Ranji Trophy 2024: ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ಮಾಜಿ ಆರ್​ಸಿಬಿ ವೇಗಿ..!

|

Updated on: Feb 13, 2024 | 7:45 PM

Ranji Trophy 2024: ಮಧ್ಯಪ್ರದೇಶ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಧ್ಯಪ್ರದೇಶದ ಎಡಗೈ ವೇಗಿ ಕುಲ್ವಂತ್ ಖೆಜೋರಿಲಿಯಾ ಮಾರಕ ಬೌಲಿಂಗ್ ಮಾಡಿ ಬರೋಡಾ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ಕುಲ್ವಂತ್ ರಣಜಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು.

Ranji Trophy 2024: ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ಮಾಜಿ ಆರ್​ಸಿಬಿ ವೇಗಿ..!
ಕುಲ್ವಂತ್ ಖೇಜ್ರೋಲಿಯಾ
Follow us on

ಇಂದೋರ್‌ನಲ್ಲಿ ನಡೆದ ರಣಜಿ ಟ್ರೋಫಿ (Ranji Trophy 2024) ಡಿ ಗುಂಪಿನ ಪಂದ್ಯ ಮಧ್ಯಪ್ರದೇಶ ಮತ್ತು ಬರೋಡಾ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಉತ್ತಮ ಪ್ರದರ್ಶನ ನೀಡಿ ಬರೋಡಾ ತಂಡವನ್ನು ಇನಿಂಗ್ಸ್ ಹಾಗೂ 52 ರನ್ ಗಳಿಂದ ಸೋಲಿಸಿತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಧ್ಯಪ್ರದೇಶದ ಎಡಗೈ ವೇಗಿ ಕುಲ್ವಂತ್ ಖೇಜ್ರೋಲಿಯಾ (Kulwant Khejroliya) ಮಾರಕ ಬೌಲಿಂಗ್ ಮಾಡಿ ಬರೋಡಾ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ಕುಲ್ವಂತ್ ರಣಜಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು. ಕುಲ್ವಂತ್ ಅವರ ಅತ್ಯುತ್ತಮ ಬೌಲಿಂಗ್‌ ಆಧಾರದ ಮೇಲೆ ಮಧ್ಯಪ್ರದೇಶ ತಂಡ ಬರೋಡಾವನ್ನು ಇನ್ನಿಂಗ್ಸ್ ಮತ್ತು 52 ರನ್‌ಗಳಿಂದ ಸೋಲಿಸಿತು. ಇಡೀ ಪಂದ್ಯದಲ್ಲಿ 7 ವಿಕೆಟ್ ಪಡೆದ ಕುಲ್ವಂತ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇತಿಹಾಸ ನಿರ್ಮಿಸಿದ ಕುಲ್ವಂತ್

ಇಂದೋರ್ ಸ್ಟೇಡಿಯಂನಲ್ಲಿ ನಡೆದ ಮಧ್ಯಪ್ರದೇಶ ಮತ್ತು ಬರೋಡಾ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಮಧ್ಯಪ್ರದೇಶ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್​ನಲ್ಲಿ 454 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬರೋಡಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 270 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕುಲ್ವಂತ್ ಖೇಜ್ರೋಲಿಯಾ ಮೊದಲ ಇನಿಂಗ್ಸ್‌ನಲ್ಲಿ 8.1 ಓವರ್‌ ಬೌಲ್ ಮಾಡಿ 2 ವಿಕೆಟ್ ಪಡೆದರು. ಇದಾದ ಬಳಿಕ ಫಾಲೋ ಆನ್ ಪಡೆದ ಬರೋಡಾ ತಂಡದ ವಿರುದ್ಧ ಎರಡನೇ ಇನಿಂಗ್ಸ್​ನಲ್ಲಿ ಬಿರುಗಾಳಿ ಎಬ್ಬಿಸಿದ ಕುಲ್ವಂತ್ ಖೇಜ್ರೋಲಿಯಾ 13.3 ಓವರ್​ಗಳಲ್ಲಿ 5 ವಿಕೆಟ್ ಕಬಳಿಸಿದರು. ಅದರಲ್ಲಿ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಪಡೆದದ್ದು ಪಂದ್ಯದ ಹೈಲೇಟ್ಸ್ ಆಗಿತ್ತು.

ರಣಜಿ ಇತಿಹಾಸದಲ್ಲಿ ಮೂರನೇ ಬೌಲರ್

ರಣಜಿ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಕುಲ್ವಂತ್ ಖೇಜ್ರೋಲಿಯಾ. ಕುಲ್ವಂತ್‌ಗಿಂತ ಮೊದಲು ಶಂಕರ್ ಸೈನಿ 1988ರಲ್ಲಿ ಈ ಸಾಧನೆ ಮಾಡಿದ್ದರು. ಅವರ ನಂತರ 2018 ರಲ್ಲಿ, ಮೊಹಮ್ಮದ್ ಮುಧಾಸಿರ್ ರಣಜಿ ಇತಿಹಾಸದಲ್ಲಿ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. ಈಗ ಕುಲ್ವಂತ್ ಈ ಪಟ್ಟಿಯಲ್ಲಿ ಮೂರನೇ ಬೌಲರ್ ಆಗಿದ್ದಾರೆ. ರಣಜಿಯಲ್ಲಿ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಆಡಿದ್ದ ಕುಲ್ವಂತ್

ಐಪಿಎಲ್ 2018 ರಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕುಲ್ವಂತ್ ಖೇಜ್ರೋಲಿಯಾ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು 3 ಪಂದ್ಯಗಳನ್ನು ಆಡಿ 2 ವಿಕೆಟ್ ಪಡೆದರು. ಆ ಬಳಿಕ 2019 ರಲ್ಲಿ ಆರ್​ಸಿಬಿ ಪರ ಕೇವಲ 2 ಪಂದ್ಯಗಳಲ್ಲಿ 1 ವಿಕೆಟ್ ಪಡೆದರು. ಆ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕುಲ್ವಂತ್ ಅವರನ್ನು ಬಿಡುಗಡೆ ಮಾಡಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Tue, 13 February 24