SRH vs RR: ಐಪಿಎಲ್​ನಲ್ಲಿಂದು ಹೈದರಾಬಾದ್-ರಾಜಸ್ಥಾನ್ ಮುಖಾಮುಖಿ: ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು

| Updated By: Vinay Bhat

Updated on: Mar 29, 2022 | 9:14 AM

Rajasthan Royals vs Sunrisers Hyderabad: ಐಪಿಎಲ್​ನಲ್ಲಿಂದು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೂ ಇದು ಐಪಿಎಲ್ 2022ರ ಚೊಚ್ಚಲ ಪಂದ್ಯವಾಗಿದ್ದು ಯಾರು ಗೆಲುವಿನ ಆರಂಭ ಪಡೆದುಕೊಳ್ಳುತ್ತಾರೆ ಎಂಬುದು ನೋಡಬೇಕಿದೆ

SRH vs RR: ಐಪಿಎಲ್​ನಲ್ಲಿಂದು ಹೈದರಾಬಾದ್-ರಾಜಸ್ಥಾನ್ ಮುಖಾಮುಖಿ: ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು
SRH vs RR IPL 2022
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ನಡೆಯಲಿರುವ ಐದನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (SRH vs RR) ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೂ ಇದು ಐಪಿಎಲ್ 2022ರ (IPL 2022) ಚೊಚ್ಚಲ ಪಂದ್ಯವಾಗಿದ್ದು ಯಾರು ಗೆಲುವಿನ ಆರಂಭ ಪಡೆದುಕೊಳ್ಳುತ್ತಾರೆ ಎಂಬುದು ನೋಡಬೇಕಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ದೃಷ್ಟಿಯಿಂದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ (Sanju Samson) ವೈಯಕ್ತಿಕವಾಗಿ ಈ ಟೂರ್ನಿ ಬಹುಮುಖ್ಯವಾಗಿದೆ. 2008ರ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್‌ಗೆ ಮತ್ತೆ ಚಾಂಪಿಯನ್ ಪಟ್ಟ ದೊರಕಿಸಿಕೊಡುವ ಅವರ ಕನಸು ನನಸಾಗಬೇಕಾದರೆ ಗೆಲುವಿನ ಆರಂಭ ಸಿಗಬೇಕಾಗಿದೆ. ಇತ್ತ ಸನ್​ರೈಸರ್ಸ್​ ಕೂಡ ಪ್ರಶಸ್ತಿ ಕನಸಿನೊಂದಿಗೆ ಕಣಕ್ಕಿಳಿಯಲು ತಯಾರಾಗಿದೆ.

ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್‌ ಜಾಸ್‌ ಬಟ್ಲರ್‌ ಮತ್ತು ಮಾಜಿ ಆರ್‌ಸಿಬಿ ಆಟಗಾರ ದೇವದತ್ತ ಪಡಿಕ್ಕಲ್‌ ರಾಜಸ್ಥಾನ್ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದರ ನಡುವೆ ಯಶಸ್ವಿ ಜೈಸ್ವಾಲ್‌ ಕೂಡ ಓಪನಿಂಗ್‌ ರೇಸ್‌ನಲ್ಲಿದ್ದಾರೆ. ಪವರ್‌ ಹಿಟ್ಟರ್‌ಗಳಾದ ಸಂಜು ಸ್ಯಾಮ್ಸನ್‌, ಶಿಮ್ರೊನ್‌ ಹೆಟ್‌ಮೈರ್‌, ಡುಸೆನ್‌, ಜಿಮ್ಮಿ ನೀಶಮ್‌, ರಿಯಾನ್‌ ಪರಾಗ್‌, ಕರುಣ್‌ ನಾಯರ್‌ ಅವರೆಲ್ಲ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಆರ್​ಆರ್​ ತಂಡದ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಪ್ರಮುಖವಾಗಿ ಆರ್‌. ಅಶ್ವಿ‌ನ್‌ ಮತ್ತು ಯಜ್ವೇಂದ್ರ ಚಹಲ್‌ ಸ್ಪಿನ್ ಅಸ್ತ್ರಗಳಾಗಿದ್ದಾರೆ. ಇವರ 8 ಓವರ್‌ ನಿರ್ಣಾಯಕ ಪಾತ್ರ ವಹಿಸಲಿದೆ. ವೇಗಕ್ಕೆ ಟ್ರೆಂಟ್‌ ಬೌಲ್ಟ್, ಪ್ರಸಿದ್ಧ್ ಕೃಷ್ಣ, ನವದೀಪ್‌ ಸೈನಿ, ನಥನ್‌ ಕೋಲ್ಟರ್‌ ನೈಲ್‌, ಕೆ.ಸಿ. ಕಾರ್ಯಪ್ಪ ಇದ್ದಾರೆ.

ಇತ್ತ ಹೈದರಾಬಾದ್ ತಂಡದ ಪರ ಅನುಭವಿ ನಾಯಕ ಕೇನ್ ವಿಲಿಯಮ್ಸನ್ ಅವರು ಬ್ಯಾಟಿಂಗ್ ವಿಭಾಗದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಗ್ಲೆನ್ ಫಿಲಿಪ್ಸ್‌, ನಿಕೋಲಸ್ ಪೂರನ್, ಪ್ರಿಯಂ ಗರ್ಗ್‌ ಮತ್ತು ರಾಹುಲ್ ಟ್ರಿಪಾಠಿ ಅವರಿಂದಲೂ ಉತ್ತಮ ಸಾಮರ್ಥ್ಯದ ನಿರೀಕ್ಷೆ ಇದೆ. ಆರ್. ಸಮರ್ಥ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸುತ್ತಾರೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ವೇಗದ ಬೌಲರ್ ಉಮ್ರನ್ ಮಲಿಕ್, ಎಡಗೈ ವೇಗಿ ಟಿ.ನಟರಾಜನ್ ಬೆಂಬಲವಿದ್ದರೆ, ಸ್ಪಿನ್ ವಿಭಾಗದಲ್ಲಿ ಟಿ20 ತಜ್ಞ ವಾಷಿಂಗ್ಟನ್ ಸುಂದರ್ ಜತೆಗೆ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಜೆ.ಸುಚಿತ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯಗಳ ಪೈಕಿ ಸನ್ ರೈಸರ್ಸ್ ಹೈದರಾಬಾದ್ 8 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ರಾಜಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ಒಟ್ಟಾರೆ ಮುಖಾಮುಖಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೊಂಚ ಮೇಲುಗೈ ಸಾಧಿಸಿದೆ.

ಪಿಚ್ ಹೇಗಿದೆ?: ಪುಣೆ ಪಿಚ್ ಹೆಚ್ಚು ಬೌನ್ಸಿಯಾಗಿರಲಿದ್ದು ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯಿದೆ. ಆರಂಭದಲ್ಲಿ ಬೌಲರ್‌ಗಳಿಗೆ ನೆರವು ನೀಡಿದರೂ ನಂತರ ಬ್ಯಾಟರ್‌ಗಳ ಪರವಾಗಿರಲಿದೆ. ಹೂಗಾಗಿ ಬೃಹತ್ ಮೊತ್ತದ ಕಾದಾಟವನ್ನು ಮಂಗಳವಾರ ಈ ಎರಡು ತಂಡಗಳ ಮಧ್ಯೆ ನಿರೀಕ್ಷಿಸಬಹುದಾಗಿದೆ.

ಎಸ್​ಆರ್​ಹೆಚ್ ಸಂಭಾವ್ಯ ಪ್ಲೇಯಿಂಗ್ 11: ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್,ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್.

ಆರ್​ಆರ್​​ ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಮ್ಸ್ ನೀಶಮ್, ಆರ್. ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ.

IPL 2022, GT vs LSG: ಹಾರ್ದಿಕ್ ಮ್ಯಾಜಿಕ್: ಮೊದಲ ಪಂದ್ಯದಲ್ಲೇ ಕೆಎಲ್ ರಾಹುಲ್ ನಾಯಕನಾಗಿ ಫೇಲ್

Published On - 8:46 am, Tue, 29 March 22