ಅಫ್ಘಾನಿಸ್ತಾನ್ ತಂಡದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಝ್ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಇದೀಗ ಎಲ್ಲರ ಹೃದಯ ಗೆದ್ದಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ್ ತನ್ನ ಕೊನೆಯ ಪಂದ್ಯವಾಡಿತ್ತು. ಮರುದಿನ ಮುಂಜಾನೆ ರಹಮಾನುಲ್ಲಾ ಗುರ್ಬಾಝ್ ಅಹಮದಾಬಾದ್ನ ಪ್ರಮುಖ ಬೀದಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಳಿಗ್ಗಿನ ಜಾವ 3 ಗಂಟೆಗೆ ಅಹಮದಾಬಾದ್ನ ಬೀದಿ ಬದಿಯಲ್ಲಿ ಮಲಗಿದ್ದ ನಿರ್ಗತಿಕರಿಗೆ ರಹಮಾನುಲ್ಲಾ ಗುರ್ಬಾಝ್ ಹಣ ಹಂಚಿದ್ದಾರೆ. ಎಲ್ಲರೂ ಗಾಢ ನಿದ್ದೆಯಲ್ಲಿದ್ದ ವೇಳೆ ಗುರ್ಬಾಝ್ ಅವರ ಬಳಿ ಹಣವನ್ನಿಟ್ಟು ತೆರಳಿದ್ದಾರೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇದೀಗ ಅಫ್ಘಾನ್ ಆಟಗಾರನ ಮಾನವೀಯ ಗುಣದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಹಮಾನುಲ್ಲಾ ಗುರ್ಬಾಝ್ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ವಿಶೇಷ ಎಂದರೆ ಈ ವಿಡಿಯೋವನ್ನು ರಹಮಾನುಲ್ಲಾ ಗುರ್ಬಾಝ್ ಅವರಿಗೆ ತಿಳಿಯದಂತೆ ಚಿತ್ರೀಕರಿಸಲಾಗಿದೆ. ಇದರಿಂದಾಗಿ ಅಫ್ಘಾನ್ ಆಟಗಾರನ ಮಾನವೀಯತೆ ಬೆಳಕಿಗೆ ಬಂದಿದೆ.
ಇತ್ತ ಭಾರತದಲ್ಲಿ ಕ್ರಿಕೆಟ್ ಆಡಲು ಬಂದು ಇಲ್ಲಿನ ಬಡವರಿಗೆ ಸಹಾಯ ಮಾಡಿ ತೆರಳಿರುವ ರಹಮಾನುಲ್ಲಾ ಗುರ್ಬಾಝ್ ಅವರ ಮಾನವೀಯತೆಗೆ ಇದೀಗ ಭಾರತೀಯರು ಹಾಡಿ ಹೊಗಳುತ್ತಿರುವುದು ವಿಶೇಷ.
ಸದ್ಯ ವಿಶ್ವಕಪ್ ಮುಗಿಸಿ ತೆರಳಿರುವ ರಹಮಾನುಲ್ಲಾ ಗುರ್ಬಾಝ್ ಮುಂಬರುವ ಐಪಿಎಲ್ಗಾಗಿ ಮತ್ತೆ ಭಾರತಕ್ಕೆ ಬರಲಿದ್ದಾರೆ ಎನ್ನಬಹುದು. ಏಕೆಂದರೆ ಅಫ್ಘಾನಿಸ್ತಾನ್ ತಂಡದ ಈ ಯುವ ದಾಂಡಿಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು, ಮುಂಬರುವ ಸೀಸನ್ನಲ್ಲೂ ಕೆಕೆಆರ್ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಧೋನಿಯ 18 ವರ್ಷದ ಹಿಂದಿನ ದಾಖಲೆ ಮುರಿದ ಗುರ್ಬಾಝ್
ಒಟ್ಟಿನಲ್ಲಿ ಈ ಬಾರಿಯ ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಫ್ಘಾನಿಸ್ತಾನ್ ತಂಡ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದರು. ಇದೀಗ ಅದೇ ತಂಡದ ಆಟಗಾರನ ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.
Published On - 8:28 pm, Mon, 13 November 23