ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಆರಂಭಿಕ ದಿನಗಳ ಹೆಚ್ಚಿನ ದಾಖಲೆಗಳಿರುವುದು ಬ್ರಿಟಿಷರ ಹೆಸರಿನಲ್ಲಿ. ಇದಾದ ಬಳಿಕ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಆಟಗಾರರು ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದರು. ಆದರೆ ಬ್ರಿಷರರೊಂದಿಗೆ ಕಣಕ್ಕಿಳಿದು ಭಾರತೀಯ ಆಟಗಾರರೊಬ್ಬರು ಶತಮಾನಗಳ ಹಿಂದೆ ಶತಕದ ದಾಖಲೆ ಬರೆದಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ವಿಶೇಷ ಎಂದರೆ ಆ ಶತಮಾನದ ದಾಖಲೆಯನ್ನು ಕೂಡ ಯಾರಿಗೂ ಮುರಿಯಲು ಕೂಡ ಸಾಧ್ಯವಾಗಿಲ್ಲ.
ಅದು, 1896…ಭಾರತವು ಬ್ರಿಟಿಷರ ಕಪಿಮುಷ್ಠಿಯಲ್ಲಿತ್ತು. ಆಂಗ್ಲರ ನೆಚ್ಚಿನ ಕ್ರೀಡೆಯಾಗಿ ಭಾರತಕ್ಕೂ ಕ್ರಿಕೆಟ್ ಅದಾಗಲೇ ಕಾಲಿಟ್ಟಿತ್ತು. ಇತ್ತ ಭಾರತದ ರಾಜ ಮಹಾರಾಜರು ಕೂಡ ಹೊಸ ಕ್ರೀಡೆಯತ್ತ ಒಲವು ಹೊಂದಿದ್ದರು. ಅದರಲ್ಲೂ ಗುಜರಾತ್ನ ನವನಗರದ ಯುವ ರಾಜಕುಮಾರ ರಂಜಿತ್ ಸಿಂಗ್ ಇಂಗ್ಲೆಂಡ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಈ ವೇಳೆ ಕ್ರಿಕೆಟ್ ಅನ್ನು ಕೂಡ ಸಹ ಕರಗತ ಮಾಡಿಕೊಂಡಿದ್ದರು.
ಇತ್ತ ಮಹಾರಾಜರಾಗಿ ನವನಗರ ಚುಕ್ಕಾಣಿ ಹಿಡಿದ್ದ ರಂಜಿತ್ ಸಿಂಗ್ ಅವರಿಗೂ ಕೂಡ ಬ್ರಿಟಿಷರ ತಂಡದಲ್ಲಿ ಅವಕಾಶ ಪಡೆದರು. ಅಷ್ಟೇ ಅಲ್ಲದೆ ಇಂಗ್ಲೆಂಡ್ನ ಕೌಂಟಿ ಸಸೆಕ್ಸ್ ಪರ ಆಡುತ್ತಿದ್ದರು. ಈ ತಂಡ ಯಾರ್ಕ್ ಶೈರ್ ವಿರುದ್ಧ ಪಂದ್ಯವೊಂದರಲ್ಲಿ ಕಣಕ್ಕಿಳಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಯಾರ್ಕ್ಷೈರ್ ತಂಡವು 407 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕಠಿಣ ಗುರಿ ಪಡೆದ ಸಸೆಕ್ಸ್ ತಂಡದ ಪರ ಮೂರನೇ ದಿನ ರಂಜಿತ್ ಸಿಂಗ್ ಮೈದಾನಕ್ಕೆ ಇಳಿದಿದ್ದರು.
ಒಂದೆಡೆಯಿಂದ ಸಸೆಕ್ಸ್ ತಂಡದ ವಿಕೆಟ್ ಬೀಳುತ್ತಿದ್ದರೆ ಮತ್ತೊಂದು ತುದಿಯಲ್ಲಿ ಮಹಾರಾಜರು ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಂಜಿತ್ ಸಿಂಗ್ ಯಾರ್ಕ್ಷೈರ್ ಬೌಲರ್ಗಳನ್ನು ಬೆಂಡೆತ್ತಿದರು. ಪರಿಣಾಮ ಮೊದಲ ಮೊದಲ ಇನಿಂಗ್ಸ್ನಲ್ಲಿ ಮಹಾರಾಜರು 100 ರನ್ಗಳ ಭರ್ಜರಿ ಶತಕ ಬಾರಿಸಿ ಔಟಾದರು. ಅಲ್ಲದೆ ಸಸೆಕ್ಸ್ ತಂಡವು ಕೇವಲ 191 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ನಲ್ಲಿ 216 ರನ್ಗಳ ಹಿನ್ನಡೆ ಅನುಭವಿಸಿದ ಸಸೆಕ್ಸ್ ತಂಡಕ್ಕೆ ಯಾರ್ಕ್ಷೈರ್ ನಾಯಕ ಫಾಲೋ-ಆನ್ ನೀಡಿದರು. ಅದರಂತೆ ಮತ್ತೆ 2ನೇ ಇನಿಂಗ್ಸ್ ಆರಂಭಿಸಿದ ಸಸೆಕ್ಸ್ ಪರ ಬ್ಯಾಟ್ ಬೀಸಿದ ರಂಜಿತ್ ಸಿಂಗ್, ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. ವಿಶೇಷ ಎಂದರೆ ಮಹಾರಾಜರ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 3ನೇ ದಿನದಾಟದ ಅಂತ್ಯದ ವೇಳೆ 2ನೇ ಇನಿಂಗ್ಸ್ನಲ್ಲಿ ಸಸೆಕ್ಸ್ ತಂಡವು 2 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿತು. ಅಲ್ಲದೆ 2ನೇ ಇನಿಂಗ್ಸ್ನಲ್ಲಿ 125 ರನ್ ಗಳಿಸಿ ರಂಜಿತ್ ಸಿಂಗ್ ಅಜೇಯರಾಗಿ ಉಳಿದಿದ್ದರು. ಇದರೊಂದಿಗೆ ಒಂದೇ ದಿನದಲ್ಲಿ ಎರಡು ಶತಕ ಬಾರಿಸಿದ ವಿಶೇಷ ದಾಖಲೆಯೊಂದು ಮಹಾರಾಜರ ಪಾಲಾಯಿತು. ಅಲ್ಲದೆ ಆ ಪಂದ್ಯವನ್ನು ಸಸೆಕ್ಸ್ ತಂಡವು ಡ್ರಾನಲ್ಲಿ ಅಂತ್ಯಗೊಳಿಸಿತು.
ಅಂದಹಾಗೆ ಇಂದು ಒಂದೇ ದಿನ 2 ಶತಕ ಬಾರಿಸಿ ಶತಮಾನಗಳ ಈ ವಿಶ್ವ ದಾಖಲೆ ಬರೆದ ಮಹಾರಾಜ ರಂಜಿತ್ ಸಿಂಗ್ ಅವರ ಜನ್ಮದಿನ ಎಂಬುದು ವಿಶೇಷ. ಬ್ರಿಟಿಷರ ಕಾಲದಲ್ಲಿ ಒಟ್ಟು 15 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಮಹಾರಾಜರು, 24.75 ರ ಸರಾಸರಿಯಲ್ಲಿ 594 ರನ್ಗಳಿಸಿದ್ದರು. ಈ ವೇಳೆ ಅವರು 2 ಶತಕ ಬಾರಿಸಿದ್ದರು. ಒಂದೇ ದಿನ ಮೂಡಿಬಂದ ಈ ಶತಕವೇ ಇಂದಿಗೂ ವಿಶ್ವ ದಾಖಲೆಯಾಗಿ ಉಳಿದಿರುವುದು ವಿಶೇಷ.