ಐಪಿಎಲ್ 2022ರ (IPL 2022) 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ (RR vs CSK) ತಂಡ ಪ್ಲೇ ಆಫ್ಗೆ ಕ್ವಾಲಿಫೈ ಆಗಿದ್ದು ಎರಡನೇ ಸ್ಥಾನ ಅಲಂಕರಿಸಿದೆ. ಯಶಸ್ವಿ ಜೈಸ್ವಾಲ್ ಹಾಗೂ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ (R Ashwin) ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಆರ್ಆರ್ 5 ವಿಕೆಟ್ಗಳ ಗೆಲುವು ತನ್ನದಾಗಿಸಿತು. ಜೈಸ್ವಾಲ್ 44 ಎಸೆತಗಳಲ್ಲಿ 59 ರನ್ ಬಾರಿಸಿದರೆ, ಅಶ್ವಿನ್ 23 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 35 ವರ್ಷದ ಅಶ್ವಿನ್ ತಂಡ ಜಯ ಸಾಧಿಸುತ್ತಿದ್ದಂತೆ ವಿಶೇಷವಾಗಿ ಸಂಭ್ರಮಾಚರಣೆ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸೆಲೆಬ್ರೇಷನ್ ಮಾಡಿದ್ದಕ್ಕೆ ಅಶ್ವಿನ್ ಕಾರಣ ಕೂಡ ತಿಳಿಸಿದ್ದಾರೆ.
ಹೌದು, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಶಿಮ್ರೋನ್ ಹೆಟ್ಮೇರ್ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗದೇ ಇದ್ದಾಗ ಕಣಕ್ಕಿಳಿದ ಆರ್. ಅಶ್ವಿನ್ ಕೇವಲ 23 ಎಸೆತಗಳಲ್ಲಿ ಎರಡು ಫೋರ್ ಮತ್ತು ಮೂರು ಅಮೋಘ ಸಿಕ್ಸರ್ ಸಿಡಿಸಿ ಅಜೇಯ 40 ರನ್ನೊಂದಿಗೆ ಗೆಲುವಿಗೆ ಕಾರಣರಾದರು. ಕೊನೆಯ ಓವರ್ನಲ್ಲಿ ಆರ್ ಆರ್ ಗೆಲುವಿಗೆ 7 ರನ್‌ಗಳ ಅವಶ್ಯಕತೆಯಿತ್ತು. ಎರಡನೇ ಎಸೆತದಲ್ಲಿ ಅಶ್ವಿನ್ ಬೌಂಡರಿ ಬಾರಿಸಿ ತಂಡದ ಗೆಲುವನ್ನು ಖಚಿತ ಪಡಿಸಿದರು. ಈ ಶಾಟ್ ಹೊಡೆಯುತ್ತಿದ್ದಂತೆ ಅಶ್ವಿನ್ ಎದೆಗೆ ಕೈ ತೋರಿಸಿ ಸಂಭ್ರಮಿಸಿದರು. ಇದರ ಬಗ್ಗೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನನ್ನೊಳಗೆ ಡೇವಿಡ್ ವಾರ್ನರ್ ಬಂದಿದ್ದರು ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.
Chest thumping celebration by @ashwinravi99, the man of the match, for his batting! #CSKvsRR #Ashwin #IPL2022 pic.twitter.com/SyKQLhlJgw
— Venkat Parthasarathy (@Venkrek) May 20, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು ಅಗ್ರ ಕ್ರಮಾಂಕದ ಬ್ಯಾಟರ್ ಮೊಯಿನ್ ಅಲಿ ಭರ್ಜರಿ ಬ್ಯಾಟಿಂಗ್ (93 ರನ್, 57 ಎಸೆತ, 13 ಬೌಂಡರಿ, 3 ಸಿಕ್ಸರ್) ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ (2 ರನ್) ವಿಕೆಟನ್ನು ಕಳೆದುಕೊಂಡ ಚೆನ್ನೈ ಕಳಪೆ ಆರಂಭ ಪಡೆಯಿತು. ಆಗ 2ನೇ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿದ ಮೊಯಿನ್ ಅಲಿ ಹಾಗೂ ಡೆವೊನ್ ಕಾನ್ವೆ (16 ರನ್) ನೆರವಾದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಚೆನ್ನೈ ದಿಢೀರ್ ಕುಸಿತ ಕಂಡಿತು. ಕಾನ್ವೆ, ನಾರಾಯಣ್ ಜಗದೀಶನ್ (1 ರನ್) ಅಂಬಟಿ ರಾಯುಡು (3 ರನ್) ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಅಲಿಯೊಂದಿಗೆ ಜೊತೆಯಾದ ನಾಯಕ ಎಂ.ಎಸ್. ಧೋನಿ (26 ರನ್, 28 ಎಸೆತ, 1 ಬೌಂಡರಿ, 1 ಸಿಕ್ಸರ್) 5ನೇ ವಿಕೆಟ್‌ಗೆ 51 ರನ್ ಸೇರಿಸಿದರು.
RCB: ಆರ್ಸಿಬಿ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಮುಂಬೈ-ಡೆಲ್ಲಿ ಪಂದ್ಯಕ್ಕೆ ಕಾದು ಕುಳಿತ ಆರ್ಸಿಬಿ ಫ್ಯಾನ್ಸ್
93 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಅಲಿ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಒಬೆಡ್ ಮೆಕಾಯ್‌ಗೆ ವಿಕೆಟ್ ಒಪ್ಪಿಸಿದರು. ರಾಜಸ್ಥಾನದ ಪರ ಮೆಕಾಯ್ (2-20) ಹಾಗೂ ಯುಜ್ವೇಂದ್ರ ಚಹಾಲ್ (2-26) ತಲಾ ಎರಡು ವಿಕೆಟ್ ಪಡೆದರು. 151 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸಹ ಬ್ಯಾಟಿಂಗ್ ವೈಫಲ್ಯ ಕಂಡಿತು. ಆದರೆ ಜವಾಬ್ದಾರಿಯ ಆಟವಾಡಿದ ಯಶಸ್ವಿ ಜೈಸ್ವಾಲ್ (59) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಆರ್. ಅಶ್ವಿನ್ ಉತ್ತಮ ಆಟವಾಡಿದರು. ಪರಿಣಾಮ ಆರ್ಆರ್ 19.5 ಓವರ್ನಲ್ಲಿ ಜಯ ಕಂಡಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.