ಶ್ರೀಲಂಕಾ ಸರಣಿಯಲ್ಲಿ ( India vs Sri Lanka ) ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ( Rahul Dravid ) ಸಾರಥ್ಯವಹಿಸಿದ್ದರು. ಅಷ್ಟೇ ಅಲ್ಲದೆ ಯುವ ಪಡೆಯೊಂದಿಗೆ ಲಂಕಾ ವಿರುದ್ದ ಏಕದಿನ ಸರಣಿಯನ್ನು ಗೆದ್ದುಕೊಂಡಿದ್ದರು. ಇದೀಗ ಶ್ರೀಲಂಕಾ ಸರಣಿ ಮುಕ್ತಾಯವಾಗುತ್ತಿದ್ದಂತೆ ದ್ರಾವಿಡ್ ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ತಾತ್ಕಾಲಿಕ ಕೋಚ್ ಆಗಿ ಕಾರ್ಯನಿರ್ವಹಿಸಿರುವ ದ್ರಾವಿಡ್ ಅವರ ಕಾರ್ಯ ವೈಖರಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿವೆ. ಹೀಗಾಗಿ ಅವರು ಟೀಮ್ ಇಂಡಿಯಾದ ( Team India ) ಪೂರ್ಣ ಪ್ರಮಾಣದ ಕೋಚ್ ಆಗಲಿದ್ದಾರಾ ಎಂಬುದೇ ಇದೀಗ ಕುತೂಹಲ.
ಅತ್ತ ಟೀಮ್ ಇಂಡಿಯಾ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಅವಧಿಯು ಟಿ20 ವಿಶ್ವಕಪ್ನೊಂದಿಗೆ ಕೊನೆಗೊಳ್ಳಲಿದೆ. ಹೀಗಾಗಿ ಅವರ ಸ್ಥಾನಕ್ಕೆ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಖುದ್ದು ದ್ರಾವಿಡ್ ಅವರನ್ನೇ ಕೇಳಲಾಗಿದ್ದು, ಆ ವೇಳೆ ನಾನಿನ್ನೂ ಟೀಮ್ ಇಂಡಿಯಾದ ಕೋಚಿಂಗ್ ಹುದ್ದೆ ಯೋಚಿಸಿಲ್ಲ ಎಂದಿದ್ದಾರೆ ದಿ ವಾಲ್.
ಇದೇ ವೇಳೆ ಶ್ರೀಲಂಕಾ ಪ್ರವಾಸದಲ್ಲಿ ತರಬೇತುದಾರನ ಜವಾಬ್ದಾರಿಯನ್ನು ಆನಂದಿಸಿರುವುದಾಗಿ ದ್ರಾವಿಡ್ ತಿಳಿಸಿದರು. ಇನ್ನು ಭವಿಷ್ಯದಲ್ಲಿ ಟೀಮ್ ಇಂಡಿಯಾಗೆ ನೀವು ಕೋಚ್ ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನನ್ನ ಕೆಲಸವನ್ನು ನಾನು ಪ್ರಾಮಾಣಿಕ ಮಾಡಿದ್ದೇನೆ. ಆ ಬಗ್ಗೆ ನನಗೆ ಸಂತೋಷವಾಗಿದೆ. ನನ್ನ ಮಟ್ಟಿಗೆ, ಶ್ರೀಲಂಕಾ ಪ್ರವಾಸವನ್ನು ಹೊರತುಪಡಿಸಿ ಬೇರೆ ಯಾವುದೇ ಆಲೋಚನೆಯನ್ನು ನಾನು ಮಾಡಿಲ್ಲ ಎಂದರು. ಈ ಮೂಲಕ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಶಿಫಾರಸ್ಸು ಮಾಡಿದರೆ ಆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ರಾಹುಲ್ ದ್ರಾವಿಡ್ ಪರೋಕ್ಷವಾಗಿ ತಿಳಿಸಿದ್ದಾರೆ.
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಿರ್ದೇಶಕರಾಗಿರುವ ದ್ರಾವಿಡ್, ಭಾರತ ಅಂಡರ್ -19 ತಂಡ ಮತ್ತು ಭಾರತ ಎ ತಂಡಕ್ಕೂ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಚೊಚ್ಚಲ ಬಾರಿ ಹಿರಿಯ ತಂಡಕ್ಕೆ ಕೋಚ್ ಆಗಿ ಆಯ್ಕೆಯಾದ ದ್ರಾವಿಡ್ ಶ್ರೀಲಂಕಾ ಸರಣಿ ಮೂಲಕ ಮತ್ತೊಮ್ಮೆ ತಮ್ಮ ಕಾರ್ಯ ವೈಖರಿಯನ್ನು ತೆರೆದಿಟ್ಟಿದ್ದಾರೆ. ಲಂಕಾ ವಿರುದ್ದ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಲ್ಲಿ ಗೆದ್ದುಕೊಂಡಿದೆ. ಹಾಗೆಯೇ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಟಿ20 ಸರಣಿಯಲ್ಲಿ ಭಾರತ ತಂಡ 1-2 ಅಂತರದಿಂದ ಸೋಲುಂಡಿದೆ. ಇದಾಗ್ಯೂ ಯುವ ಪಡೆಯನ್ನು ಕಣಕ್ಕಿಳಿಸಿ ಪ್ರಯೋಗ ಮಾಡಿರುವ ದ್ರಾವಿಡ್ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Rahul Dravid comments on permanent Team India coach job)