ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶದ ತಂಡಗಳ ನಡುವಿನ ರಣಜಿ ಕ್ವಾರ್ಟರ್‌ಫೈನಲ್ (Ranji Trophy 2022, Quarterfinals) ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಮೊದಲ ಇನಿಂಗ್ಸ್ನಲ್ಲಿ 253 ರನ್ ಬಾರಿಸಿದ್ದ ಕರ್ನಾಟಕ ತಂಡವು 2ನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದೆ. ಪಂದ್ಯದ 2ನೇ ದಿನದಾಟದ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು 8 ವಿಕೆಟ್ ಕಳೆದುಕೊಂಡು ಕೇವಲ 100 ರನ್ ಮಾತ್ರ ಗಳಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಉತ್ತರಪ್ರದೇಶ ತಂಡದ ನಾಯಕ ಕರಣ್ ಶರ್ಮಾ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕರ್ನಾಟಕ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 10 ರನ್‌ಗೆ ಶಿವಂ ಮಾವಿ ಎಸೆತದಲ್ಲಿ ಔಟಾಗಿ ಹೊರನಡೆದರು.
ಇನ್ನು ಅರ್ಧಶತಕ ಗಳಿಸಿದ ರವಿಕುಮಾರ್ ಸಮರ್ಥ್ 30ನೇ ಓವರ್‌ನಲ್ಲಿ ಸೌರಭ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ (29) ಶಿವಂ ಮಾವಿ ಸ್ವಿಂಗ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರೆ, ಕೃಷ್ಣಮೂರ್ತಿ ಸಿದ್ಧಾರ್ಥ್ (37) ಅವರನ್ನು ಶಿವಂ ಮಾವಿ ಬೇಗನೆ ಪೆವಿಲಿಯನ್ಗೆ ಕಳುಹಿಸಿದರು. ಇದರ ಬೆನ್ನಲ್ಲೇ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ (27) ಸೌರಭ್ ಕುಮಾರ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಮರು ಎಸೆತದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ನೀಡಿತು.
ಇದಾಗ್ಯೂ ಮೊದಲ ದಿನದಾಟದಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ಗಳಿಸಿದ್ದ ಕರ್ನಾಟಕಕ್ಕೆ 2ನೇ ದಿನದಾಟದಲ್ಲಿ ಆಸರೆಯಾಗಿದ್ದು ಶ್ರೇಯಸ್ ಗೋಪಾಲ್. ಒಂದೆಡೆ 80 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಮಿಂಚಿದರೆ, ಮತ್ತೊಂದೆಡೆ ವಿಕೆಟ್ ಉರುಳುತ್ತಾ ಸಾಗಿತು. ಪರಿಣಾಮ ಕರ್ನಾಟಕ ತಂಡದ ಮೊದಲ ಇನಿಂಗ್ಸ್ 253 ರನ್ಗಳಿಗೆ ಅಂತ್ಯವಾಯಿತು.
ಈ ಗುರಿ ಬೆನ್ನತ್ತಿದ ಉತ್ತರ ಪ್ರದೇಶ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು. 2ನೇ ಓವರ್ನ ಮೊದಲ ಎಸೆತದಲ್ಲೇ ಸಮರ್ಥ್ ಸಿಂಗ್ರನ್ನು ಔಟ್ ಮಾಡಿ ವಿಜಯ್ ಕುಮಾರ್ ವೈಶಾಖ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಆರ್ಯನ್ ಜುಯೆಲ್ರನ್ನು ರೋನಿತ್ ಮೋರೆ ಪೆವಿಲಿಯನ್ಗೆ ಕಳುಹಿಸಿದರು. ಇದಾಗ್ಯೂ ಪ್ರಿಯಂ ಗರ್ಗ್ 39 ರನ್ಗಳಿಸಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿಯದ ರೋನಿತ್ ಮತ್ತೊಂದು ಯಶಸ್ಸು ತಂದುಕೊಟ್ಟರು.
ನಾಯಕ ಕರಣ್ ಶರ್ಮಾರನ್ನು ವಿಜಯ್ ಕುಮಾರ್ ವೈಶಾಖ್ ಕೇವಲ 1 ರನ್‌ಗೆ ಔಟ್ ಮಾಡಿದರೆ, 33 ರನ್ಗಳಿಸಿದ ರಿಂಕು ಸಿಂಗ್ ಕೃಷ್ಣಪ್ಪ ಗೌತಮ್ ಅವರ ಸ್ಪಿನ್ ಮೋಡಿಗೆ ಬಲಿಯಾದರು. ಇನ್ನು ಧೃವ್ ಜುರೆಯಲ್ 9 ರನ್ಗಳಿಸಿ ರೋನಿತ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪ್ರಿನ್ಸ್ ಯಾದವ್ರನ್ನು ಶೂನ್ಯಕ್ಕೆ ಔಟ್ ಮಾಡಿದ ವಿಧ್ವತ್ ಕಾವೇರಪ್ಪ ಮತ್ತೊಂದು ಯಶಸ್ಸು ತಂದುಕೊಟ್ಟರು. ಹಾಗೆಯೇ ಸೌರಭ್ ಕುಮಾರ್ರನ್ನು ಕೃಷ್ಣಪ್ಪ ಗೌತಮ್ ಅವರು ಶೂನ್ಯ ಔಟ್ ಮಾಡಿದರು.
ಹೀಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಕರ್ನಾಟಕ ಬೌಲರ್ಗಳು 111 ರನ್ಗಳಿಗೆ 9 ವಿಕೆಟ್ ಕಬಳಿಸಿದ್ದರು. ಆದರೆ ಕೊನೆಯ ವಿಕೆಟ್ ವೇಳೆ ಶಿವಂ ಮಾವಿ ಅಂಕಿತ್ ರಜಪೂತ್ ಜೊತೆಗೂಡಿ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕೊನೆಯ ವಿಕೆಟ್ಗೆ 44 ರನ್ಗಳ ಜೊತೆಯಾಟ ಮೂಡಿಬಂತು. ಅಂತಿಮವಾಗಿ ಶ್ರೇಯಸ್ ಗೋಪಾಲ್ 33 ರನ್ ಬಾರಿಸಿದ್ದ ಶಿವಂ ಮಾವಿಯ ವಿಕೆಟ್ ಪಡೆಯುವ ಮೂಲಕ ಉತ್ತರ ಪ್ರದೇಶ ತಂಡವನ್ನು 155 ರನ್ಗಳಿಗೆ ಆಲೌಟ್ ಮಾಡಿದರು. ಕರ್ನಾಟಕ ಪರ ರೋನಿತ್ ಮೋರೆ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಹಾಗೂ ವಿಜಯ್ ಕುಮಾರ್ ವೈಶಾಖ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
98 ರನ್ಗಳ ಮುನ್ನಡೆ ಪಡೆದು 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ರವಿಕುಮಾರ್ ಸಮರ್ಥ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 33 ರನ್ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಪ್ರಿನ್ಸ್ ಯಾದವ್ ಬೇರ್ಪಡಿಸಿದರು. ರವಿಕುಮಾರ್ ಸಮರ್ಥ್ 11 ರನ್ಗಳಿಸಿ ಪ್ರಿನ್ಸ್ಗೆ ವಿಕೆಟ್ ಒಪ್ಪಿಸಿದರೆ ಇದರ ಬೆನ್ನಲ್ಲೇ ಮಯಾಂಕ್ (22) ಸೌರಭ್ ಎಸೆತದಲ್ಲಿ ಔಟಾದರು. ಆ ಬಳಿಕ ಬಂದ ಕೃಷ್ಣಮೂರ್ತಿ ಸಿದ್ದಾರ್ಥ್ (15) ಹಾಗೂ ಕರುಣ್ ನಾಯರ್ (10) ರನ್ನು ಅಂಕಿತ್ ರಜಪೂತ್ ಪೆವಿಲಿಯನ್ಗೆ ಕಳುಹಿಸಿದರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಮೇಲುಗೈ ಸಾಧಿಸಿದ ಉತ್ತರ ಪ್ರದೇಶದ ಬೌಲರ್ಗಳು ಆ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ ಮನೀಷ್ ಪಾಂಡೆ (4) ರನೌಟ್ ಆದರೆ, ಶ್ರೇಯಸ್ ಗೋಪಾಲ್ 3 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಕೃಷ್ಣಪ್ಪ ಗೌತಮ್ (1) ಹಾಗೂ ವಿಜಯ್ಕುಮಾರ್ ವೈಶಾಕ್ (5) ಸೌರಭ್ ಕುಮಾರ್ ಎಸೆತದಲ್ಲಿ ಎಲ್ಬಿ ಆದರು. ಮತ್ತೊಂದೆಡೆ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅಜೇಯ 10 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಅದರಂತೆ 2ನೇ ದಿನದಾಟದ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು 8 ವಿಕೆಟ್ ಕಳೆದುಕೊಂಡು 100 ರನ್ಗಳಿಸಿದೆ. ಇನ್ನು ಮೊದಲ ಇನಿಂಗ್ಸ್ನ 98 ರನ್ಗಳ ಮುನ್ನಡೆಯೊಂದಿಗೆ ಇದೀಗ ಕರ್ನಾಟಕ ತಂಡದ ಒಟ್ಟು ಮೊತ್ತ 198 ಆಗಿದ್ದು, ಮೂರನೇ ದಿನದಾಟದಲ್ಲಿ 2 ವಿಕೆಟ್ನೊಂದಿಗೆ ಬೃಹತ್ ಮೊತ್ತ ಪೇರಿಸಬೇಕಾದ ಅನಿವಾರ್ಯತೆ ಕರ್ನಾಟಕದ ಮುಂದಿದೆ.
ಒಂದೇ ದಿನ 21 ವಿಕೆಟ್ ಪತನ:
ಮೊದಲ ದಿನದಾಟದಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ 2ನೇ ದಿನದಾಟದಲ್ಲಿ 3 ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡವು 155 ರನ್‌ಗೆ ಆಲೌಟ್ ಆಯಿತು. ಆ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ 8 ವಿಕೆಟ್ ಕಳೆದುಕೊಂಡು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಅಂದರೆ 2ನೇ ದಿನದಾಟದಲ್ಲಿ ಬೌಲರ್ಗಳು ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು ಒಟ್ಟು 21 ವಿಕೆಟ್ ಉರುಳಿಸಿರುವುದು ವಿಶೇಷ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Tue, 7 June 22