IND vs SA: ವಿರಾಟ್ ಕೊಹ್ಲಿಯ ಸ್ಥಾನದಲ್ಲಿ ಕಣಕ್ಕಿಳಿಯುವವರು ಯಾರು..?
Team India: ಲೋಕೇಶ್ ರಾಹುಲ್ (ನಾಯಕ), ರಿಷಬ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್.
ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa T20) ನಡುವಿನ 5 ಪಂದ್ಯಗಳ ಟಿ20 ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯನ್ನು ಮುಂಬರುವ ಟಿ20 ವಿಶ್ವಕಪ್‌ಗೆ (T20 World Cup 2022) ಸಿದ್ಧತೆ ಎಂದು ಪರಿಗಣಿಸಲಾಗಿದೆ. ಈ ಸರಣಿಯಲ್ಲಿ ಭಾರತ ತಂಡದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಈ ಸರಣಿಯ ಭಾಗವಾಗಿಲ್ಲ. ಇನ್ನು ಗಾಯದ ಕಾರಣ ಸೂರ್ಯಕುಮಾರ್ ಯಾದವ್ ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾ ಪರ 3ನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಟೀಮ್ ಇಂಡಿಯಾದ ಮೂರನೇ ಕ್ರಮಾಂಕ ವಿರಾಟ್ ಕೊಹ್ಲಿ ಖಾಯಂ ಸ್ಥಾನ. ಇದಾಗ್ಯೂ ಕೊಹ್ಲಿಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಈ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇದೀಗ ಈ ಇಬ್ಬರು ಆಟಗಾರರು ಇಲ್ಲದಿರುವ ಕಾರಣ 3ನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಬೀಸಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.
ಈ ಪ್ರಶ್ನೆಗಳಿಗೆ ಸದ್ಯ ಸಿಗುತ್ತಿರುವ ಉತ್ತರ ಶ್ರೇಯಸ್ ಅಯ್ಯರ್. ಕೊಹ್ಲಿ ವಿಶ್ವದ ಅತ್ಯುತ್ತಮ ನಂಬರ್ 3 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಈ ಬಾರಿ ಆ ಕ್ರಮಾಂಕದ ಮೂಲಕ ತಂಡವನ್ನು ನಿಭಾಯಿಸುವ ಜವಾಬ್ದಾರಿಯನ್ನು ಶ್ರೇಯರ್ ಅಯ್ಯರ್ ಅವರಿಗೆ ನೀಡಬಹುದು. ಟಿ20ಯಲ್ಲಿ ಶ್ರೇಯಸ್ ಅಯ್ಯರ್ ಅವರ ದಾಖಲೆ ಕೂಡ ಉತ್ತಮವಾಗಿದೆ. ಅಯ್ಯರ್ ಇದುವರೆಗೆ 36 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 809 ರನ್ ಗಳಿಸಿದ್ದಾರೆ. ಅದು ಕೂಡ 4ನೇ ಮತ್ತು 5ನೇ ಕ್ರಮಾಂಕದಲ್ಲಿ ಆಡುವ ಮೂಲಕ ಎಂಬುದು ವಿಶೇಷ.
ಇದೀಗ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಅಯ್ಯರ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಅದರಂತೆ ಮೂರನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ಗೆ ಬಡ್ತಿ ಸಿಗುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದಾರೆ. ಅಲ್ಲದೆ ಸ್ಪಿನ್ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್ ಕೂಡ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸುವ ಸಾಧ್ಯತೆ ಹೆಚ್ಚು.
ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ ಹೀಗಿದೆ: ಲೋಕೇಶ್ ರಾಹುಲ್ (ನಾಯಕ), ರಿಷಬ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಕುಲದೀಪ್ ಯಾದವ್, ಯುಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.