ಮುಂಬೈ ಇಂಡಿಯನ್ಸ್​ ತಂಡದ 17 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್

IPL 2025 MI vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ ಕಲೆಹಾಕಿತು. ಈ ಕಠಿಣ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು 19 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈ ಇಂಡಿಯನ್ಸ್​ ತಂಡದ 17 ವರ್ಷಗಳ ದಾಖಲೆಗೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್
Mi Vs Pbks

Updated on: Jun 02, 2025 | 8:31 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 200 ರನ್​ಗಳಿಸಿ ಒಮ್ಮೆಯೂ ಸೋಲದ ತಂಡವಾಗಿದ್ದ ಮುಂಬೈ ಇಂಡಿಯನ್ಸ್ (MI)​ ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡ ಯಶಸ್ವಿಯಾಗಿದೆ. ಅದು ಕೂಡ 19 ಓವರ್​ಗಳಲ್ಲಿ 203 ರನ್​ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 41 ಎಸೆತಗಳನ್ನು ಎದುರಿಸಿದ ಅಯ್ಯರ್ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 19 ಓವರ್​ಗಳಲ್ಲಿ 207 ರನ್​ಗಳಿಸಿ 5 ವಿಕೆಟ್​ಗಳ ಜಯ ಸಾಧಿಸಿತು.

ಕೊನೆಗೊಂಡ ನಾಗಾಲೋಟ:

ಪಂಜಾಬ್ ಕಿಂಗ್ಸ್ ತಂಡದ ಈ ಗೆಲುವಿನೊಂದಿಗೆ ಕಳೆದ 17 ಸೀಸನ್​ಗಳಿಂದ 200+ ರನ್​ ವಿಷಯದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದಿದ್ದ ಮುಂಬೈ ಇಂಡಿಯನ್ಸ ತಂಡದ ಗೆಲುವಿನ ನಾಗಾಲೋಟ ಕೊನೆಗೊಂಡಿದೆ. ಅಂದರೆ ಕಳೆದ 17 ಸೀಸನ್​ಗಳಲ್ಲಿ ಮುಂಬೈ ಪಡೆಯು 200 ರನ್​ಗಳಿಸಿ ಒಮ್ಮೆಯೂ ಸೋಲನುಭವಿಸಿರಲಿಲ್ಲ.

ಅಲ್ಲದೆ ಈವರೆಗೆ 19 ಬಾರಿ 200+ ಸ್ಕೋರ್​ಗಳ ಟಾರ್ಗೆಟ್ ನೀಡಿದ್ದ ಮುಂಬೈ ಇಂಡಿಯನ್ಸ್​ ತಂಡವು 18 ಬಾರಿ ಜಯಗಳಿಸಿತ್ತು. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಪಡೆಯನ್ನು ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ 17 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ವಿಶೇಷ ದಾಖಲೆ ಕೂಡ ಬ್ರೇಕ್ ಆಗಿದೆ.

ಫೈನಲ್​ಗೆ ಪಂಜಾಬ್ ಕಿಂಗ್ಸ್:

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್​ನ ಫೈನಲ್​ಗೆ ಪ್ರವೇಶಿಸಿದೆ. ಅದು ಕೂಡ 11 ವರ್ಷಗಳ ಬಳಿಕ ಎಂಬುದು ವಿಶೇ. ಅಂದರೆ ಪಂಜಾಬ್ ಪಡೆ ಕೊನೆಯ ಬಾರಿ ಫೈನಲ್ ಆಡಿದ್ದು 2014 ರಲ್ಲಿ. ಇದೀಗ ದಶಕದ ಬಳಿಕ ಮತ್ತೊಮ್ಮೆ ಅಂತಿಮ ಪಂದ್ಯವಾಡಲು ಪಂಜಾಬ್ ಕಿಂಗ್ಸ್ ಸಜ್ಜಾಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಸೋಲುತ್ತಿದ್ದಂತೆ ನೋವಿನಿಂದ ಕುಗ್ಗಿ ಹೋದ ಹಾರ್ದಿಕ್ ಪಾಂಡ್ಯ

ಅದರಂತೆ ಜೂನ್ 3 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.