ಟೀಮ್ ಇಂಡಿಯಾದ (Team India) ಮುಖ್ಯ ಕೋಚ್ ರವಿ ಶಾಸ್ತ್ರಿ (Ravi Shastri) ಅವರು ಟಿ20 ವಿಶ್ವಕಪ್ (T20 World Cup 2021) ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಆ ಬಳಿಕ ಅವರ ಮುಂದಿನ ನಡೆಯೇನು ಎಂದು ಪರಿಶೀಲಿಸಿದರೆ, ಸದ್ಯ ಎರಡು ಉತ್ತರಗಳು ಸಿಗುತ್ತಿವೆ. ಅದರಲ್ಲಿ ಮೊದಲನೆಯದರು ಇಂಡಿಯನ್ ಪ್ರೀಮಿಯರ್ ಲೀಗ್. ಹೌದು, ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ತ್ಯಜಿಸಿದ ಬಳಿಕ ರವಿ ಶಾಸ್ತ್ರಿ ಮತ್ತೊಮ್ಮೆ ಕೋಚ್ ಆಗಲು ಬಯಸಿದ್ದಾರೆ. ಅದು ಕೂಡ ಐಪಿಎಲ್ನಲ್ಲಿ ಎಂಬುದು ವಿಶೇಷ. ಶಾಸ್ತ್ರಿ ಅವಧಿಯಲ್ಲಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿರಬಹುದು. ಇದಾಗ್ಯೂ ದೇಶ-ವಿದೇಶಗಳಲ್ಲಿ ಭಾರತ ತಂಡದ ಪ್ರದರ್ಶನ ಅದ್ಭುತವಾಗಿದೆ. ಇದೇ ಕಾರಣದಿಂದಾಗಿ ರವಿ ಶಾಸ್ತ್ರಿಯನ್ನು ಯಶಸ್ವಿ ಕೋಚ್ ಆಗಿ ಪರಿಗಣಿಸಲಾಗುತ್ತದೆ.
ಇತ್ತ ಮುಂದಿನ ಸೀಸನ್ ಐಪಿಎಲ್ನಲ್ಲಿ ಒಟ್ಟು 10 ತಂಡಗಳಿರಲಿವೆ. ಹೊಸ ತಂಡಗಳು ಸೇರ್ಪಡೆಯೊಂದಿಗೆ ಹಳೆಯ 8 ತಂಡಗಳಲ್ಲೂ ಮಹತ್ವದ ಬದಲಾವಣೆ ಕಂಡು ಬರಲಿದೆ. ಹೀಗಾಗಿ ಐಪಿಎಲ್ ಮೂಲಕ 2ನೇ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ ರವಿ ಶಾಸ್ತ್ರಿ. ಕೆಲ ಮೂಲಗಳ ಮಾಹಿತಿ ಪ್ರಕಾರ, ರವಿ ಶಾಸ್ತ್ರಿ ಆರ್ಸಿಬಿ ತಂಡದ ಕೋಚ್ ಆಗಲು ಬಯಸಿದ್ದಾರೆ. ತಂಡದಲ್ಲಿರುವ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಶಾಸ್ತ್ರಿ ಉತ್ತಮ ಒಡನಾಟ ಹೊಂದಿದ್ದಾರೆ. ಇದೇ ಕಾರಣದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತುದಾರರಾಗಲು ಬಯಸಿದ್ದಾರೆ. ಆರ್ಸಿಬಿ ಹೊರತಾಗಿ ಇತರೆ ತಂಡಗಳ ಕೋಚ್ ಹುದ್ದೆಗಳ ಮೇಲೂ ರವಿ ಶಾಸ್ತ್ರಿ ಕಣ್ಣಿಟ್ಟಿದ್ದಾರೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಆರ್ಸಿಬಿ ತಂಡದ ಕೋಚ್ ಹುದ್ದೆ ಕೂಡ ಖಾಲಿ ಇದೆ ಎನ್ನಬಹುದು. ಏಕೆಂದರೆ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ದ್ವಿತಿಯಾರ್ಧದ ಐಪಿಎಲ್ ವೇಳೆ ಹೊರಗುಳಿದಿದ್ದರು. ಹೀಗಾಗಿ ತಂಡದ ನಿರ್ದೇಶಕರಾಗಿದ್ದ ಮೈಕ್ ಹೆಸನ್ ಅವರು ಕೋಚ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈ ಇಬ್ಬರ ತರಬೇತಿ ಅಡಿಯಲ್ಲಿ ಪರಿಶೀಲನೆ ಹೊಂದಿದರೂ ಆರ್ಸಿಬಿ ಫೈನಲ್ಗೇರುವಲ್ಲಿ ಸಾಧ್ಯವಾಗಿಲ್ಲ. ಮುಂದಿನ ಸೀಸನ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಹೀಗಾಗಿ ತಂಡದಲ್ಲೂ ಮಹತ್ವದ ಬದಲಾವಣೆ ಕಾಣಿಸಿಕೊಳ್ಳಲಿದೆ. ಅದರಂತೆ ಕೋಚ್ ಸೇರಿದಂತೆ ಸಿಬ್ಬಂದಿ ವರ್ಗ ಕೂಡ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೋಚ್ ಹುದ್ದೆಯಲ್ಲಿ ರವಿ ಶಾಸ್ತ್ರಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
ಒಂದು ವೇಳೆ ಐಪಿಎಲ್ನಲ್ಲಿ ಕೋಚ್ ಹುದ್ದೆ ಲಭಿಸದಿದ್ದರೆ ಎಂದಿನಂತೆ ಕಾಮೆಂಟರಿಗೆ ಮರಳಬಹುದು. ಕಾಮೆಂಟರಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದ ಶಾಸ್ತ್ರಿಯವರನ್ನು ಮತ್ತೆ ಕಾಮೆಂಟರಿ ಪ್ಯಾನೆಲ್ ಸೇರಿಸಿಕೊಳ್ಳಲು ಚಾನೆಲ್ಗಳು ಆಸಕ್ತಿ ತೋರಲಿದೆ. ಹೀಗಾಗಿ ಐಪಿಎಲ್ ಕೋಚ್ ಹುದ್ದೆ ಕೈತಪ್ಪಿದರೆ ಕಾಮೆಂಟೇಟರ್ ಆಗಿ ರವಿ ಶಾಸ್ತ್ರಿ ಕಾಣಿಸಿಕೊಳ್ಳೋದು ಬಹುತೇಕ ಖಚಿತ.
ರವಿ ಶಾಸ್ತ್ರಿ ಅವಧಿಯಲ್ಲಿ ಟೀಮ್ ಇಂಡಿಯಾ 2016 ರ ಟಿ 20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಹಾಗೆಯೇ ವಿಶ್ವಕಪ್ 2019 ರ ಸೆಮಿಫೈನಲ್‌ಗೆ ತಲುಪಿದ್ದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ದ ಸೋತು ಫೈನಲ್ ರೇಸ್ನಿಂದ ಹೊರಬಿದ್ದಿತ್ತು. ಹಾಗೆಯೇ ಶಾಸ್ತ್ರಿಯವರ ತರಬೇತಿಯಡಿಯಲ್ಲಿ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿತು. ಅಂದರೆ ಕಳೆದ 5 ವರ್ಷಗಳ ಅವಧಿಯಲ್ಲಿ ರವಿ ಶಾಸ್ತ್ರಿ ಅವರ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಪ್ರಮುಖ ಟೂರ್ನಿಯಲ್ಲಿ ಪ್ರಮುಖ ಘಟ್ಟವನ್ನು ತಲುಪಿತ್ತು. ಹೀಗಾಗಿಯೇ ರವಿ ಶಾಸ್ತ್ರಿ ಅವರನ್ನು ಯಶಸ್ವಿ ಕೋಚ್ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ?
ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು?
ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್‌ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
(Ravi Shastri eyes IPL or commentary)