250 ರನ್ ಬಾರಿಸಿದ ರಾಣ: ಎದುರಾಳಿ ತಂಡ 170 ರನ್​ಗೆ ಆಲೌಟ್..!

| Updated By: ಝಾಹಿರ್ ಯೂಸುಫ್

Updated on: Jan 21, 2024 | 2:27 PM

Ranji Trophy 2024: ವಿಶೇಷ ಎಂದರೆ ಈ ಪಂದ್ಯದಲ್ಲಿ 2 ಇನಿಂಗ್ಸ್​ಗಳಿಂದ ಮಣಿಪುರ ತಂಡ ಕಲೆಹಾಕಿದ್ದು ಕೇವಲ 170 ರನ್​ಗಳು ಮಾತ್ರ. ಅದೇ ಅತ್ತ ಹರ್ಯಾಣ ಪರ ಹಿಮಾಂಶು ರಾಣ ಏಕಾಂಗಿಯಾಗಿ 250 ರನ್​ ಪೇರಿಸಿದ್ದರು.

250 ರನ್ ಬಾರಿಸಿದ ರಾಣ: ಎದುರಾಳಿ ತಂಡ 170 ರನ್​ಗೆ ಆಲೌಟ್..!
ಹಿಮಾಂಶು ರಾಣ
Follow us on

ಅಹಮದಾಬಾದ್​ನಲ್ಲಿ ನಡೆದ ರಣಜಿ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಹರ್ಯಾಣ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಣಿಪುರ ತಂಡವು ಹರ್ಯಾಣವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಹರ್ಯಾಣ ತಂಡಕ್ಕೆ ಅಂಕಿತ್ ಕುಮಾರ್ (56) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಣಿಪುರ ಬೌಲರ್​ಗಳನ್ನು ಬೆಂಡೆತ್ತಿ ಅಬ್ಬರಿಸಿದ ರಾಣ ಮೊದಲ ದಿನದಾಟದಲ್ಲೇ ದ್ವಿಶತಕ ಪೂರೈಸಿದರು.

ಇನ್ನೊಂದೆಡೆ ನಿಶಾಂತ್ ಸಿಂಧು (119) ಕೂಡ ಶತಕ ಬಾರಿಸಿ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ 313 ಎಸೆತಗಳನ್ನು ಎದುರಿಸಿದ ಹಿಮಾಂಶು ರಾಣ 33 ಫೋರ್​ಗಳೊಂದಿಗೆ ಅಜೇಯ 250 ರನ್ ಬಾರಿಸಿದರು. ಈ ಭರ್ಜರಿ ದ್ವಿಶತಕದ ನೆರವಿನಿಂದ ಹರ್ಯಾಣ ತಂಡವು 3 ವಿಕೆಟ್ ಕಳೆದುಕೊಂಡು 508 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು.

ಇದಾದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಮಣಿಪುರ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಹರ್ಯಾಣ ಬೌಲರ್​ಗಳು ಯಶಸ್ವಿಯಾಗಿದ್ದರು. 42 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಮಣಿಪುರ ತಂಡವು ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಆಲೌಟ್ ಆಗಿತ್ತು. ಅಂದರೆ ಮೊದಲ ಇನಿಂಗ್ಸ್​ ಅನ್ನು ಕೇವಲ 77 ರನ್​ಗಳಿಗೆ ಅಂತ್ಯಗೊಳಿಸಿತ್ತು.

ಇದರ ಬೆನ್ನಲ್ಲೇ ಫಾಲೋಆನ್ ಹೇರಿದ ಹರ್ಯಾಣ ತಂಡವು ಮಣಿಪುರ ತಂಡವನ್ನು ಮತ್ತೆ ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಮಣಿಪುರ ತಂಡವು ಈ ಬಾರಿ ಕೇವಲ 29 ರನ್​ ಕಲೆಹಾಕುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿ ನಿಂತ ನಾಯಕ ಕಿಶನ್​ಗ್ಬಮ್​ 70 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಒಂದು ವಿಕೆಟ್ ಸಿಗುತ್ತಿದ್ದಂತೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹರ್ಯಾಣ ಬೌಲರ್​ಗಳು ಮಣಿಪುರ ತಂಡವನ್ನು ಕೇವಲ 93 ರನ್​ಗಳಿಗೆ ಆಲೌಟ್ ಮಾಡಿತು.

ಹಿಮಾಂಶು vs ಮಣಿಪುರ:

ವಿಶೇಷ ಎಂದರೆ ಈ ಪಂದ್ಯದಲ್ಲಿ 2 ಇನಿಂಗ್ಸ್​ಗಳಿಂದ ಮಣಿಪುರ ತಂಡ ಕಲೆಹಾಕಿದ್ದು ಕೇವಲ 170 ರನ್​ಗಳು ಮಾತ್ರ. ಅದೇ ಅತ್ತ ಹರ್ಯಾಣ ಪರ ಹಿಮಾಂಶು ರಾಣ ಏಕಾಂಗಿಯಾಗಿ 250 ರನ್​ ಪೇರಿಸಿದ್ದರು.  ಹಾಗೆಯೇ 2ನೇ ದಿನದಾಟದಲ್ಲೇ ಮಣಿಪುರ ತಂಡದ 20 ವಿಕೆಟ್​ಗಳನ್ನು ಕಬಳಿಸುವ ಮೂಲಕ ಹರ್ಯಾಣ ತಂಡವು 338 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಹರ್ಯಾಣ (ಪ್ಲೇಯಿಂಗ್ XI): ಮಯಾಂಕ್ ಶಾಂಡಿಲ್ಯ, ಅಂಕಿತ್ ಕುಮಾರ್, ಹಿಮಾಂಶು ರಾಣ, ಅನ್ಶುಲ್ ಕಾಂಬೋಜ್, ನಿಶಾಂತ್ ಸಿಂಧು, ರೋಹಿತ್ ಪರ್ಮೋದ್ ಶರ್ಮಾ, ರಾಹುಲ್ ತೆವಾಟಿಯಾ, ಅಶೋಕ್ ಮೆನಾರಿಯಾ (ನಾಯಕ), ಜಯಂತ್ ಯಾದವ್, ಹರ್ಷಲ್ ಪಟೇಲ್, ಸುಮಿತ್ ಕುಮಾರ್.

ಇದನ್ನೂ ಓದಿ: Rishabh Pant: ಟೀಮ್ ಇಂಡಿಯಾ ಜೊತೆ ಕಾಣಿಸಿಕೊಂಡ ರಿಷಭ್ ಪಂತ್

ಮಣಿಪುರ (ಪ್ಲೇಯಿಂಗ್ XI): ಕರ್ಣಜಿತ್ ಯುಮ್ನಮ್, ಜಾನ್ಸನ್ ಸಿಂಗ್, ಲ್ಯಾಂಗ್ಲೋನಿಯಾಂಬ ಕಿಶನ್​ಗ್ಬಮ್​ (ನಾಯಕ), ಪ್ರಫುಲ್ಲೋಮಣಿ ಸಿಂಗ್, ರೆಕ್ಸ್ ರಾಜ್‌ಕುಮಾರ್, ಎಲ್ ಕಿಶನ್ ಸಿಂಘಾ, ಬಿಶ್ವರ್ಜಿತ್ ಕೊಂಥೌಜಮ್, ನರಿಸಿಂಗ್ ಯಾದವ್, ನಿತೇಶ್ ಸೆಡೈ, ಕಂಗಬಾಮ್ ಪ್ರಿಯೋಜಿತ್ ಸಿಂಗ್, ಕಿಶನ್ ಥೋಕ್ಚೋಮ್.

 

Published On - 2:23 pm, Sun, 21 January 24