18 ಪಂದ್ಯಗಳಲ್ಲಿ ಬರೋಬ್ಬರಿ 97 ವಿಕೆಟ್: ಟೀಮ್ ಇಂಡಿಯಾಗೆ ಹರ್ಷ್ ಎಂಟ್ರಿ

Harsh Dubey: ಹರ್ಷ್ ದುಬೆ ಈ ಬಾರಿಯ ಐಪಿಎಲ್​ನಲ್ಲಿ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆರ್​. ಸ್ಮರಣ್ ಗಾಯಗೊಂಡು ಹೊರಗುಳಿದ್ದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಹರ್ಷ್ ದುಬೆಯನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಯುವ ಸ್ಪಿನ್ನರ್ ಭಾರತ ಎ ತಂಡಕ್ಕೂ ಆಯ್ಕೆಯಾಗಿದ್ದಾರೆ.

18 ಪಂದ್ಯಗಳಲ್ಲಿ ಬರೋಬ್ಬರಿ 97 ವಿಕೆಟ್: ಟೀಮ್ ಇಂಡಿಯಾಗೆ ಹರ್ಷ್ ಎಂಟ್ರಿ
Harsh Dubey

Updated on: May 17, 2025 | 12:58 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. 18 ಸದಸ್ಯರ ಈ ತಂಡವನ್ನು ಬಂಗಾಳದ ಅನುಭವಿ ಬ್ಯಾಟರ್ ಅಭಿಮನ್ಯು ಈಶ್ವರನ್ ಮುನ್ನಡೆಸಲಿದ್ದಾರೆ. ಹಾಗೆಯೇ ಕರುಣ್ ನಾಯರ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಇನ್ನು ಭಾರತ ಎ ತಂಡದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಹೆಸರು ಹರ್ಷ್​ ದುಬೆ ಅವರದ್ದು.

ಯಾರು ಈ ಹರ್ಷ್ ದುಬೆ?

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ಭಾರತ ಎ ತಂಡದಲ್ಲಿ, ಹರ್ಷ್ ದುಬೆ ಹೆಚ್ಚು ಗಮನ ಸೆಳೆದಿದ್ದಾರೆ. ವಿದರ್ಭದ ಎಡಗೈ ಸ್ಪಿನ್ನರ್ ಹರ್ಷ್ ಕೆಲ ದಿನಗಳ ಹಿಂದೆಯಷ್ಟೇ ಐಪಿಎಲ್​ಗೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದರು. ಇದೀಗ ಭಾರತ ಎ ತಂಡದಲ್ಲೂ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಹರ್ಷ್ ದುಬೆ ಡಿಸೆಂಬರ್ 2022 ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ಅಲ್ಲದೆ ಇಲ್ಲಿಯವರೆಗೆ ಅವರು ಆಡಿರುವುದು ಕೇವಲ ಮೂರು ಸೀಸನ್ ಮಾತ್ರ.  ಈ ಮೂರು ಸೀಸನ್​ಗಳಲ್ಲೇ ಅವರು ತಮ್ಮ ಸ್ಪಿನ್ ಮೋಡಿಯನ್ನು ತೆರೆದಿಟ್ಟಿದ್ದಾರೆ. ಈ ಸ್ಪಿನ್​ ಮೋಡಿಯೊಂದಿಗೆ ಇದೀಗ ಭಾರತ ತಂಡದ ಕದ ತಟ್ಟಲಾರಂಭಿಸಿದ್ದಾರೆ.

ದಾಖಲೆ ಬರೆದ ಹರ್ಷ್:

2024-25ರ ರಣಜಿ ಟ್ರೋಫಿ ಸೀಸನ್ ಹರ್ಷ್ ದುಬೆಗೆ ಬಹಳ ಸ್ಮರಣೀಯವಾಗಿತ್ತು. ಒಂದು ರಣಜಿ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಅವರು ಮುರಿದು ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಈ ಬಾರಿಯ ಸೀಸನ್​ನಲ್ಲಿ ಹರ್ಷ್ ದುಬೆ ಪಡೆದಿರುವುದು ಬರೋಬ್ಬರಿ 69 ವಿಕೆಟ್​ಗಳು.

ಈ ಭರ್ಜರಿ ಪ್ರದರ್ಶನೊಂದಿಗೆ ಹರ್ಷ್ ದುಬೆ ವಿದರ್ಭ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಈವರೆಗೆ ಕೇವಲ  18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಹರ್ಷ್ ದುಬೆ ಕಬಳಿಸಿರುವುದು ಬರೋಬ್ಬರಿ 97 ವಿಕೆಟ್‌ಗಳನ್ನು ಎಂದರೆ ನಂಬಲೇಬೇಕು. ಹೀಗಾಗಿಯೇ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಯುವ ಸ್ಪಿನ್ನರ್​​ನನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಿದೆ.

ಟೀಮ್ ಇಂಡಿಯಾದಲ್ಲಿ ಸ್ಥಾನ ನಿರೀಕ್ಷೆ:

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷ್ ದುಬೆ ಮಿಂಚಿದರೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತ. ಏಕೆಂದರೆ ಈಗಾಗಲೇ ಆಯ್ಕೆ ಸಮಿತಿ ಹಿರಿಯ ಆಟಗಾರರನ್ನು ಬದಿಗಿರಿಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಅದರ ಭಾಗವಾಗಿ ಈಗಾಗಲೇ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ರವೀಂದ್ರ ಜಡೇಜಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಇತ್ತ ಬಿಸಿಸಿಐ ಹೊಸ ಸ್ಪಿನ್ನರ್​ನ ಹುಡುಕಾಟದಲ್ಲಿದೆ. ಹೀಗಾಗಿ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಸರಣಿಯಲ್ಲಿ ಹರ್ಷ್ ಮಿಂಚಿದರೆ ಹರ್ಷ್ ದುಬೆಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಖಚಿತ ಎನ್ನಬಹುದು.

ಇದನ್ನೂ ಓದಿ: IPL 2025: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ-ಎ ತಂಡ:

ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಶಮ್ಸ್ ಮುಲಾನಿ, ಮುಕೇಶ್ ಕುಮಾರ್, ಆಕಾಶ್ ದೀಪ್, ರುತುರಾಜ್ ಗಾಯಕ್ವಾಡ್, ಸರ್ಫರಾಝ್ ಖಾನ್, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಹರ್ಷ್ ದುಬೆ. ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ (ಇಬ್ಬರು 2ನೇ ಪಂದ್ಯದಿಂದ ಲಭ್ಯರಿರಲಿದ್ದಾರೆ).