ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಐಪಿಎಲ್ 2022ರ 66ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ (KKR vs LSG) ತಂಡ 2 ರನ್‌ಗಳ ರೋಚಕ ಜಯ ಸಾಧಿಸಿತು. ಕೊನೆಯ ಎಸೆತದ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯವನ್ನು ಅಂತಿಮ ಹಂತದಲ್ಲಿ ರಾಹುಲ್ ಬಳಗ ಬಾಜಿಕೊಂಡಿತು. ಈ ಮೂಲಕ ಎಲ್ಎಸ್ಜಿ ಪ್ಲೇ ಆಫ್ಗೆ ಕ್ವಾಲಿಫೈ ಆದ ಎರಡನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ ಕ್ವಿಂಟನ್ ಡಿಕಾಕ್ (Quinton de Kock) ಹಾಗೂ ಕೆಎಲ್ ರಾಹುಲ್ ಅವರ ದ್ವಿಶತಕದ ದಾಖಲೆಯ ಜೊತೆಯಾಟ. ಇತ್ತ ಕೆಕೆಆರ್ ಪರ ರಿಂಕು ಸಿಂಗ್ (Rinku Singh) ಹಾಗೂ ಸುನಿಲ್ ನರೈನ್ ಅಂತಿಮ ಹಂತದಲ್ಲಿ ಬಂದು ತಂಡದ ಗೆಲುವಿಗೆ ಫೋರ್- ಸಿಕ್ಸರ್ಗಳನ್ನು ಸಿಡಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಐಪಿಎಲ್ 2022 ರಿಂದ ಕೋಲ್ಕತ್ತಾ ಮೂರನೇ ತಂಡವಾಗಿ ಹೊರಬಿದ್ದಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಬರೋಬ್ಬರಿ 27 ಸಿಕ್ಸರ್ಗಳು ಮೂಡಿಬಂದವು.
ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೇಂಟ್ಸ್ ಯಾವುದೇ ವಿಕೆಟ್ ಕಳೆದುಕೊಳ್ಳದೇ 20 ಓವರ್‌ಗಳಲ್ಲಿ ಬರೋಬ್ಬರಿ 210 ರನ್ ಬಾರಿಸಿತು. ಇದು ಐಪಿಎಲ್‌ನಲ್ಲಿ ನೂತನ ದಾಖಲೆ ಕೂಡ ಆಯಿತು. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ವಿಕೆಟ್ ಒಪ್ಪಸದೇ ಅಬ್ಬರಿಸಿದರು. ಡಿ ಕಾಕ್ ಕೇವಲ 70 ಎಸೆತಗಳಲ್ಲಿ ಅಜೇಯ 140 ರನ್ ಬಾರಿಸಿದರೆ, ಕೆಎಲ್ ರಾಹುಲ್ 51 ಎಸೆತಗಳಲ್ಲಿ 68 ರನ್ ಕಲೆಹಾಕಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೂತನ ಇತಿಹಾಸ ಬರೆದರು. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ತಂಡವೊಂದರ ಆರಂಭಿಕ ಜೋಡಿ ಕಲೆಹಾಕಿರುವ ಅತ್ಯಧಿಕ ರನ್ ಆಗಿದೆ.
ಈ ಹಿಂದೆ ಜಾನಿ ಬೈರ್ಸ್ಟೋವ್ ಹಾಗೂ ಡೇವಿಡ್ ವಾರ್ನರ್, 2019ರಲ್ಲಿ ಆರ್‌ಸಿಬಿ ವಿರುದ್ಧ ಗಳಿಸಿದ್ದ 185 ರನ್‌ಗಳು ಐಪಿಎಲ್‌ನಲ್ಲಿ ಆರಂಭಿಕ ವಿಕೆಟ್‌ಗೆ ದಾಖಲಾದ ಅತ್ಯಧಿಕ ರನ್‌ಗಳ ಜೊತೆಯಾಟವಾಗಿತ್ತು. ಈ ಪಂದ್ಯದಲ್ಲಿ ಲಖನೌ 20 ಓವರ್ಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 210 ರನ್ ಚಚ್ಚಿತು. ಡಿಕಾಕ್ ಬ್ಯಾಟ್ನಿಂದ 10 ಫೋರ್ ಮತ್ತು 10 ಸಿಕ್ಸರ್ಗಳು ಬಂದರೆ, ರಾಹುಲ್ ಅವರು 3 ಫೋರ್ ಮತ್ತು 4 ಸಿಕ್ಸರ್ ಸಿಡಿಸಿದರು. ಈ ರೋಚಕ ಪಂದ್ಯದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
IBA Womens World Boxing Championships: ಬ್ರೆಜಿಲ್ ಬಾಕ್ಸರ್ ಮಣಿಸಿ ಫೈನಲ್ ಪ್ರವೇಶಿಸಿದ ನಿಖತ್ ಜರೀನ್..!
ಇತ್ತ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 9 ರನ್ ಗಳಿಸುವುದರೆಡೆಗೆ ಆರಂಭಿಕರಾದ ವೆಂಕಟೇಶ್ ಅಯ್ಯರ್ (0) ಹಾಗೂ ಅಭಿಜಿತ್ ತೋಮರ್ (4) ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಆಕ್ರಮಣಕಾರಿ ಆಟವಾಡುವ ಮೂಲಕ ತಿರುಗೇಟು ನೀಡಿದರು. 22 ಎಸೆತಗಳನ್ನು ಎದುರಿಸಿದ ರಾಣಾ ಒಂಬತ್ತು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರು. ಬಳಿಕ ಸ್ಯಾಮ್ ಬಿಲ್ಲಿಂಗ್ಸ್ ಜೊತೆ ಸೇರಿದ ಅಯ್ಯರ್ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು. ಅಲ್ಲದೆ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಆದರೆ ಫಿಫ್ಟಿ ಬೆನ್ನಲ್ಲೇ ಔಟ್ ಆದರು. 29 ಎಸೆತಗಳನ್ನು ಎದುರಿಸಿದ ಅಯ್ಯರ್ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಸ್ಯಾಮ್ ಬಿಲ್ಲಿಂಗ್ಸ್ 36 ರನ್‌ಗಳ ಕಾಣಿಕೆ ನೀಡಿದರು. ರಸೆಲ್ (5) ನಿರಾಸೆ ಮೂಡಿಸಿದರು. ಕೊನೆಯ ಹಂತದಲ್ಲಿ ರಿಂಕು ಸಿಂಗ್ ಹಾಗೂ ಸುನಿಲ್ ನಾರಾಯಣ್, 19 ಎಸೆತಗಳಲ್ಲಿ 58 ರನ್‌ಗಳ ಜೊತೆಯಾಟ ನೀಡುವ ಮೂಲಕ ಪಂದ್ಯವನ್ನು ರೋಚಕ ಹಂತಕ್ಕೆ ತಲುಪಿಸಿದರು. ಪರಿಣಾಮ ಅಂತಿಮ ಓವರ್‌ನಲ್ಲಿ ಗೆಲುವಿಗೆ 21 ರನ್ ಬೇಕಾಗಿತ್ತು. ಮಾರ್ಕಸ್ ಸ್ಟೋಯಿನಿಸ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಎವಿನ್ ಲೂಯಿಸ್ ಅದ್ಭುತ ಕ್ಯಾಚ್ ಹಿಡುವ ಮೂಲಕ ರಿಂಕು ಸಿಂಗ್ ಅವರನ್ನು ಔಟ್ ಮಾಡಲು ನೆರವಾದರು. ಇದರೊಂದಿಗೆ ಕೆಕೆಆರ್ ಗೆಲುವಿನ ಕನಸು ಕಮರಿತು. 15 ಎಸೆತಗಳನ್ನು ಎದುರಿಸಿದ ರಿಂಕು, 4 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 40 ರನ್ ಗಳಿಸಿದರು. ಸುನಿಲ್ ನಾರಾಯಣ್ ಅಜೇಯ 21 ರನ್ ಗಳಿಸಿದರು. ಕೆಕೆಆರ್ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Thu, 19 May 22