
ಟೀಮ್ ಇಂಡಿಯಾ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಅನ್ವಯ್ ದ್ರಾವಿಡ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಭರ್ಜರಿ ಪ್ರದರ್ಶನ. ಈ ಪ್ರದರ್ಶನದೊಂದಿಗೆ 16 ವರ್ಷದ ಅನ್ವಯ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
ಅಕ್ಟೋಬರ್ 5 ರಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅನ್ವಯ್ ದ್ರಾವಿಡ್ ಅತ್ಯುತ್ತಮ ಕಿರಯ ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ. ಅಂಡರ್ 16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಕೆಎಸ್‌ಸಿಎ ಅನ್ವಯ್ಗೆ ಈ ಪ್ರಶಸ್ತಿ ನೀಡಿದೆ.
ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡದ ಪರ ಕಣಕ್ಕಿಳಿದ ಅನ್ವಯ್ ಎಂಟು ಇನಿಂಗ್ಸ್ಗಳಿಂದ ಒಟ್ಟು 459 ರನ್ ಕಲೆಹಾಕಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ಎರಡು ಭರ್ಜರಿ ಶತಕಗಳು ಮೂಡಿಬಂದಿವೆ. ಇದರ ನಡುವೆ 48 ಸಿಕ್ಸ್ ಹಾಗೂ ಫೋರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ 91.80 ಸರಾಸರಿಯಲ್ಲಿ ರನ್ಗಳಿಸಿ ಈ ಬಾರಿಯ ವಿಜಯ ಮರ್ಚೆಂಟ್ ಟೂರ್ನಿಯಲ್ಲಿ ಕರ್ನಾಟಕ ಪರ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಭರ್ಜರಿ ಪ್ರದರ್ಶನ ಫಲವಾಗಿ ಇದೀಗ ಕರ್ನಾಟಕದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ಅನ್ವಯ್ ಪಾಲಾಗಿದೆ. ಅಂದಹಾಗೆ ಅನ್ವಯ್ ದ್ರಾವಿಡ್ ಈ ಪ್ರಶಸ್ತಿ ಪಡೆಯುತ್ತಿರುವುದು ಇದೇ ಮೊದಲೇನಲ್ಲ. 2024 ರಲ್ಲಿ ನಡೆದ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಒಟ್ಟು 357 ರನ್ಗಳಿಸಿ ಕಳೆದ ವರ್ಷವೇ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕದ ಕಿರಿಯ ಬ್ಯಾಟರ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಮಯಾಂಕ್ ಅಗರ್ವಾಲ್ ಏಕದಿನ ಬ್ಯಾಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮಯಾಂಕ್ 93 ರ ಸರಾಸರಿಯಲ್ಲಿ ಒಟ್ಟು 651 ರನ್ ಗಳಿಸಿ ಮಿಂಚಿದ್ದರು.
ರಣಜಿ ಟ್ರೋಫಿಯಲ್ಲಿನ ಪ್ರದರ್ಶನಕ್ಕಾಗಿ ಯುವ ಆಟಗಾರ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಪ್ರಶಸ್ತಿ ಪಡೆದಿದ್ದಾರೆ. ಸ್ಮರಣ್ ಈ ಬಾರಿಯ ರಣಜಿ ಟೂರ್ನಿಯಲ್ಲಿ ಎರಡು ಶತಕಗಳೊಂದಿಗೆ 64.50 ರ ಸರಾಸರಿಯಲ್ಲಿ 516 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್
ಹಾಗೆಯೇ ಸೈಯದ್ಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್. ಶ್ರೀಜಿತ್ ಅವರು ಈ ಬಾರಿಯ ಟಿ20 ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ.
Published On - 9:03 am, Mon, 6 October 25