2017 ರಲ್ಲೇ ಸೈಡ್ಲೈನ್ ಆಗಿದ್ದ ಅಶ್ವಿನ್ ಆಯ್ಕೆಯೇ ಅಚ್ಚರಿ..!
R Ashwin: 2022 ರಲ್ಲಿ ಮತ್ತೆ ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಂಡ ಅಶ್ವಿನ್ ಸೌತ್ ಆಫ್ರಿಕಾ ವಿರುದ್ಧ 2 ಪಂದ್ಯಗಳನ್ನಾಡಿದ್ದರು. ಈ ವೇಳೆ ಒಟ್ಟು 20 ಓವರ್ಗಳನ್ನು ಎಸೆದಿದ್ದ ಅಶ್ವಿನ್ 121 ರನ್ ನೀಡಿ ಪಡೆದಿದ್ದು ಕೇವಲ 1 ವಿಕೆಟ್ ಮಾತ್ರ. ಈ ಸರಣಿಯ ಬಳಿಕ ರವಿಚಂದ್ರನ್ ಅಶ್ವಿನ್ ಅವರನ್ನು ಮತ್ತೆ ತಂಡದಿಂದ ಕೈ ಬಿಡಲಾಯಿತು.
ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ 37 ವರ್ಷದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಕಾಣಿಸಿಕೊಂಡಿದ್ದಾರೆ. ಇತ್ತ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಅಕ್ಷರ್ ಪಟೇಲ್ ಏಷ್ಯಾಕಪ್ನಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಬದಲಿ ಸ್ಪಿನ್ ಆಲ್ರೌಂಡರ್ಗಳಾಗಿ ರವಿಚಂದ್ರನ್ ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ.
ಒಂದು ವೇಳೆ ಅಕ್ಷರ್ ಪಟೇಲ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವಾಡದಿದ್ದರೆ ವಿಶ್ವಕಪ್ ತಂಡದಿಂದ ಕೂಡ ಹೊರಬೀಳಬಹುದು. ಹೀಗೆ ಹೊರಬಿದ್ದರೆ ಅಶ್ವಿನ್ ಅಥವಾ ಸುಂದರ್ಗೆ ಅವಕಾಶ ಸಿಗಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ರವಿಚಂದ್ರನ್ ಅಶ್ವಿನ್ ಏಕದಿನ ಕ್ರಿಕೆಟ್ನಲ್ಲಿ ಪರಿಪೂರ್ಣವಾಗಿ ಕಾಣಿಸಿಕೊಂಡು 6 ವರ್ಷಗಳೇ ಕಳೆದಿವೆ.
ಅಂದರೆ ಅಶ್ವಿನ್ ಏಕದಿನ ಕ್ರಿಕೆಟ್ನಲ್ಲಿ 5 ಕ್ಕಿಂತ ಹೆಚ್ಚು ಪಂದ್ಯವಾಡಿರುವುದು 2017 ರಲ್ಲಿ. ಇದಾದ ಬಳಿಕ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡಿರಲಿಲ್ಲ. ಇನ್ನು 2022 ರಲ್ಲಿ ತಂಡಕ್ಕೆ ಕಂಬ್ಯಾಕ್ ಮಾಡಿದರೂ ಆಡಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ 2019ರ ಏಕದಿನ ವಿಶ್ವಕಪ್ಗೂ ಪರಿಗಣಿಸದ ಅಶ್ವಿನ್ ಅವರನ್ನು ಇದೀಗ ತಮ್ಮ 37ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಆಯ್ಕೆ ಮಾಡಿರುವುದು. ಇತ್ತ ಕಳೆದ 6 ವರ್ಷಗಳಲ್ಲಿ ಹಿರಿಯ ಸ್ಪಿನ್ನರ್ ಯಾವುದೇ ಸ್ಪರ್ಧಾತ್ಮಕ ಏಕದಿನ ಟೂರ್ನಿಗಳಲ್ಲೂ ಕಾಣಿಸಿಕೊಂಡಿಲ್ಲ. ಇದಾಗ್ಯೂ ಏಕಾಏಕಿ ಅಶ್ವಿನ್ ಅವರನ್ನು ಆಯ್ಕೆ ಮಾಡಿರುವುದೇ ಅಚ್ಚರಿ.
2015 ರಿಂದ ಮೋಡಿ ಮಾಡದ ಅಶ್ವಿನ್:
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಸ್ಪಿನ್ನರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಏಕದಿನ ಕ್ರಿಕೆಟ್ನಲ್ಲಿ 2015 ರ ಬಳಿಕ ಅವರ ಪ್ರದರ್ಶನ ಅಷ್ಟಕಷ್ಟೇ ಎನ್ನಬಹುದು.
2015 ರಲ್ಲಿ 13 ಏಕದಿನ ಪಂದ್ಯಗಳಿಂದ ಅವರು 21 ವಿಕೆಟ್ ಕಬಳಿಸಿದ್ದರು. ಇನ್ನು 2016 ರಲ್ಲಿ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು ಪಡೆದಿರುವುದು ಕೇವಲ 2 ವಿಕೆಟ್ಗಳು ಮಾತ್ರ.
2017 ರಲ್ಲಿ 9 ಪಂದ್ಯಗಳಲ್ಲಿ ಕಾಣಿಸಿಕೊಂಡ ಅಶ್ವಿನ್ ಕೇವಲ 8 ವಿಕೆಟ್ ಪಡೆಯಲು ಮಾತ್ರ ಯಶಸ್ವಿಯಾಗಿದ್ದರು. ಇದೇ ಕಾರಣದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
ಇದಾಗ್ಯೂ 2022 ರಲ್ಲಿ ಮತ್ತೆ ಭಾರತ ಏಕದಿನ ತಂಡದಲ್ಲಿ ಕಾಣಿಸಿಕೊಂಡ ಅಶ್ವಿನ್ ಸೌತ್ ಆಫ್ರಿಕಾ ವಿರುದ್ಧ 2 ಪಂದ್ಯಗಳನ್ನಾಡಿದ್ದರು. ಈ ವೇಳೆ ಒಟ್ಟು 20 ಓವರ್ಗಳನ್ನು ಎಸೆದಿದ್ದ ಅಶ್ವಿನ್ 121 ರನ್ ನೀಡಿ ಪಡೆದಿದ್ದು ಕೇವಲ 1 ವಿಕೆಟ್ ಮಾತ್ರ. ಈ ಸರಣಿಯ ಬಳಿಕ ರವಿಚಂದ್ರನ್ ಅಶ್ವಿನ್ ಅವರನ್ನು ಮತ್ತೆ ತಂಡದಿಂದ ಕೈ ಬಿಡಲಾಯಿತು.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ನಾಯಕ
ಇದರ ನಡುವೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದರು. ಆದರೆ 2021 ಮತ್ತು 2022 ರಲ್ಲಿ ಒಟ್ಟು 19 ಟಿ20 ಪಂದ್ಯಗಳನ್ನಾಡಿರುವ ಅಶ್ವಿನ್ ಪಡೆದಿದ್ದು ಕೇವಲ 20 ವಿಕೆಟ್ಗಳು ಮಾತ್ರ. ಇದೀಗ ಏಕದಿನ ವಿಶ್ವಕಪ್ ಸನಿಹದಲ್ಲಿರುವಾಗಲೇ 37 ವರ್ಷದ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿರುವುದು ಅಚ್ಚರಿಯೇ ಸರಿ.