ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ( Melbourne Cricket Ground) ಟೀಂ ಇಂಡಿಯಾ, ಪಾಕಿಸ್ತಾನವನ್ನು (India Vs Pakistan 2022) ಮಣಿಸಿ ದಿನಗಳೇ ಕಳೆದಿವೆ. ಆದರೆ ಆ ಪಂದ್ಯದ ಬಗ್ಗೆ ಈಗಲೂ ಸಹ ಮಾತನಾಡಲಾಗುತ್ತಿದೆ. ರೋಚಕ ಹಂತ ತಲುಪಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಕೊನೆಯ ಎಸೆತದಲ್ಲಿ ಸಿಂಗಲ್ ಬಾರಿಸುವ ಮೂಲಕ ಅಶ್ವಿನ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಪಾಕ್ ಮಣಿಸಿದ ರೋಹಿತ್ ಪಡೆಗೆ ಇಡೀ ಭಾರತವೇ ತಲೆಬಾಗಿ ನಮಿಸಿತ್ತು. ಜೊತೆಗೆ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿತು. ಆದರೆ ಈ ಪಂದ್ಯದಲ್ಲಿ ಒಂದು ವೇಳೆ ಟೀಂ ಇಂಡಿಯಾ ಸೋತಿದ್ದರೆ ತಂಡದ ಆಟಗಾರರು ಭಾರಿ ಟೀಕೆಗೆ ಒಳಗಾಗಬೇಕಾಗಿತ್ತು. ಅದರಲ್ಲೂ ಫೀಲ್ಡಿಂಗ್ ವೇಳೆ ಕ್ಯಾಚ್ ಚೆಲ್ಲಿದ್ದ ಅಶ್ವಿನ್, ಆ ಬಳಿಕ ಅಂತಿಮ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿ ರನ್ ಗಳಿಸುವಲ್ಲಿ ವಿಫಲವಾಗಿದ್ದರೆ ಅವರನ್ನು ಇನ್ನಿಲ್ಲದಂತೆ ನಿಂದಿಸಲಾಗುತ್ತಿತ್ತು. ಹೀಗಾಗಿ ತಂಡದ ಸೋಲು ಅಥವಾ ಗೆಲುವಿನ ಮುನ್ನವೇ ಅಶ್ವಿನ್ (R Ashwin) ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದರು ಎಂಬ ಸುದ್ದಿಯೊಂದು ಹೀಗೆ ಹೊರಬಿದ್ದಿದೆ.
ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಈ ಪಂದ್ಯ ಕೊನೆಯ ಎಸೆತದಲ್ಲಿ ನಿರ್ಧಾರವಾಗಿತ್ತು. ಕಾರ್ತಿಕ್ ವಿಕೆಟ್ ಬಳಿಕ ಕೊನೆಯ ಓವರ್‌ನಲ್ಲಿ ಅಶ್ವಿನ್ ಬ್ಯಾಟಿಂಗ್‌ಗೆ ಬಂದಾಗ ಪಂದ್ಯ ರೋಚಕ ಘಟ್ಟದಲ್ಲಿತ್ತು. ಭಾರತಕ್ಕೆ ಗೆಲುವಿಗೆ ಎರಡು ರನ್ ಬೇಕಿದ್ದ ಕೊನೆಯ ಎಸೆತವನ್ನು ಅಶ್ವಿನ್ ಎದುರಿಸಬೇಕಾಯಿತು. ಎದುರಾಳಿ ತಂಡದ ಬೌಲರ್ ನವಾಜ್ ಎಸೆದ ಆ ಎಸೆತ ವೈಡ್ ಆಗಿದ್ದರಿಂದ ಭಾರತಕ್ಕೆ ಒಂದು ಚೆಂಡಿಗೆ ಒಂದು ರನ್ ಬೇಕಿತ್ತು. ಅಶ್ವಿನ್ ಸ್ಟ್ರೈಕ್ನಲ್ಲಿದ್ದರು. ಈ ವೇಳೆ ತನ್ನಲ್ಲೇ ತಾನು ಮಾತನಾಡಿಕೊಂಡಿದ್ದ ಅಶ್ವಿನ್, ಈ ಒಂದು ಬಾಲ್ನಲ್ಲಿ ನಾನು ಸಿಂಗಲ್ ಕದಿಯಲು ಸಾಧ್ಯವಾಗದಿದ್ದರೆ ಡ್ರೆಸ್ಸಿಂಗ್ ರೂಮ್‌ಗೆ ಹೋದ ಕೂಡಲೇ ನಿವೃತ್ತಿ ಘೋಷಿಸಬೇಕು ಎಂದು ಅಂದುಕೊಂಡಿದ್ದೆ ಎಂಬ ವಿಚಾರವನ್ನು ಅಶ್ವಿನ್ ಈಗ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್ ಮೇಲೂ ಕೊರೊನಾ ದಾಳಿ; ಸೋಂಕಿನ ನಡುವೆಯೂ ಮೈದಾನಕ್ಕಿಳಿದ ಆಟಗಾರ..!
ಸೋತರೆ ನಿವೃತ್ತಿ ಘೋಷಿಸುತ್ತಿದ್ದೆ- ಅಶ್ವಿನ್
ಪಂದ್ಯದ ನಂತರ ಬಿಸಿಸಿಐ ಟಿವಿಯೊಂದಿಗೆ ಮಾತನಾಡಿದ ಅಶ್ವಿನ್ ಈ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಒಂದು ವೇಳೆ ನವಾಜ್ ಎಸೆದ ಆ ಕೊನೆಯ ಚೆಂಡು ನನ್ನ ಪ್ಯಾಡ್‌ಗೆ ಬಡಿದು, ನಾನು ರನ್ ಗಳಿಸಲು ಸಾಧ್ಯವಾಗದಿದ್ದರೆ, ಡ್ರೆಸ್ಸಿಂಗ್ ರೂಮ್‌ಗೆ ಬಂದು, ನನ್ನ ಟ್ವಿಟರ್ ಅಕೌಂಟ್ ಓಪನ್ ಮಾಡಿ, ಎಲ್ಲರಿಗೂ ಧನ್ಯವಾದಗಳು, ನನ್ನ ಕ್ರಿಕೆಟ್ ಪ್ರಯಾಣ ಅದ್ಭುತವಾಗಿತ್ತು ಎಂದು ಬರೆದು ಪೋಸ್ಟ್ ಮಾಡುತ್ತಿದೆ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.