Cheteshwar Pujara: 20 ಸಾವಿರ ರನ್ ಪೂರೈಸಿ ದಾಖಲೆ ಬರೆದ ಪೂಜಾರ
Cheteshwar Pujara Records: ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಕೂಡ ಚೇತೇಶ್ವರ ಪೂಜಾರ ಹೆಸರಿನಲ್ಲಿದೆ. ಪೂಜಾರ ಒಟ್ಟು 17 ದ್ವಿಶತಕ ಸಿಡಿಸಿಸುವ ಮೂಲಕ ದಾಖಲೆ ಬರೆದಿದ್ದಾರೆ.
Updated on: Jan 21, 2024 | 12:41 PM

ನಾಗ್ಪುರದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೌರಾಷ್ಟ್ರ ವಿರುದ್ಧದ ಈ ಪಂದ್ಯದಲ್ಲಿ ವಿದರ್ಭ ಪರ ಕಣಕ್ಕಿಳಿದ ಪೂಜಾರ ಮೊದಲ ಇನಿಂಗ್ಸ್ನಲ್ಲಿ 66 ರನ್ ಬಾರಿಸಿ ಮಿಂಚಿದ್ದರು.

ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಚೇತೇಶ್ವರ ಪೂಜಾರ 43 ರನ್ ಬಾರಿಸಿದರು. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 20 ಸಾವಿರ ರನ್ ಪೂರೈಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಕ್ಕೂ ಮುನ್ನ ಸುನಿಲ್ ಗವಾಸ್ಕರ್ (25,834), ಸಚಿನ್ ತೆಂಡೂಲ್ಕರ್ (25,396), ಮತ್ತು ರಾಹುಲ್ ದ್ರಾವಿಡ್ (23,794) ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ 260 ಪ್ರಥಮ ದರ್ಜೆ ಪಂದ್ಯಗಳ ಮೂಲಕ ಚೇತೇಶ್ವರ ಪೂಜಾರ 20,013 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಕೂಡ ಚೇತೇಶ್ವರ ಪೂಜಾರ ಹೆಸರಿನಲ್ಲಿದೆ. ಪೂಜಾರ ಒಟ್ಟು 17 ದ್ವಿಶತಕ ಸಿಡಿಸಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಪೂಜಾರ ಬ್ಯಾಟ್ನಿಂದ 61 ಶತಕಗಳು ಹಾಗೂ 78 ಅರ್ಧಶತಕಗಳು ಕೂಡ ಮೂಡಿಬಂದಿವೆ. ಇದೀಗ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ 35 ವರ್ಷದ ಚೇತೇಶ್ವರ ಪೂಜಾರ ರಣಜಿ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ.

ಇತ್ತ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ಈ ತಂಡದಲ್ಲಿ ಪೂಜಾರ ಕಾಣಿಸಿಕೊಂಡಿಲ್ಲ. ಇದೀಗ ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡಿ ಪೂಜಾರ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಕೊನೆಯ 3 ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾಗುವ ತಂಡದಲ್ಲಿ ಸ್ಥಾನ ಪಡೆದರೂ ಅಚ್ಚರಿಪಡಬೇಕಿಲ್ಲ.
