
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲಿಸ್ಟ್ಗಳು ಕನ್ಫರ್ಮ್ ಆಗಿದೆ. ಈ ಬಾರಿಯ ಐಪಿಎಲ್ ಬಿಗ್ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಆರ್ಸಿಬಿ 9 ವರ್ಷಗಳ ಬಳಿಕ ಫೈನಲ್ಗೇರಿದರೆ, ಪಂಜಾಬ್ ಕಿಂಗ್ಸ್ 11 ವರ್ಷಗಳ ಬಳಿಕ ಫೈನಲ್ ಪಂದ್ಯವಾಡಲು ಸಜ್ಜಾಗುತ್ತಿದೆ.
ಇದಕ್ಕೂ ಮುನ್ನ ಆರ್ಸಿಬಿ ತಂಡವು ಫೈನಲ್ ಆಡಿದ್ದು 2016 ರಲ್ಲಿ. ಮೇ 29 ರಂದು ನಡೆದ ಐಪಿಎಲ್ ಫೈನಲ್ನಲ್ಲಿ ರಾಯಲ್ ಪಡೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ರನ್ಗಳಿಂದ ಸೋಲನುಭವಿಸಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು.
ಕುತೂಹಲಕಾರಿ ವಿಷಯ ಎಂದರೆ ಈ ಸೋಲಿನ ಬಳಿಕ ಆರ್ಸಿಬಿ ತಂಡವು ಒಮ್ಮೆಯೂ ಫೈನಲ್ಗೇರಿರಲಿಲ್ಲ. ಆದರೆ ಮೇ 29 ರಂದು ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆರ್ಸಿಬಿ ಪಡೆ ಮತ್ತೊಮ್ಮೆ ಫೈನಲ್ಗೆ ಲಗ್ಗೆಯಿಟ್ಟಿತ್ತು. ಅಂದರೆ 2016 ರಲ್ಲಿ ಮೇ 29 ರಂದು ನಡೆದ ಫೈನಲ್ನಲ್ಲಿ ಸೋತಿದ್ದ ಆರ್ಸಿಬಿ, 2025ರ ಮೇ 29 ರಂದೇ ಫೈನಲ್ಗೇರುವಲ್ಲಿ ಯಶಸ್ವಿಯಾಗಿತ್ತು.
ಇತ್ತ ಪಂಜಾಬ್ ಕಿಂಗ್ಸ್ ತಂಡ ಕೊನೆಯ ಬಾರಿ ಫೈನಲ್ ಆಡಿದ್ದ 2014 ರಲ್ಲಿ. ಜೂನ್ 1 ರಂದು ನಡೆದ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಸೋಲನುಭವಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು. ಆ ಬಳಿಕ ಪಂಜಾಬ್ ಕಿಂಗ್ಸ್ ಪಾಲಿಗೆ ಪ್ಲೇಆಫ್ ಎಂಬುದೇ ಮರೀಚಿಕೆಯಾಗಿತ್ತು.
ಆದರೆ ಈ ಬಾರಿ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಅಲ್ಲದೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ಗೆ ಸೋಲುಣಿಸಿ ಫೈನಲ್ಗೆ ಪ್ರವೇಶಿಸಿದೆ. ಕಾಕತಾಳೀಯ ಎಂಬಂತೆ ಪಂಜಾಬ್ ಕಿಂಗ್ಸ್ ಕೂಡ ಫೈನಲ್ಗೆ ಪ್ರವೇಶಿಸಿದ್ದು ಜೂನ್ 1 ರಂದು ನಡೆದ ಪಂದ್ಯದ ಮೂಲಕ. ಅಂದರೆ 2014 ರಲ್ಲಿ ಪಂಜಾಬ್ ಕಿಂಗ್ಸ್ ಜೂನ್ 1 ರಂದು ಫೈನಲ್ ಪಂದ್ಯವಾಡಿತ್ತು.
ಇದೀಗ 11 ವರ್ಷಗಳ ಬಳಿಕ ಜೂನ್ 1 ರಂದು ನಡೆದ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಮತ್ತೊಮ್ಮೆ ಫೈನಲ್ಗೆ ಪ್ರವೇಶಿಸಿದೆ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಫೈನಲ್ ಸೋತ ದಿನವೇ ಮತ್ತೆ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತಂಡದ 17 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್
ಇದೀಗ ಉಭಯ ತಂಡಗಳು ಚೊಚ್ಚಲ ಟ್ರೋಫಿಯನ್ನು ಎದುರು ನೋಡುತ್ತಿದ್ದು, ಹೀಗಾಗಿ ಜೂನ್ 3 ರಂದು ಒಂದು ತಂಡ ಹೊಸ ಇತಿಹಾಸ ಬರೆಯುವುದು ನಿಶ್ಚಿತ.