Virat Kohli: ಮೈದಾನಕ್ಕಿಳಿಯದೆ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ
Virat kohli: ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಸಜ್ಜಾಗಿದ್ದು, ಈ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಅತ್ತ ಔಟ್ ಆಫ್ ಫಾರ್ಮ್ನಲ್ಲಿರುವ ಕೊಹ್ಲಿ ಐಪಿಎಲ್ನಲ್ಲೂ ನಿರೀಕ್ಷಿತ ಆಟ ಪ್ರದರ್ಶಿಸಿರಲಿಲ್ಲ.
ಪ್ರಸ್ತುತ ಕ್ರಿಕೆಟ್ನ ದಾಖಲೆಯ ಸರದಾರ ವಿರಾಟ್ ಕೊಹ್ಲಿ (Virat Kohli) ಮೈದಾನಕ್ಕೆ ಇಳಿದರೆ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗುವುದು ಗೊತ್ತೇ ಇದೆ. ಇದಾಗ್ಯೂ ಮೈದಾನಕ್ಕಿಳಿಯದೇ ಹೊಸ ದಾಖಲೆ ಬರೆಯುವ ಮೂಲಕ ಇದೀಗ ಕಿಂಗ್ ಕೊಹ್ಲಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅದು ಕೂಡ ಸೋಷಿಯಲ್ ಮೀಡಿಯಾ ಮೂಲಕ ಎಂಬುದು ವಿಶೇಷ. ಹೌದು, ಇನ್ಸ್ಟಾಗ್ರಾಮ್ನಲ್ಲಿ ಇದೀಗ ವಿರಾಟ್ ಕೊಹ್ಲಿ 200 ಮಿಲಿಯನ್ ಮಂದಿ ಫಾಲೋವರ್ಸ್ ಇದ್ದಾರೆ. ಇಷ್ಟೊಂದು ಫಾಲೋವರ್ಸ್ ಇರುವ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಕಿಂಗ್ ಕೊಹ್ಲಿಯ ಪಾಲಾಗಿದೆ.
ಅಷ್ಟೇ ಅಲ್ಲದೆ ಕ್ರೀಡಾಕ್ಷೇತ್ರದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್ನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದಾರೆ. ರೊನಾಲ್ಡೊಗೆ 451 ಮಿಲಿಯನ್ ಫಾಲೋವರ್ಸ್ ಇದ್ದರೆ, 2ನೇ ಸ್ಥಾನದಲ್ಲಿರುವ ಅರ್ಜೆಂಟೀನಾ ಫುಟ್ಬಾಲ್ ಕಿಂಗ್ ಲಿಯೋನಲ್ ಮೆಸ್ಸಿ 334 ಫಾಲೋವರ್ಸ್ ಹೊಂದಿದ್ದಾರೆ. ಇದೀಗ 20 ಕೋಟಿ ಫಾಲೋವರ್ಸ್ನೊಂದಿಗೆ ವಿರಾಟ್ ಕೊಹ್ಲಿ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವಿಶ್ವದ ಟಾಪ್ 3 ಸ್ಪೋರ್ಟ್ಸ್ ಪರ್ಸನಾಲಿಟಿಯಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಇದುವರೆಗೆ 1373 ಪೋಸ್ಟ್ಗಳನ್ನು ಹಾಕಿದ್ದು, ಈ ಮುಖಾಂತರ 20 ಕೋಟಿ ಫಾಲೋವರ್ಸ್ ಅನ್ನು ಸಂಪಾದಿಸಿದ್ದಾರೆ. ಇನ್ನು 245 ಮಂದಿಯನ್ನು ವಿರಾಟ್ ಕೊಹ್ಲಿ ಇನ್ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ.
ಸದ್ಯ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಸಜ್ಜಾಗಿದ್ದು, ಈ ಸರಣಿಯಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದಾರೆ. ಅತ್ತ ಔಟ್ ಆಫ್ ಫಾರ್ಮ್ನಲ್ಲಿರುವ ಕೊಹ್ಲಿ ಐಪಿಎಲ್ನಲ್ಲೂ ನಿರೀಕ್ಷಿತ ಆಟ ಪ್ರದರ್ಶಿಸಿರಲಿಲ್ಲ. ಈ ಬಾರಿ ಆಡಿದ 16 ಪಂದ್ಯಗಳಲ್ಲಿ 341 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ವೇಳೆ 2 ಅರ್ಧಶತಕಗಳು ಮೂಡಿಬಂದರೆ, 3 ಬಾರಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು.
ಅಷ್ಟೇ ಅಲ್ಲದೆ ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಶತಕವನ್ನು ಎದುರು ನೋಡುತ್ತಿದ್ದಾರೆ. ಏಕೆಂದರೆ 2019 ರ ಬಳಿಕ ಕೊಹ್ಲಿ ಬ್ಯಾಟ್ನಿಂದ ಸೆಂಚುರಿ ಮೂಡಿಬಂದಿಲ್ಲ. ಬಾಂಗ್ಲಾದೇಶ ವಿರುದ್ದ ಟೆಸ್ಟ್ನಲ್ಲಿ ಕೊನೆಯ ಬಾರಿ ಶತಕ ಬಾರಿಸಿದ ಆ ಬಳಿಕ ಮೂರಂಕಿ ರನ್ಗಳಿಸಿಲ್ಲ ಎಂಬುದೇ ಅಚ್ಚರಿ. ಇದೀಗ ಸೋಷಿಯಲ್ ಮೀಡಿಯಾದಲ್ಲಿ 200 ಮಿಲಿಯನ್ ಫಾಲೋವರ್ಸ್ ಮೂಲಕ ದಾಖಲೆ ಬರೆದಿರುವ ಕೊಹ್ಲಿ, ಬ್ಯಾಟ್ ಮೂಲಕ 100 ರನ್ಗಳಿಸಿ ಶತಕ ಬರ ನೀಗಿಸಲಿ ಎಂಬುದೇ ಅಭಿಮಾನಿಗಳ ಅಂಬೋಣ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.