KL Rahul: ಆತ ನಮ್ಮ ತಂಡದ ಎಬಿ ಡಿವಿಲಿಯರ್ಸ್ ಎಂದ ಕೆಎಲ್ ರಾಹುಲ್: ಯಾರು ಗೊತ್ತೇ ಆ ಪ್ಲೇಯರ್?
Ayush Badoni: ಗುಜರಾತ್ ಲಯನ್ಸ್ ವಿರುದ್ಧ ಸೋತ ಬಳಿಕ ಮಾತನಾಡಿದ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಆಯುಷ್ ಬದೋನಿ ಅವರನ್ನು ಹಾಡಿಹೊಗಳಿದ್ದು, ಇವರನ್ನು ಮಿ. 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ಗೆ ಹೋಲಿಸಿದ್ದಾರೆ.
ಐಪಿಎಲ್ 2022ರ (IPL 2022) ಎರಡು ಹೊಸ ತಂಡಗಳ ನಡುವಣ ಕಾದಾಟದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಲಯನ್ಸ್ ಘರ್ಜಿಸಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಅನುಭವಿಗಳನ್ನು ಹೊಂದಿದ್ದ ಕೆಎಲ್ ರಾಹುಲ್ ಪಡೆಗೆ ಹಾರ್ದಿಕ್ ಪಾಂಡ್ಯ ಶಾಕ್ ನೀಡಿದರು. ಪಂದ್ಯವನ್ನು ಸೋತರೂ ಕೆಎಲ್ ರಾಹುಲ್ (KL Rahul) ತಮ್ಮ ತಂಡದ ಆಟಗಾರರ ಕೈಬಿಡಲಿಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಹುಲ್ ಅವರು ಪ್ರಮುಖವಾಗಿ ಒಬ್ಬ ಆಟಗಾರನನ್ನು ಹಾಡಿಹೊಗಳಿದ್ದು, ಇವರನ್ನು ಮಿ. 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ಗೆ ಹೋಲಿಸಿದ್ದಾರೆ. ಅವರು ಮತ್ಯಾರು ಅಲ್ಲ, ಸೋಮವಾರದ ಪಂದ್ಯದಲ್ಲಿ ಲಖನೌ ತಂಡದ ಪರ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದ ಆಯುಷ್ ಬದೋನಿ (Ayush Badoni). ಆಯುಷ್ ಅವರನ್ನು ರಾಹುಲ್ ಹಾಡಿ ಹೊಗಳಿದ್ದು, ಇವರ ಆಟಕ್ಕೆ ಮನಸೋತಿದ್ದಾರೆ.
ಯುವ ಬ್ಯಾಟರ್ ಆಯುಷ್ ಬದೋನಿ ಬಗ್ಗೆ ಮತನಾಡಿದ ರಾಹುಲ್, “ಆಯುಷ್ ನಮಗೆ ಬೇಬಿ ಎಬಿ ಡಿವಿಲಿಯರ್ಸ್ ಇದ್ದಂತೆ. ಐಪಿಎಲ್ 2022ರ ಮೊದಲ ಪಂದ್ಯದಲ್ಲೇ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಒಬ್ಬ ಚಿಕ್ಕ ಹುಡುಗ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ತೋರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಮಗ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಯುವ ಆಟಗಾರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವುದು ಆದರ್ಶವಲ್ಲ. ಆದರೆ ಒತ್ತಡದ ಸನ್ನಿವೇಶದಲ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಅವರು ಇದೇರೀತಿ ಪ್ರದರ್ಶನ ತೋರುತ್ತಾರೆ ಎಂಬ ನಂಬಿಕೆಯಿದೆ,” ಎಂದು ರಾಹುಲ್ ಹೇಳಿದ್ದಾರೆ.
ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಾಗ ದೀಪಕ್ ಹೂಡ್ ಜೊತೆಗೂಡಿ ಬದೋನಿ ಗುಜರಾತ್ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದಲೇ ನಿಭಾಯಿಸಿದರು. ಆರಂಭದಲ್ಲಿ ನಿಧಾನವಾಗಿ ಆಡತೊಡಗಿದ ಇವರು ಬಳಿಕ ಬಿರುಸಿನ ಬ್ಯಾಟಿಂಗಿಗೆ ಮುಂದಾದರು. ಅಲ್ಲಿಯ ತನಕ ಘಾತಕ ಲಯದಲ್ಲಿ ಸಾಗುತ್ತಿದ್ದ ಗುಜರಾತ್ ಬೌಲಿಂಗ್ ಹಳಿತಪ್ಪತೊಡಗಿತು. ಈ ಜೋಡಿ 5ನೇ ವಿಕೆಟಿಗೆ 87 ರನ್ ಪೇರಿಸಿ ಲಖನೌ ಹೋರಾಟವನ್ನು ಜಾರಿಯಲ್ಲಿರಿಸಿತು. 15ನೇ ಓವರ್‌ನಲ್ಲಿ ತಂಡದ ಮೊತ್ತ ನೂರರ ಗಡಿ ತಲುಪಿತು. ಹೂಡಾ 41 ಎಸೆತಗಳಿಂದ 55 ರನ್ ಬಾರಿಸಿದರು. ಸಿಡಿಸಿದ್ದು 6 ಫೋರ್ ಹಾಗೂ 2 ಸಿಕ್ಸರ್. ಡೆತ್ ಓವರ್‌ನಲ್ಲಿ ಆಯುಷ್ ಬದೋನಿ ಮತ್ತು ಕೃಣಾಲ್ ಪಾಂಡ್ಯ ಜತೆಗೂಡಿದರು. ರನ್ ಬಿರುಸಿನ ಗತಿಯಲ್ಲಿ ಬರತೊಡಗಿತು. 18 ವರ್ಷದ ಆಯುಷ್ ಬದೋನಿ ತಮ್ಮ ಪದಾರ್ಪಣಾ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು. ಬದೋನಿ 41 ಎಸೆತಗಳಿಂದ 54 ರನ್ ಕೊಡುಗೆ ಸಲ್ಲಿಸಿದರು. ಇದರಲ್ಲಿ 3 ಸಿಕ್ಸರ್, 4 ಬೌಂಡರಿ ಒಳಗೊಂಡಿತ್ತು.
ಇನ್ನು ಪಂದ್ಯದ ಬಗ್ಗೆ ಮಾತನಾಡಿದ ರಾಹುಲ್, “ಇದೊಂದು ಅಸಾಧಾರಣ ಪಂದ್ಯವಾಗಿತ್ತು. ಟೂರ್ನಿಯಲ್ಲಿ ಎಂಥಾ ಆರಂಭ. ಬ್ಯಾಟಿಂಗ್ ಶುರು ಮಾಡಿದ ನಮಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ನಾವು ಕಮ್‌ಬ್ಯಾಕ್ ಮಾಡಿದ ಹಾದಿ ಅತ್ಯುತ್ತಮವಾಗಿತ್ತು. ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲಿ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ನಮ್ಮ ಬ್ಯಾಟರ್‌ಗಳು ತಂಡಕ್ಕೆ ಆಸರೆಯಾಗಬಲ್ಲರು ಎಂಬುದನ್ನು ನಿರೂಪಿಸಿದರು. ಈ ಕ್ರೀಡಾಂಗಣದಲ್ಲಿ ಆರಂಭದಲ್ಲಿ ಬ್ಯಾಟ್ ಮಾಡುವುದು ಸುಲಭವಲ್ಲ ಎಂಬುದು ನಮಗೆ ತಿಳಿದಿತ್ತು. ಆದರೆ ನಂತರ ನಾವು ಕಮ್‌ಬ್ಯಾಕ್ ಮಾಡಿದ್ದು ಉತ್ತಮವಾಗಿತ್ತು,” ಎಂದು ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು, “ಈ ಸೋಲಿನಿಂದ ನಾವು ಸಾಖಷ್ಟು ವಿಚಾರಗಳನ್ನು ಕಲಿತಿದ್ದೇವೆ. ಉತ್ತಮವಾಗಿ ಬೌಲಿಂಗ್ ಮಾಡಿದ ಎದುರಾಳಿ ಬೌಲರ್‌ಗಳನ್ನು ಶ್ಲಾಘಿಸಬೇಕು. ಮುಖ್ಯವಾಗಿ ಮೊಹಮ್ಮದ್ ಶಮಿ ಎಂಥಾ ಗುಣಮಟ್ಟದ ವೇಗಿ ಹಾಗೂ ತುಂಬಾ ಅಪಾಯಕಾರಿ ಎಂದು ನಮಗೆ ಚೆನ್ನಾಗಿ ಗೊತ್ತಿದೆ. ನಾವು ಬೌಲಿಂಗ್ ಮಾಡುತ್ತಿದ್ದ ವೇಳೆ ಇಬ್ಬನಿ ಇದ್ದಿದ್ದರಿಂದ ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಸೋಲಿಗೆ ಇದೇ ಕಾರಣ ಎಂದು ನಾನು ಹೇಳುವುದಿಲ್ಲ. ಗೆಲುವು ಸಾಧಿಸಿದ ಗುಜರಾತ್ ತಂಡಕ್ಕೆ ಶುಭಾಶಯ,” ಎಂದು ಹೇಳಿದರು.
Yuzvendra Chahal: ಶಾಕಿಂಗ್ ಹೇಳಿಕೆ: ಆರ್ಸಿಬಿಯ ಮಾನ ಹರಾಜು ಮಾಡಿದ ಯುಜ್ವೇಂದ್ರ ಚಹಾಲ್
SRH vs RR: ಐಪಿಎಲ್ನಲ್ಲಿಂದು ಹೈದರಾಬಾದ್-ರಾಜಸ್ಥಾನ್ ಮುಖಾಮುಖಿ: ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು