ಟಾಪ್ ಆರ್ಡರ್ ಹೇಗರಲಿದೆ?
ಮೇಲೆ ಹೇಳಿದಂತೆ ರಾಷ್ಟ್ರೀಯ ಕರ್ತವ್ಯಕ್ಕಾಗಿ ಆರಂಭಿಕ ಆಟಗಾರನಾದ ಜೆಕೆಬ್ ಬೆಥೆಲ್ ಹಾಗೂ ಲುಂಗಿ ಎನ್ಗಿಡಿ ಈಗಾಗಾಲೇ ತಂಡವನ್ನು ತೊರೆದಿದ್ದಾರೆ. ಹೀಗಾಗಿ ಇವರಿಬ್ಬರು ಪ್ಲೇಯಿಂಗ್ 11 ಆಯ್ಕೆಗೆ ಲಭ್ಯರಿರುವುದಿಲ್ಲ. ಬೆಥೆಲ್ ಬದಲಿಗೆ ಸಾಲ್ಟ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಉಳಿದಂತೆ ಮತ್ತೊಬ್ಬ ಆಟಗಾರನಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಯಾಂಕ್ ಯಾದವ್ ಬ್ಯಾಟ್ ಬೀಸಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ರಜತ್ ಪಾಟಿದರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆಗಳಿವೆ. ಏಕೆಂದರೆ ರಜತ್ ಕೈ ಇಂಜುರಿಯಿಂದ ಬಳಲುತ್ತಿದ್ದಾರೆ.
ಐದನೇ ಕ್ರಮಾಂಕದಲ್ಲಿ ಎಂದಿನಂತೆ ಜಿತೇಶ್ ಶರ್ಮಾ ಆಡಲಿದ್ದು, 6ನೇ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಬ್ಯಾಟ್ ಬೀಸಲಿದ್ದಾರೆ. ಕಳೆದ ಪಂದ್ಯದಲ್ಲಿ ಡೇವಿಡ್ ಇಂಜುರಿಗೆ ತುತ್ತಾಗಿದ್ದರು. ಆದರೆ ಅವರು ಚೇತರಿಸಿಕೊಂಡಿರುವ ಸಾಧ್ಯತೆಗಳಿದ್ದು ಅವರು ಕಣಕ್ಕಿಳಿಯುವುದು ಖಚಿತ. ಆ ನಂತರ ರೊಮಾರಿಯೋ ಶೆಫರ್ಡ್ ಬ್ಯಾಟ್ ಬೀಸಲಿದ್ದು, ಕೃನಾಲ್ ಪಾಂಡ್ಯ ಸ್ಪಿನ್ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಯಾರು?
ಬೌಲಿಂಗ್ ವಿಭಾಗದ ಬಗ್ಗೆ ಹೇಳುವುದಾದರೆ… ಲುಂಗಿ ಎನ್ಗಿಡಿ ತಂಡದಿಂದ ಹೊರಬಿದ್ದಿದ್ದರೂ ಮತ್ತೊಬ್ಬ ವೇಗಿ ಜೋಶ್ ಹೇಜಲ್‌ವುಡ್ ತಂಡವನ್ನು ಕೂಡಿಕೊಂಡಿರುವುದು ತಂಡದ ಬೌಲಿಂಗ್ ವಿಭಾಗದ ಶಕ್ತಿ ಹೆಚ್ಚಿಸಿದೆ. ಉಳಿದಂತೆ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಹಾಗೂ ಸುಯೇಶ್ ಶರ್ಮಾ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
IPL 2025: ಆರ್ಸಿಬಿಯ ಕೊನೆಯ ಲೀಗ್ ಪಂದ್ಯ; ಎಲ್ಲಿ, ಯಾವಾಗ, ಯಾರು ಎದುರಾಳಿ?
ಉಭಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.
ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಅವೇಶ್ ಖಾನ್, ಆಕಾಶ್ ದೀಪ್, ರವಿ ಬಿಷ್ಣೋಯ್, ವಿಲ್ ಓ’ರೂರ್ಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
