ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು ನಡೆಯಲಿರುವ 24ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (RR vs GT) ತಂಡ ಮುಖಾಮುಖಿ ಆಗುತ್ತಿದೆ. ಡಾ. ಡಿವೈ ಪಾಟಿಲ್ ಸ್ಫೋರ್ಟ್ಟ್ ಅಕಾಡೆಮಿಯಲ್ಲಿ ಈ ಪಂದ್ಯ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಮೂರು ಗೆಲುವು ಕೇವಲ ಒಂದು ಸೋಲಿನೊಂದಿಗೆ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಈಬಾರಿಯ ಟೂರ್ನಿಯಲ್ಲೇ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದೆ. ಇತ್ತ ಗುಜರಾತ್ ಟೈಟನ್ಸ್ ಹ್ಯಾಟ್ರಿಕ್ ಗೆಲುವಿನ ನಂತರ ಕಳೆದ ಪಂದ್ಯದಲ್ಲಿ ಮೊದಲ ಸೋಲು ಕಂಡಿತ್ತು. ಹಾರ್ದಿಕ್ (Hardik Pandya) ಪಡೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಈ ಪಂದ್ಯ ಬಹುಮಖ್ಯ ಆಗಿರುವುದರಿಂದ ಮದಗಜಗಳ ಕಾದಾಟದ ವೀಕ್ಷಣೆಗೆ ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಗುಜರಾತ್ ಟೈಟನ್ಸ್ ತಂಡ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲವು ಸಾಧಿಸಿದ ಬಳಿಕ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭಾರೀ ಸೋಲು ಅನುಭವಿಸಿತ್ತು. ಈಗ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಕಾರಣ ಸಾಕಷ್ಟು ಪೈಪೋಟಿಯನ್ನು ಎದುರಿಸಲಿದೆ. ಟೈಟನ್ಸ್ ರಾಜಸ್ಥಾನ್ ರಾಯಲ್ಸ್ನಲ್ಲಿ ಇರುವಂತಹ ಗುಣಮಟ್ಟದ ಬ್ಯಾಟರ್ಗಳನ್ನು ಹೊಂದಿಲ್ಲವಾದರೂ ಬೌಲಿಂಗ್ನಲ್ಲಿ ಸರಿಸಾಟಿಯಾಗಿ ನಿಲ್ಲಲಿದೆ. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿರುವ ನಾಯಕ ಪಾಂಡ್ಯ, ಪ್ರತಿಭಾನ್ವಿತ ಬ್ಯಾಟರ್ ಶುಭಮನ್ ಗಿಲ್ ಅಮೋಘ ಲಯದಲ್ಲಿದ್ದಾರೆ. ಗಿಲ್ ಬೇಗನೆ ಔಟಾದಾಗ ಇತರರು ತಂಡಕ್ಕೆ ಆಸರೆ ಆಗಬೇಕಿದೆ. ಡೇವಿಡ್ ಮಿಲ್ಲರ್‌ರಿಂದ ತಂಡ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದೆ.
ಇತ್ತ ವಿಶ್ವಶ್ರೇಷ್ಠ ಸ್ಪಿನ್ನರ್ ರಶೀದ್ ಖಾನ್, ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತು ಲಾಕಿ ಫರ್ಗ್ಯುಸನ್ ಜೊತೆಗೆ ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಮ್ಯಾಥ್ಯೂ ವೇಡ್ ಆರಂಭಿಕರಾಗಿ ನಿರೀಕ್ಷೆ ತಕ್ಕ ನಿರ್ವಹಣೆ ತೋರುತ್ತಿಲ್ಲ. ಹೀಗಾಗಿ ಅವರ ಬದಲು ಭಾರತೀಯ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕಣಕ್ಕಿಳಿಯಬಹುದು.
ಇನ್ನು ಆರ್ಆರ್ ಪರ ಈ ವರ್ಷದ ಆವೃತ್ತಿಯಲ್ಲಿ ಶತಕ ಬಾರಿಸಿರುವ ಏಕೈಕ ಆಟಗಾರ ಜೋಸ್ ಬಟ್ಲರ್, ಬಿರುಸಿನ ಹೊಡೆತಗಾರ ಶಿಮ್ರೊನ್ ಹೆಟ್ಮೆಯರ್, ದೇವದತ್ತ ಪಡಿಕ್ಕಲ್ ಮತ್ತು ನಾಯಕ ಸಂಜು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ವಿಶ್ವದ ಶ್ರೇಷ್ಠ ಸ್ಪಿನ್ನರ್ಗಳಲ್ಲಿ ಒಬ್ಬರಾದ ಯುಜ್ವೇಂದ್ರ ಚಹಲ್ ಟೂರ್ನಿಯ ಗರಿಷ್ಠ ವಿಕೆಟ್ ಪಡೆದ ಬೌಲರ್ ಆದರೆ, ಇವರಿಗೆ ಅಶ್ವಿನ್ ರಂತಹ ಅನುಭವಿಗಳ ಬೆಂಬಲವಿದೆ. ಯುವ ವೇಗಿಗಳಾದ ಪ್ರಸಿದ್ಧಕೃಷ್ಣ ಮತ್ತು ಕುಲದೀಪ್ ಸೇನ್ ಎದುರಾಳಿ ಬ್ಯಾಟಿಂಗ್ ಶಕ್ತಿಯನ್ನು ನಿಯಂತ್ರಿಸುವ ಸಮರ್ಥರಾಗಿದ್ದಾರೆ.
ಡಿವೈ ಪಾಟೀಲ್ ಕ್ರೀಡಾಂಗಣದ ಪಿಚ್ ವೇಗಿಗಳಿಗೆ ಉತ್ತಮ ಬೌನ್ಸ್ ನೀಡಲಿದೆ. ಆದರೆ ಈ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತವನ್ನು ಗಳಿಸುವುದು ಬ್ಯಾಟರ್‌ಗಳಿಗೆ ಸವಾಲಾಗಲಿದೆ. 160-170 ರನ್‌ಗಳನ್ನು ಇಲ್ಲಿ ರಕ್ಷಣೆ ಮಾಡಿಕೊಳ್ಳುವ ಅವಕಾಶವಿದೆ. ಬ್ಯಾಟ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಿಗೂ ಪಿಚ್ ನೆರವು ನೀಡುತ್ತಿದ್ದು ಮುಂದಿನ ಪಂದ್ಯದಲ್ಲಿಯೂ ಪಿಚ್ ಇದೇ ರೀತಿ ವರ್ತಿಸುವ ನಿರೀಕ್ಷೆಯಿದೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ರಾಸಿ ವಾನ್ ಡೆರ್ ಡುಸ್ಸೆನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕುಲದೀಪ್ ಸೇನ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ದ್ ಕೃಷ್ಣ, ಯುಜ್ವೇಂದ್ರ ಚಾಹಲ್.
ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ರಹಮಾನುಲ್ಲಾ ಗುರ್ಬಾಜ್, ಶುಭಮನ್ ಗಿಲ್, ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಆರ್.ಕೆ. ಸಾಯಿ ಕಿಶೋರ್.
Dewald Brevis: 4,6,6,6,6: ಒಂದೇ ಓವರ್ನಲ್ಲಿ ಬರೋಬ್ಬರಿ 29 ರನ್ ಚಚ್ಚಿದ ಜೂನಿಯನ್ ಎಬಿಡಿ: ವಿಡಿಯೋ