AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್​ಗೆ 15 ಸದಸ್ಯರ ಅಂತಿಮ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ತಂಡದಲ್ಲಾಗಿದೆ ಪ್ರಮುಖ ಬದಲಾವಣೆ..!

Australia final ODI World Cup squad: ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್​ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಎರಡು ಬದಲಾವಣೆ ಕೂಡ ಮಾಡಲಾಗಿದೆ. ತಂಡದ ಅನುಭವಿ ಸ್ಪಿನ್ನರ್ ಆಶ್ಟನ್ ಅಗರ್ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರುವುದರಿಂದ ಅನುಭವಿ ಬ್ಯಾಟರ್ ಮಾರ್ನಸ್ ಲಬುಶೇನ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.

ವಿಶ್ವಕಪ್​ಗೆ 15 ಸದಸ್ಯರ ಅಂತಿಮ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ತಂಡದಲ್ಲಾಗಿದೆ ಪ್ರಮುಖ ಬದಲಾವಣೆ..!
ಕ್ರಿಕೆಟ್ ಆಸ್ಟ್ರೇಲಿಯಾ
ಪೃಥ್ವಿಶಂಕರ
|

Updated on:Sep 28, 2023 | 8:52 PM

Share

ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್​ಗೆ (ODI World Cup 2023) ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಎರಡು ಬದಲಾವಣೆ ಕೂಡ ಮಾಡಲಾಗಿದೆ. ತಂಡದ ಅನುಭವಿ ಸ್ಪಿನ್ನರ್ ಆಶ್ಟನ್ ಅಗರ್ (Ashton Agar) ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿರುವುದರಿಂದ ಅನುಭವಿ ಬ್ಯಾಟರ್ ಮಾರ್ನಸ್ ಲಬುಶೇನ್ (Marnus Labuschagne) ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ವಾಸ್ತವವಾಗಿ ಲಬುಶೇನ್ ಆಸ್ಟ್ರೇಲಿಯಾದ ತಾತ್ಕಾಲಿಕ ವಿಶ್ವಕಪ್ ತಂಡದಲ್ಲೂ ಆಯ್ಕೆಯಾಗಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ಮತ್ತು ಭಾರತದ ವಿರುದ್ಧ ಲಬುಶೇನ್ ತೋರಿದ ಅದ್ಭುತ ಫಾರ್ಮ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ತಂದುಕೊಟ್ಟಿದೆ.

ಲಬುಶೇನ್ ಗಮನಾರ್ಹ ಪ್ರದರ್ಶನ

ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಸೋತಿತ್ತಾದರೂ, ಲಬುಶೇನ್ ಮಾತ್ರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಅವರು ಆರಂಭಿಕ ಎರಡು ಏಕದಿನ ಪಂದ್ಯಗಳಲ್ಲಿ ಅರ್ಧಶತಕ ಮತ್ತು ಶತಕವನ್ನು ಗಳಿಸಿ ಆಸ್ಟ್ರೇಲಿಯಾವನ್ನು 2-0 ಮುನ್ನಡೆ ಸಾಧಿಸುವಂತೆ ಮಾಡಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ತಂಡ ಮುಂದಿನ 3 ಪಂದ್ಯಗಳನ್ನು 100 ರನ್​ಗಳ ಅಂತರದಿಂದ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರವಲ್ಲದೆ ಭಾರತದ ವಿರುದ್ಧವೂ ಲಬುಶೇನ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ರಾಜ್‌ಕೋಟ್‌ನಲ್ಲಿ ಬುಧವಾರ ನಡೆದ ಭಾರತ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲೂ ಲಬುಶೇನ್ ಅಮೋಘ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

ಗಾಯದ ಹೊರತಾಗಿಯೂ ಹೆಡ್​​ಗೆ ತಂಡದಲ್ಲಿ ಸ್ಥಾನ

ಅಗರ್ ಅವರನ್ನು ಹೊರಗಿಡಲಾಗಿದ್ದರೂ, ಟ್ರಾವಿಸ್ ಹೆಡ್ ತಂಡದ ಭಾಗವಾಗಿ ಉಳಿದಿದ್ದಾರೆ. ಆದಾಗ್ಯೂ, ಹೆಡ್ ಕೈ ಮುರಿತದಿಂದ ಬಳಲುತ್ತಿರುವ ಕಾರಣ ವಿಶ್ವಕಪ್‌ನ ದ್ವಿತೀಯಾರ್ಧದಲ್ಲಿ ಮಾತ್ರ ತಂಡವನ್ನು ಸೇರಲು ಸಾಧ್ಯವಾಗುತ್ತದೆ. ಐದು ಬಾರಿಯ ಚಾಂಪಿಯನ್‌ಗಳು ಆಡಮ್ ಝಂಪಾ ರೂಪದಲ್ಲಿ ಕೇವಲ ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್‌ನೊಂದಿಗೆ ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಭಾರತದ ಟ್ರ್ಯಾಕ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿರುವುದರಿಂದ ಆಯ್ಕೆಯಾಗಿ ಉಳಿದಿದ್ದಾರೆ. ವಿಶೇಷವಾಗಿ ಇನ್ನೊಬ್ಬ ಸಾಮಾನ್ಯ ಸ್ಪಿನ್ನರ್ ಅನುಪಸ್ಥಿತಿಯಲ್ಲಿ.

ರಾಜ್‌ಕೋಟ್‌ನಲ್ಲಿ ಭಾರತ ವಿರುದ್ಧ ಆಡಿದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತಮ್ಮ ಖೋಟಾದಲ್ಲಿ 40 ರನ್ ನೀಡಿದ್ದ ಮ್ಯಾಕ್ಸ್‌ವೆಲ್ 4 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಇದರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹವರನ್ನು ಔಟ್ ಮಾಡಿದರು.

ಆಸ್ಟ್ರೇಲಿಯಾ ವಿಶ್ವಕಪ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.

Published On - 8:02 pm, Thu, 28 September 23