SRH vs KKR: ಅಯ್ಯರ್ ಪಡೆಗೆ ಮಣ್ಣು ಮುಕ್ಕಿಸಿದ ತ್ರಿಪಾಠಿ-ಮರ್ಕ್ರಮ್: ಹೈದರಾಬಾದ್​ ಹೀಗೊಂದು ಕಮ್​ಬ್ಯಾಕ್

| Updated By: Vinay Bhat

Updated on: Apr 16, 2022 | 7:37 AM

Rahul Tripathi and Aiden Markram: ರಾಹುಲ್ ತ್ರಿಪಾಠಿ ಹಾಗೂ ಆ್ಯಡಂ ಮರ್ಕ್ರಮ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಹೈದರಾಬಾದ್ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಇದರೊಂದಿಗೆ ಕೇನ್ ಪಡೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು, ಮೂರರಲ್ಲಿ ಜಯ ಗಳಿಸಿ ಏಳನೇ ಸ್ಥಾನಕ್ಕೇರಿದೆ.

SRH vs KKR: ಅಯ್ಯರ್ ಪಡೆಗೆ ಮಣ್ಣು ಮುಕ್ಕಿಸಿದ ತ್ರಿಪಾಠಿ-ಮರ್ಕ್ರಮ್: ಹೈದರಾಬಾದ್​ ಹೀಗೊಂದು ಕಮ್​ಬ್ಯಾಕ್
Aiden Markram and Rahul Tripathi
Follow us on

ಆರಂಭದ ಎರಡು ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ ಪಾತಾಳದಲ್ಲಿದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ತಂಡ ಇದೀಗ ಯಾರೂ ಊಹಿಸಲಾಗದ ರೀತಿಯಲ್ಲಿ ಕಮ್​ಬ್ಯಾಕ್ ಮಾಡಿದೆ. ಶುಕ್ರವಾರ ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ (SRH vs KKR)​ ವಿರುದ್ಧದ ಪಂದ್ಯದಲ್ಲೂ ಎಸ್​ಆರ್​ಹೆಚ್ ಗೆಲುವು ಸಾಧಿಸಿದೆ. ಈ ಮೂಲಕ ಹ್ಯಾಟ್ರಿಕ್ ಜಯದೊಂದಿಗೆ ಐಪಿಎಲ್ 2022ರ (IPL 2022) ಪಾಯಿಂಟ್ ಟೇಬಲ್​​ನಲ್ಲಿ ಮೇಲಕ್ಕೇರಿದೆ. ರಾಹುಲ್ ತ್ರಿಪಾಠಿ (Rahul Tripathi) ಹಾಗೂ ಆ್ಯಡಂ ಮರ್ಕ್ರಮ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಹೈದರಾಬಾದ್ 7 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಇದರೊಂದಿಗೆ ಕೇನ್ ಪಡೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು, ಮೂರರಲ್ಲಿ ಜಯ ಗಳಿಸಿ ಏಳನೇ ಸ್ಥಾನಕ್ಕೇರಿದೆ. ಇತ್ತ ಅಯ್ಯರ್ ಪಡೆ ಮೂರನೇ ಸೋಲಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಆರೋನ್ ಫಿಂಚ್(7) ಮತ್ತು ವೆಂಕಟೇಶ್ ಅಯ್ಯರ್(6) ಕಳಪೆ ಆರಂಭವನ್ನು ನೀಡಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ನಾಯಕ ಶ್ರೇಯಸ್ ಅಯ್ಯರ್ 28 ರನ್, ಸುನಿಲ್ ನರೈನ್ 6 ರನ್, ಶೆಲ್ಡನ್ ಜಾಕ್ಸನ್ 7 ರನ್, ಪ್ಯಾಟ್ ಕಮಿನ್ಸ್ 3 ರನ್, ಅಮನ್ ಹಕೀಮ್ ಖಾನ್ 5 ರನ್ ಮತ್ತು ಉಮೇಶ್ ಯಾದವ್ ಅಜೇಯ 1 ರನ್ ಕಲೆ ಹಾಕಿದರು. ತಂಡ ಮೊದಲ 3 ವಿಕೆಟ್‍ಗಳನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 36 ಎಸೆತಗಳಲ್ಲಿ 54 ರನ್ ಬಾರಿಸಿ ಆಸರೆಯಾದರು.

ಅಂತಿಮ ಹಂತದಲ್ಲಿ ಅಬ್ಬರಿಸಿದ ಆಯಂಡ್ರೆ ರಸೆಲ್ 25 ಎಸೆತಗಳಲ್ಲಿ ಅಜೇಯ 49 ರನ್ ಚಚ್ಚಿ ತಂಡದ ಮೊತ್ತವನ್ನು ಹೆಚ್ಚಿಸಿದರು. 4 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದ ಆಯಂಡ್ರೆ ರಸೆಲ್ ಜಗದೀಶ ಸುಚಿತ್ ಎಸೆದ ಅಂತಿಮ ಓವರ್‌ನ ಕೊನೆಯ 3 ಎಸೆತಗಳಲ್ಲಿ ಕ್ರಮವಾಗಿ 6,6,4 ಚಚ್ಚಿ ಅಬ್ಬರಿಸಿದರು. ಪರಿಣಾಮ ಕೆಕೆಆರ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಹೈದರಾಬಾದ್ ಪರ ನಟರಾಜನ್ 3 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ 2 ವಿಕೆಟ್ ಕಿತ್ತರು.

176 ರನ್‌ಗಳ ಜಯ ಗುರಿ ಬೆ‌ನ್ನತ್ತಿದ ಸನ್‌ರೈಸರ್ಸ್ 3 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ತಂಡವು 39 ರನ್ ಗಳಿಸುವಷ್ಟರಲ್ಲಿ ಅಭಿಷೇಕ್ ಶರ್ಮಾ (3) ಹಾಗೂ ನಾಯಕ ಕೇನ್ ವಿಲಿಯಮ್ಸನ್ (17) ಪೆವಿಲಿಯನ್‌ಗೆ ಮರಳಿದರು. ಈ ಸಂದರ್ಭದಲ್ಲಿ ಜೊತೆಗೂಡಿದ ರಾಹುಲ್ ತ್ರಿಪಾಠಿ ಹಾಗೂ ಆ್ಯಡಂ ಮರ್ಕ್ರಮ್ ತಂಡವನ್ನು ಮುನ್ನಡೆಸಿದರು. ಆ್ಯಡಂ ಎಚ್ಚರಿಕೆಯ ಆಟಕ್ಕೆ ಮುಂದಾದರೆ ತ್ರಿಪಾಠಿ ಸ್ಫೋಟಕ ಬ್ಯಾಟಿಂಗ್​ಗೆ ಮುಂದಾದರು.

ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ತ್ರಿಪಾಠಿ ಅಬ್ಬರಿಸಿದರು. ಅಲ್ಲದೆ ಮೂರನೇ ವಿಕೆಟ್‌ಗೆ ಮರ್ಕ್ರಮ್ ಜೊತೆಗೆ 54 ಎಸೆತಗಳಲ್ಲಿ 94 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. 37 ಎಸೆತಗಳನ್ನು ಎದುರಿಸಿದ ತ್ರಿಪಾಠಿ ನಾಲ್ಕು ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿದರು. ತ್ರಿಪಾಠಿ ಔಟ್ ಆದ ಬೆನ್ನಲ್ಲೇ ಬಿರುಸಿನ ಆಟವನ್ನು ಪ್ರದರ್ಶಿಸಿದ ಮರ್ಕ್ರಮ್ 31 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿ ಒಟ್ಟು 68 ರನ್ ಗಳಿಸಿ (6 ಫೋರ್, 4 ಸಿಕ್ಸ್) ಔಟಾಗದೆ ಉಳಿದರು. ಎಸ್​ಆರ್​​ಹೆಚ್ 17.5 ಓವರ್​ನಲ್ಲೇ ಗುರಿ ತಲುಪಿ ಭರ್ಜರಿ ಗೆಲುವು ಸಾಧಿಸಿತು.

Deepak Chahar Injury: ಸೋಲಿನ ಸುಳಿಯಲ್ಲಿರುವ ಚೆನ್ನೈಗೆ ಆಘಾತ; ಐಪಿಎಲ್​ನಿಂದ ದೀಪಕ್ ಚಹರ್ ಔಟ್!