
ಭಾರತದ ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ (R Ashwin) ಇದೇ ಅಗಸ್ಟ್ 26 ರಂದು ತಮ್ಮ ಐಪಿಎಲ್ (IPL) ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸುವ ಮೂಲಕ ಅಶ್ವಿನ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಅಶ್ವಿನ್ ನಿವೃತ್ತಿಯ ಬಳಿಕ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸಿಎಸ್‌ಕೆ ಫ್ರಾಂಚೈಸಿ ಹಾಗೂ ಅಶ್ವಿನ್ ನಡುವೆ ಬಿರುಕು ಮೂಡಿದೆ. ಇದೇ ಕಾರಣ ಅಶ್ವಿನ್ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗ ತಮ್ಮ ನಿರ್ಧಾರದ ಬಗ್ಗೆ ಮೌನ ಮುರಿದಿರುವ ಅಶ್ವಿನ್ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ವಾಸ್ತವವಾಗಿ ಕಳೆದ ಐಪಿಎಲ್‌ನಲ್ಲಿ ಅಶ್ವಿನ್ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ 9 ಪಂದ್ಯಗಳಲ್ಲಿ ಅವರು ಕೇವಲ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಬ್ಯಾಟ್‌ನಿಂದ ವಿಶೇಷವಾದದ್ದನ್ನು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಐಪಿಎಲ್ ಮುಗಿದ ಬಳಿಕ ಅಶ್ವಿನ್ಗೆ ಇದು ಕೊನೆಯ ಸೀಸನ್ ಎಂಬ ಚರ್ಚೆ ಶುರುವಾಗಿತ್ತು. ಅದಾದ ಬಳಿಕ ಸ್ವತಃ ಅಶ್ವಿನ್ ಅವರೇ ತನ್ನನ್ನು ತಂಡದಿಂದ ಬಿಡುಗಡೆ ಮಾಡುವಂತೆ ಸಿಎಸ್‌ಕೆ ಬಳಿ ಕೇಳಿದ್ದಾರೆ ಎಂದು ವರದಿಯಾಗಿತ್ತು. ಅದೆಲ್ಲದರ ನಡುವೆ ಅಶ್ವಿನ್ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದರು.
ಇದೀಗ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನಿವೃತ್ತಿಗೆ ನಿಜವಾದ ಕಾರಣವನ್ನು ಬಹಿರಂಗಪಡಿಸಿರುವ ಅಶ್ವಿನ್, ‘ಮೂರು ತಿಂಗಳ ಕಾಲ ನಡೆಯುವ ಐಪಿಎಲ್‌ನಲ್ಲಿ ಇನ್ನು ಮುಂದೆ ಆಡಲು ಸಾಧ್ಯವಾಗುವುದಿಲ್ಲ. ನನ್ನ ದೇಹವು ನನಗೆ ಬೆಂಬಲಿಸುತ್ತಿಲ್ಲ. ಐಪಿಎಲ್‌ನಲ್ಲಿ ಆಡಲು ನೀವು ಸಂಪೂರ್ಣವಾಗಿ ಫಿಟ್ ಆಗಿರಬೇಕು. ಆದರೆ ನನಗೆ ಅಷ್ಟು ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ..
ಪ್ರಸ್ತುತ ಐಪಿಎಲ್‌ಗೆ ವಿದಾಯ ಹೇಳಿರುವ ಅಶ್ವಿನ್, ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ನಡೆಯುತ್ತಿರುವ ಟಿ20 ಲೀಗ್ಗಳಲ್ಲಿ ಆಡುವುದಾಗಿ ಹೇಳಿದ್ದರು. ಇದಾದ ಬಳಿಕ ಅಶ್ವಿನ್, ದಿ ಹಂಡ್ರೆಡ್ ಲೀಗ್ ಮತ್ತು ದಕ್ಷಿಣ ಆಫ್ರಿಕಾದ ಲೀಗ್‌ನಲ್ಲಿ ಆಡುವ ಬಗ್ಗೆ ಊಹಾಪೋಹಗಳು ಇದ್ದವು. ಈ ಬಗ್ಗೆ ಮಾತನಾಡಿರುವ ಅಶ್ವಿನ್, ಈ ಲೀಗ್‌ನಲ್ಲಿ ಆಡಲು ಹೆಸರನ್ನು ನೋಂದಾಯಿಸಿಕೊಂಡಿರುವುದಾಗಿಯೂ ಹಾಗೂ ವಿದೇಶದಲ್ಲಿ ನಡೆಯುವ ಟಿ20 ಲೀಗ್‌ನಲ್ಲಿ ಆಡಲು ಸಿದ್ಧರಿರುವುದಾಗಿ ಹೇಳಿದ್ದರು. ಹಾಗೆಯೇ ಭವಿಷ್ಯದಲ್ಲಿ ಕೋಚಿಂಗ್ ಪಾತ್ರವನ್ನು ನಿರ್ವಹಿಸಲು ಸಿದ್ಧರಿದ್ದೇನೆ, ಆದರೆ ತಮ್ಮದೇ ಆದ ಷರತ್ತುಗಳ ಮೇಲೆ ಎಂದಿದ್ದಾರೆ.
ಆ ಒಂದು ಯೂಟ್ಯೂಬ್ ವಿಡಿಯೋ ಅಶ್ವಿನ್ ಐಪಿಎಲ್ ವೃತ್ತಿಜೀವನಕ್ಕೆ ಮುಳುವಾಯ್ತ?
2009 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅಶ್ವಿನ್ ಸಿಎಸ್‌ಕೆ ತಂಡದ ಪರ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದರು. ಅಶ್ವಿನ್ ಐಪಿಎಲ್‌ನಲ್ಲಿ ಇದುವರೆಗೆ 221 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ 833 ರನ್‌ಗಳನ್ನು ಸಹ ಬಾರಿಸಿದ್ದಾರೆ. ಅಶ್ವಿನ್ ಐಪಿಎಲ್‌ನಲ್ಲಿ ಐದು ತಂಡಗಳ ಪರ ಆಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ