Breaking: ಅಕ್ಷರ್ ಪಟೇಲ್ ಔಟ್; ಭಾರತ ವಿಶ್ವಕಪ್ ತಂಡಕ್ಕೆ ಅಶ್ವಿನ್ ಎಂಟ್ರಿ..!

|

Updated on: Sep 28, 2023 | 8:25 PM

ODI World Cup 2023: 2023ರ ವಿಶ್ವಕಪ್‌ಗಾಗಿ ಭಾರತ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಗಾಯಗೊಂಡಿರುವ ಆಲ್ ರೌಂಡರ್ ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ.

Breaking: ಅಕ್ಷರ್ ಪಟೇಲ್ ಔಟ್; ಭಾರತ ವಿಶ್ವಕಪ್ ತಂಡಕ್ಕೆ ಅಶ್ವಿನ್ ಎಂಟ್ರಿ..!
ಆರ್​. ಅಶ್ವಿನ್
Follow us on

2023ರ ವಿಶ್ವಕಪ್‌ಗಾಗಿ (ODI World Cup 2023) ಭಾರತ ಕ್ರಿಕೆಟ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಗಾಯಗೊಂಡಿರುವ ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಬದಲಿಗೆ ಅನುಭವಿ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ. ವಾಸ್ತವವಾಗಿ ಏಷ್ಯಾಕಪ್ ವೇಳೆ ಅಕ್ಷರ್ ಪಟೇಲ್ ಗಾಯಗೊಂಡಿದ್ದರು. ಹೀಗಾಗಿ ಅವರು ಏಷ್ಯಾಕಪ್ (Asia Cup 2023) ಫೈನಲ್ ಪಂದ್ಯವನ್ನು ಆಡಿರಲಿಲ್ಲ. ಆದರೆ ಅಕ್ಷರ್ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಕೋಚ್ ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದ್ದರು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಅಕ್ಷರ್ ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಸೆಪ್ಟೆಂಬರ್ 29 ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡಲು ಐಸಿಸಿ ನೀಡಿರುವ ಕೊನೆಯ ಗಡುವಾಗಿದ್ದು, ಆಯ್ಕೆ ಸಮಿತಿಯು ಅಶ್ವಿನ್ ಅವರನ್ನು ಅಕ್ಷರ್ ಬದಲಿಗೆ ತಂಡಕ್ಕೆ ಸೇರಿಸಲು ನಿರ್ಧರಿಸಿದೆ.

ಇದೀಗ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಅಶ್ವಿನ್ 2015ರ ನಂತರ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ನ ಭಾಗವಾಗಲಿದ್ದಾರೆ. ವಾಸ್ತವವಾಗಿ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್ ತಮ್ಮ ಸ್ಪಿನ್‌ ಮ್ಯಾಜಿಕ್​ನಿಂದಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಬಹಳಷ್ಟು ತೊಂದರೆಗೊಳಿಸಿದ್ದರು. ಅದರಲ್ಲೂ ಇಂದೋರ್​ನ ಫ್ಲಾಟ್ ಪಿಚ್​ನಲ್ಲಿ ಅನುಭವಿ ಆಫ್ ಸ್ಪಿನ್ನರ್ 3 ​​ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಕ್ಕೆ ಭರ್ಜರಿ ಜಯ ತಂದುಕೊಟ್ಟರು. ಅಂದಿನಿಂದ ಅಶ್ವಿನ್ ತಂಡ ಸೇರುವುದು ಖಚಿತ ಎಂದು ಭಾವಿಸಲಾಗಿತ್ತು.

ಅತಿ ಬುದ್ಧಿವಂತಿಕೆ ತೋರಿದ ಡೇವಿಡ್ ವಾರ್ನರ್​ಗೆ ತಕ್ಕ ಪಾಠ ಕಲಿಸಿದ ಅಶ್ವಿನ್; ವಿಡಿಯೋ ನೋಡಿ

ಅಶ್ವಿನ್​ಗೆ ವರವಾದ ಅಕ್ಷರ್ ಇಂಜುರಿ

ಬಿಸಿಸಿಐ ಸೆಪ್ಟೆಂಬರ್ 5 ರಂದು ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಹೊರತುಪಡಿಸಿ, ಅಕ್ಷರ್ ಈ ತಂಡದಲ್ಲಿ ಮೂರನೇ ಸ್ಪಿನ್ನರ್ ಆಗಿ ಸ್ಥಾನ ಪಡೆದಿದ್ದರು. ಆದಾಗ್ಯೂ, ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ, ಅಕ್ಷರ್ ತೊಡೆಯ (ಕ್ವಾಡ್ರೈಸ್ಪ್ಸ್) ಗಾಯಕ್ಕೆ ಒಳಗಾದರು. ಇದರಿಂದಾಗಿ ಅವರು ಫೈನಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ಕರೆ ತರಲಾಯಿತು. ಆದಾಗ್ಯೂ, ಫೈನಲ್ ನಂತರ, ನಾಯಕ ರೋಹಿತ್ ಸುಂದರ್ ಹೊರತುಪಡಿಸಿ, ಅಶ್ವಿನ್ ಕೂಡ ಈ ಸ್ಥಾನಕ್ಕೆ ಸ್ಪರ್ಧಿಯಾಗಿದ್ದಾರೆ ಎಂದು ಹೇಳಿದ್ದರು.

ತಂಡದೊಂದಿಗೆ ಕಾಣಿಸಿಕೊಂಡ ಅಶ್ವಿನ್

ನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ಸುಂದರ್ ಬದಲು ಅಶ್ವಿನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿದ್ದರು. ಎರಡೂ ಪಂದ್ಯಗಳಲ್ಲಿ ಅಶ್ವಿನ್ ಅದ್ಭುತವಾಗಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದರು. ಇದಾದ ನಂತರ ಅಕ್ಷರ್ ಸಂಪೂರ್ಣವಾಗಿ ಫಿಟ್ ಆಗದಿದ್ದರೆ ಅಶ್ವಿನ್ ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಯಿತು. ಗುರುವಾರ ಸಂಜೆ ಟೀಂ ಇಂಡಿಯಾ ತನ್ನ ಅಭ್ಯಾಸ ಪಂದ್ಯಕ್ಕಾಗಿ ಗುವಾಹಟಿ ತಲುಪಿದಾಗ ಅಕ್ಷರ್ ಬದಲಿಗೆ ಅಶ್ವಿನ್ ತಂಡದೊಂದಿಗೆ ಕಾಣಿಸಿಕೊಂಡಿದ್ದು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:15 pm, Thu, 28 September 23