KL Rahul: ನೀವೇ ಹೇಳಿ ಕೆ. ಎಲ್ ರಾಹುಲ್ ಔಟ್ ಅಥವಾ ನಾಟೌಟ್?: ಕ್ರಿಕೆಟ್ ಲೋಕದಲ್ಲಿ ಚರ್ಚೆ ಹುಟ್ಟುಹಾಕಿದೆ ಈ ಕ್ಯಾಚ್

| Updated By: Vinay Bhat

Updated on: Oct 02, 2021 | 12:07 PM

Rahul Tripathi Catch: ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್​ ನಡುವಣ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಕೆ. ಎಲ್ ರಾಹುಲ್ ಅವರ ಕ್ಯಾಚ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗೌತಮ್ ಗಂಭೀರ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

KL Rahul: ನೀವೇ ಹೇಳಿ ಕೆ. ಎಲ್ ರಾಹುಲ್ ಔಟ್ ಅಥವಾ ನಾಟೌಟ್?: ಕ್ರಿಕೆಟ್ ಲೋಕದಲ್ಲಿ ಚರ್ಚೆ ಹುಟ್ಟುಹಾಕಿದೆ ಈ ಕ್ಯಾಚ್
KL Rahul and Rahul Tripathi Catch
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯಲ್ಲಿ (IPL 2021) ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಬಾಜ್ ಕಿಂಗ್ಸ್ (KKR vs PBKS) ನಡುವಣ ಪಂದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರೋಚಕತೆಯಿಂದ ಕೂಡಿದ್ದ ಕದನದಲ್ಲಿ ಪಂಜಾಬ್ ಕಿಂಗ್ಸ್ (Punjab Kings) 5 ವಿಕೆಟ್​ಗಳ ಜಯ ಸಾಧಿಸಿ ಪ್ಲೇ ಆಫ್ ರೇಸ್​ನಲ್ಲಿ ಜೀವಂತವಾಗಿದೆ. ನಾಯಕ ಕೆ. ಎಲ್. ರಾಹುಲ್ (KL Rahul) ಹಾಗೂ ಮಯಾಂಕ್ ಅಗರ್ವಾಲ್ (Mayank Agarwal) ಅವರ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನದಿಂದ ಪಂಜಾಬ್ ಗೆದ್ದು ಬೀಗಿತು. ಕೊನೇಯ ಕ್ಷಣದಲ್ಲಿ ಶಾರುಕ್ ಖಾನ್ (Shahrukh Khan) ಸಿಡಿಸಿದ ಸಿಕ್ಸ್ ಕೂಡ ತಂಡಕ್ಕೆ ಬಹುಮುಖ್ಯವಾಯಿತು. ಆದರೆ, 19ನೇ ಓವರ್​ನಲ್ಲಿ ನಡೆದ ಒಂದು ಘಟನೆ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ತ್ರಿಪಾಠಿ (Rahul Tripathi) ಹಿಡಿದ ಕೆ. ಎಲ್ ರಾಹುಲ್ ಅವರ ಕ್ಯಾಚ್ ಔಟ್ ಅಥವಾ ನಾಟೌಟ್ ಎಂಬ ಬಗ್ಗೆ ಥರ್ಡ್ ಅಂಪೈರ್ ಕೊಟ್ಟ ತೀರ್ಮಾನ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು, ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ ಕೊನೇಯ 9 ಎಸೆತದಲ್ಲಿ 11 ರನ್ ಅವಶ್ಯಕತೆಯಿತ್ತು. ಈ ವೇಳೆ ನಾಯಕ ಕೆ. ಎಲ್ ರಾಹುಲ್ ಚೆಂಡನ್ನು ಮಿಡ್ ವಿಕೆಟ್ ಕಡೆಗೆ ಬಾರಿಸಿದರು. ಈ ಸಂದರ್ಭ ಫೀಲ್ಡರ್ ರಾಹುಲ್ ತ್ರಿಪಾಠಿ ಓಡಿ ಬಂದು ಡೈವ್ ಹಾಕಿ ಚೆಂಡನ್ನು ಹಿಡಿದು ಸಂಭ್ರಮಿಸಿದರು. ಆದರೆ ಕ್ಯಾಚ್ ಪರಿಶೀಲಿಸಿದ ಥರ್ಡ್ ಅಂಪೈರ್, ಚೆಂಡು ನೆಲ ಸ್ಪರ್ಷಿಸಿದೆ ಎಂದು ನಾಟೌಟ್ ಎಂದು ತೀರ್ಪು ನೀಡಿದರು. ನಂತರ ಪಂಜಾಬ್ ಗೆಲುವು ಸಾಧಿಸಿದ್ದು ಗೊತ್ತೇ ಇದೆ.

ಆದರೆ ಈ ತೀರ್ಪಿನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಥರ್ಡ್ ಅಂಪೈರ್ ರಿಪ್ಲೇ ಒಂದು ಬಾರಿಗಿಂತ ಹೆಚ್ಚು ನೋಡಿಲ್ಲ. ಒಂದು ವೇಳೆ ಕೆ. ಎಲ್ ರಾಹುಲ್ ಔಟಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ಇಂತಹ ಘಟನೆಗಳು ಐಪಿಎಲ್ ನಲ್ಲಿ ಮರುಕಳಿಸಬಾರದು ಎಂದು ಗಂಭೀರ್ ಹೇಳಿದ್ದಾರೆ. ಅಲ್ಲದೆ “ಇದು ನಾನು ನೋಡಿದ ಅತ್ಯಂತ ಕೆಟ್ಟ ಅಂಪೈರಿಂಗ್ ನಿರ್ಧಾರ’ ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್, ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ (67ರನ್, 49 ಎಸೆತ, 9 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 165 ರನ್ ಕಲೆಹಾಕಿತು. ಒಂದು ಹಂತದಲ್ಲಿ 180 ರನ್ ಪೇರಿಸುವ ಅವಕಾಶ ಹೊಂದಿದ್ದ ಕೆಕೆಆರ್ ತಂಡಕ್ಕೆ ಸ್ಪಿನ್ನರ್ ರವಿ ಬಿಷ್ಣೋಯಿ (22ಕ್ಕೆ2) ಹಾಗೂ ಅರ್ಷದೀಪ್ ಸಿಂಗ್ (32ಕ್ಕೆ 3) ಆಘಾತ ನೀಡಿತು.

166 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಸ್ಫೋಟಕ ಆರಂಭ ಪಡೆದುಕೊಂಡಿತು. ಕನ್ನಡಿಗರಾದ ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಮಯಾಂಕ್ 27 ಎಸೆತಗಳಲ್ಲಿ 40 ರನ್ ಹಾಗೂ ರಾಹುಲ್ 55 ಎಸೆತಗಳಲ್ಲಿ 67 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಪ್ಲೇ ಆಫ್​ ಆಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಈವರೆಗೆ ಒಟ್ಟು 12 ಪಂದ್ಯಗಳನ್ನು ಆಡಿದ್ದು 5 ಪಂದ್ಯಗಳನ್ನ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.236 ನೆಟ್​ರೇಟ್​ನೊಂದಿಗೆ ಐದನೇ ಸ್ಥಾನದಲ್ಲಿದೆ.

IPL 2021 Teams Points Table: ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನಕ್ಕೆ ಜಿಗಿದ ಪಂಜಾಬ್ ಕಿಂಗ್ಸ್: ಇಲ್ಲಿದೆ ಇತರೆ ತಂಡಗಳ ಅಂಕ

Chirs Gayle: ಕ್ರಿಸ್ ಗೇಲ್​ರನ್ನು ಪಂಜಾಬ್ ತಂಡ ಸರಿಯಾಗಿ ಉಪಯೋಗಿಸಿ ಹೊರ ದಬ್ಬಿದೆ ಎಂದ ಪೀಟರ್ಸನ್

(Rahil Tripathi catch to dismiss KL Rahul was ruled out by the third umpire on KKR vs PBKS IPL 2021 Match)