IPL 2021: ಪಂಜಾಬ್ ತೊರೆಯಲು ಮುಂದಾದ ರಾಹುಲ್! ಹರಾಜಿಗೂ ಮುನ್ನ ಕನ್ನಡಿಗನಿಗಾಗಿ ಶುರುವಾಯ್ತು ಪೈಪೋಟಿ

| Updated By: ಪೃಥ್ವಿಶಂಕರ

Updated on: Oct 11, 2021 | 10:39 PM

IPL 2021: ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ರಾಹುಲ್ ಮುಂದಿನ ವರ್ಷ ಹೊಸ ಫ್ರಾಂಚೈಸ್‌ಗೆ ಹೋಗಲು ಸಿದ್ಧರಾಗಿದ್ದಾರೆ.

IPL 2021: ಪಂಜಾಬ್ ತೊರೆಯಲು ಮುಂದಾದ ರಾಹುಲ್! ಹರಾಜಿಗೂ ಮುನ್ನ ಕನ್ನಡಿಗನಿಗಾಗಿ ಶುರುವಾಯ್ತು ಪೈಪೋಟಿ
ಪಂಜಾಬ್ ಕಿಂಗ್ಸ್ ತಂಡ
Follow us on

ಐಪಿಎಲ್ 2021 ಮುಗಿಯಲಿದ್ದು, ಈಗಿನಿಂದ ಮುಂದಿನ ಸೀಸನ್ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮುಂದಿನ ವರ್ಷ ನಡೆಯಲಿರುವ ಬೃಹತ್ ಹರಾಜು ಚರ್ಚೆಗೆ ದೊಡ್ಡ ಕಾರಣವಾಗಿದೆ. 2022 ಐಪಿಎಲ್ ಸೀಸನ್​ಗೆ ಮುನ್ನ, ಮತ್ತೊಮ್ಮೆ ಎಲ್ಲಾ ಫ್ರಾಂಚೈಸಿಗಳು ಹೊಸ ತಂಡಗಳನ್ನು ರಚಿಸಬೇಕಾಗುತ್ತದೆ ಮತ್ತು ಇದಕ್ಕಾಗಿ ಬಹುತೇಕ ಎಲ್ಲಾ ಆಟಗಾರರು ಹರಾಜಿನಲ್ಲಿರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹಲವು ದೊಡ್ಡ ಆಟಗಾರರ ತಂಡಗಳಲ್ಲಿ ಬದಲಾವಣೆಗಳು ನಿಶ್ಚಿತ. ಇಂತಹ ಸಂದರ್ಭದಲ್ಲಿ ಬರಲಿರುವ ಆರಂಭಿಕ ಸುದ್ದಿಗಳ ಪ್ರಕಾರ, ಪ್ರಸ್ತುತ ತಂಡವೊಂದರ ನಾಯಕ ಫ್ರಾಂಚೈಸಿ ಬಿಡಲು ಮನಸ್ಸು ಮಾಡಿದ್ದಾರೆ. ಈ ಆಟಗಾರ ಬೇರಾರೂ ಅಲ್ಲ, ಪಂಜಾಬ್ ಕಿಂಗ್ಸ್ ತಂಡದ ನಾಯಕ ಮತ್ತು ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೆಎಲ್ ರಾಹುಲ್. ವರದಿಗಳ ಪ್ರಕಾರ, ಪಂಜಾಬ್ ತಂಡದೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ರಾಹುಲ್ ಮನಸ್ಸು ಮಾಡಿದ್ದಾರೆ.

ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ರಾಹುಲ್ ಮುಂದಿನ ವರ್ಷ ಹೊಸ ಫ್ರಾಂಚೈಸ್‌ಗೆ ಹೋಗಲು ಸಿದ್ಧರಾಗಿದ್ದಾರೆ. ಮುಂದಿನ ಋತುವಿಗೆ ಮುಂಚಿತವಾಗಿ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ಭಾರತೀಯ ಆರಂಭಿಕ ಮತ್ತು ಅವರ ಫ್ರಾಂಚೈಸಿ ನಡುವೆ ಮಾತುಕತೆ ನಡೆಯುತ್ತಿದೆ. ಇದಷ್ಟೇ ಅಲ್ಲ, ರಾಹುಲ್ ಅವರನ್ನು ಈಗಾಗಲೇ ಅನೇಕ ಫ್ರಾಂಚೈಸಿಗಳು ಸಂಪರ್ಕಿಸಿದ್ದಾರೆ. ಅವರು ಈ ಧೀಮಂತ ಬ್ಯಾಟ್ಸ್‌ಮನ್ ಮತ್ತು ಸಂಭಾವ್ಯ ನಾಯಕನನ್ನು ತಮ್ಮ ತಂಡದಲ್ಲಿ ಸೇರಿಸಲು ಉತ್ಸುಕರಾಗಿದ್ದಾರೆ. ಆದಾಗ್ಯೂ, ಈ ವಿಷಯದಲ್ಲಿ ರಾಹುಲ್ ಅಥವಾ ಪಂಜಾಬ್ ತಂಡದಿಂದ ಯಾವುದೇ ದೃಢೀಕರಣ ಇನ್ನೂ ಬಂದಿಲ್ಲ.

ಈ ಋತುವಿನಲ್ಲಿಯೂ ರಾಹುಲ್ ಬ್ಯಾಟ್ ಅಬ್ಬರ
ಈ ಋತುವಿನಲ್ಲಿ ರಾಹುಲ್ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ರಾಹುಲ್ ಮತ್ತೊಮ್ಮೆ ರನ್​ಗಳ ಮಳೆ ಸುರಿಸಿದರು ಮತ್ತು ಪಂಜಾಬ್ ತಂಡದ ನಾಯಕತ್ವ ವಹಿಸಿ, ಅವರು ಬ್ಯಾಟ್ ನಿಂದಲೂ ಅಬ್ಬರಿಸಿದರು. ರಾಹುಲ್ 13 ಇನ್ನಿಂಗ್ಸ್​ಗಳಲ್ಲಿ 138 ಸ್ಟ್ರೈಕ್ ರೇಟ್​ನಲ್ಲಿ ಅತ್ಯಧಿಕ 626 ರನ್ ಗಳಿಸಿದ್ದಾರೆ ಮತ್ತು ಆರೆಂಜ್ ಕ್ಯಾಪ್​ಗೆ ಮತ್ತೊಮ್ಮೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಆದಾಗ್ಯೂ, ಅವರ ನಾಯಕತ್ವದಲ್ಲಿ, ತಂಡವು ಮತ್ತೊಮ್ಮೆ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

2018 ರಿಂದ ಕೆಎಲ್ ರಾಹುಲ್ ಪಂಜಾಬ್ ಜೊತೆ
ರಾಹುಲ್ 2018 ರಲ್ಲಿ ಪಂಜಾಬ್ ಕಿಂಗ್ಸ್ ಜೊತೆ ಸಂಬಂಧ ಹೊಂದಿದ್ದರು ಮತ್ತು ಅಂದಿನಿಂದ ಅವರು ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. 2018 ರಿಂದ 2021 ರವರೆಗೆ ಸತತ 4 ಋತುಗಳಲ್ಲಿ ರಾಹುಲ್ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 2020 ರಲ್ಲಿ, ಅವರು 14 ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ 670 ರನ್ ಗಳಿಸಿದರು, ಇದು ಒಂದು ಋತುವಿನಲ್ಲಿ ಅವರ ಅತ್ಯಧಿಕ ಸ್ಕೋರ್ ಆಗಿದೆ. 2020 ರಲ್ಲಿಯೇ, ರಾಹುಲ್‌ಗೆ ಪಂಜಾಬ್‌ನ ನಾಯಕತ್ವವನ್ನು ನೀಡಲಾಯಿತು, ಆದರೆ ಬ್ಯಾಟ್‌ನೊಂದಿಗೆ ಸತತವಾಗಿ ರನ್ ಗಳಿಸಿದರೂ ಸಹ, ಅವರು ನಾಯಕತ್ವದ ವಿಷಯದಲ್ಲಿ ಸತತವಾಗಿ ವಿಫಲರಾದರು. ಕಳೆದ ಋತುವಿನಲ್ಲಿಯೂ, ಅವರ ತಂಡವು 12 ಅಂಕಗಳೊಂದಿಗೆ ಆರನೇ ಸ್ಥಾನವನ್ನು ಗಳಿಸಿತು ಮತ್ತು ಈ ಋತುವಿನಲ್ಲಿ 12 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿ ಉಳಿಯಿತು.