ಮುಂಬೈ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ (Ranji Trophy Final) ಮಧ್ಯಪ್ರದೇಶದ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ (Rajat Patidar) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ಇನಿಂಗ್ಸ್‌ನಿಂದಾಗಿ ಮಧ್ಯಪ್ರದೇಶ ಬಲಿಷ್ಠ ಸ್ಥಿತಿಗೆ ತಲುಪಿದೆ. ವಿಶೇಷ ಎಂದರೆ ಈ ಸೀಸನ್ನಲ್ಲಿ ಇದು ಪಾಟಿದಾರ್ ಅವರ ಎರಡನೇ ಶತಕವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಪಾಟಿದಾರ್ ಜವಾಬ್ದಾರಿಯುತ ಆಟವಾಡುತ್ತಲೇ ಶತಕ ಪೂರೈಸಿದರು. ಆದರೆ ಇದಕ್ಕೂ ಮುನ್ನ ಜೀವದಾನವನ್ನು ಪಡೆದಿದ್ದರು. ಶಮ್ಸ್ ಮುಲಾನಿ ಎಸೆತದಲ್ಲಿ ಕ್ಯಾಚ್ ನೀಡಿದ್ದ ಪಾಟಿದಾರ್ ಬೇಗನೆ ನಿರ್ಗಮಿಸಬೇಕಿತ್ತು. ಆದರೆ ನೋಬಾಲ್ ಆಗಿದ್ದ ಕಾರಣ ರಜತ್ ಪಾಟಿದಾರ್ ಜೀವದಾನ ಪಡೆದರು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಪಾಟಿದಾರ್ ಭರ್ಜರಿಯಾಗಿ ಬ್ಯಾಟ್ ಬೀಸಿ ಶತಕ ಪೂರೈಸಿದರು. ಪಾಟಿದಾರ್ಗೂ ಮುನ್ನ ಮಧ್ಯ ಪ್ರದೇಶದ ಪರ ಯಶ್ ದುಬೆ ಹಾಗೂ ಶುಭಂ ಶರ್ಮಾ ಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು.
ವಿಶೇಷ ಎಂದರೆ ಈ ಸೀಸನ್ನಲ್ಲಿ ರಜತ್ ಪಾಟಿದಾರ್ ಮಧ್ಯಪ್ರದೇಶದ ಟ್ರಬಲ್‌ಶೂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ರಜತ್ ಪಾಟಿದಾರ್ 85 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಹಾಗೆಯೇ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳದ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 79 ರನ್ ಗಳಿಸಿ ಮಿಂಚಿದ್ದರು. ಪ್ರಮುಖ ಪಂದ್ಯಗಳಲ್ಲಿ ರಜತ್ ಪಾಟಿದಾರ್ ಮಹತ್ವದ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇದೀಗ ಮುಂಬೈ ವಿರುದ್ದ ಫೈನಲ್ ಪಂದ್ಯದಲ್ಲಿ ರಜತ್ ಪಾಟಿದಾರ್ 164 ಎಸೆತಗಳಲ್ಲಿ ಶತಕ ಪೂರೈಸಿದರು. ಈ ವೇಳೆ 17 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಸೀಸನ್ನಲ್ಲಿ ಪಾಟಿದಾರ್ ಅವರ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಅವರು 142 ರನ್‌ಗಳ ಇನಿಂಗ್ಸ್ ಆಡಿದ್ದರು. ಇದಲ್ಲದೇ ಈ ಬಾರಿ ರಜತ್ 5 ಅರ್ಧಶತಕ ಬಾರಿಸಿದ್ದಾರೆ.
ಅತ್ಯುತ್ತಮ ಫಾರ್ಮ್‌ನಲ್ಲಿರುವ ರಜತ್ ಪಾಟಿದಾರ್ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ. ಪಾಟಿದಾರ್ ಇದುವರೆಗೆ 600ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಪಾಟಿದಾರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಬದಲಿ ಆಟಗಾರನಾಗಿ ಆರ್ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಪಾಟಿದಾರ್ ಒಂದು ಶತಕ ಸೇರಿದಂತೆ 2 ಅರ್ಧ ಶತಕಗಳನ್ನು ಬಾರಿಸಿದ್ದರು. ಇದೀಗ ಐಪಿಎಲ್ ಫಾರ್ಮ್ ಅನ್ನು ರಣಜಿ ಟ್ರೋಫಿಯಲ್ಲೂ ಮುಂದುವರೆಸಿದ್ದಾರೆ.
? for Rajat Patidar! ? ?
What a cracking knock this has been from the Madhya Pradesh right-handed batter in the #RanjiTrophy #Final! ? ? @Paytm | #MPvMUM
Follow the match ▶️ https://t.co/xwAZ13U3pP pic.twitter.com/cftACdqt8T
— BCCI Domestic (@BCCIdomestic) June 25, 2022
ಇನ್ನು ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಸರ್ಫರಾಜ್ ಖಾನ್ (134) ಅವರ ಶತಕದ ನೆರವಿನಿಂದ 374 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶ ತಂಡವು ಯಶ್ ದುಬೆ (133) ಅವರ ಭರ್ಜರಿ ಶತಕದೊಂದಿಗೆ ಉತ್ತಮ ಆರಂಭ ಪಡೆಯಿತು. ಆ ಬಳಿಕ ಬಂದ ಶುಭಂ ಶರ್ಮಾ (116) ಹಾಗೂ ರಜತ್ ಪಾಟಿದಾರ್ ಕೂಡ ಸೆಂಚುರಿ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
4ನೇ ದಿನದಾಟದ ಊಟದ ವಿರಾಮದ ವೇಳೆಗೆ ಮಧ್ಯ ಪ್ರದೇಶ ತಂಡವು 6 ವಿಕೆಟ್ ಕಳೆದುಕೊಂಡು 475 ರನ್ ಕಲೆಹಾಕಿದೆ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 101 ರನ್‌ಗಳ ಮುನ್ನಡೆ ಸಾಧಿಸಿದೆ. ಕ್ರೀಸ್ನಲ್ಲಿ 195 ಎಸೆತಗಳಲ್ಲಿ 120 ರನ್ ಬಾರಿಸಿರುವ ರಜತ್ ಪಾಟಿದಾರ್ ಹಾಗೂ ಸರನ್ಶ್ ಜೈನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.