ಪರ್ತ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ನ (T20 World Cup) ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಅನುಭವಿಸಿದ ಸೋಲು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಮಾಡಿದ ಕೆಲ ತಪ್ಪುಗಳು ಸೋಲಿಗೆ ಮುಖ್ಯ ಕಾರಣವಾಯಿತು. ಭಾರತದ ಸ್ಟಾರ್ ಫೀಲ್ಡರ್ಗಳೆಂದು ಖ್ಯಾತಿ ಪಡೆದಿರುವ, ಯಾವುದೇ ಕಷ್ಟಕರವಾದ ಕ್ಯಾಚ್ ಅನ್ನು ಸುಲಭವಾಗಿ ಹಿಡಿಯುವ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ ಅವರೇ ಸುಲಭ ಕ್ಯಾಚ್, ರನೌಟ್ ಅನ್ನು ಮಿಸ್ ಮಾಡಿಕೊಂಡರು. ಇದರ ಜೊತೆಗೆ ರವಿಚಂದ್ರನ್ ಅಶ್ವಿನ್ (R Ashwin) ಕೂಡ ಮಂಕಡಿಂಗ್ ಮಾಡುವ ಅವಕಾಶವನ್ನು ತಪ್ಪಿಸಿಕೊಂಡರು. ಐಸಿಸಿಯ ನೂತನ ನಿಯಮದಲ್ಲಿ ಮಂಕಡಿಂಗ್ ಮಾಡಬಹುದು ಎಂಬ ಆಯ್ಕೆ ನೀಡಿದ್ದರೂ ಅಶ್ವಿನ್ ಇದಕ್ಕೆ ಮನಸ್ಸು ಮಾಡಲಿಲ್ಲ.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಇನ್ನಿಂಗ್ಸ್ನ 18ನೇ ಓವರ್ನಲ್ಲಿ ಈ ಘಟನೆ ನಡೆಯಿತು. ಆರ್. ಅಶ್ವಿನ್ ಅವರು ಕೊನೆಯ ಎಸೆತ ಹಾಕಲು ಮುಂದೆ ಬಂದಾಗ ನಾನ್ ಸ್ಟ್ರೈಕರ್ನಲ್ಲಿದ್ದ ಡೇವಿಡ್ ಮಿಲ್ಲರ್ ಚೆಂಡು ಎಸೆಯುವ ಮುನ್ನವೇ ಕ್ರೀಸ್ ಬಿಟ್ಟರು. ಇದನ್ನು ತಕ್ಷಣ ಗಮನಿಸಿದ ಅಶ್ವಿನ್ ಬಾಲ್ ಎಸೆಯದೆ ಸುಮ್ಮನಾದರು. ಈ ಸಂದರ್ಭ ಅಶ್ವಿನ್ಗೆ ಮಿಲ್ಲರ್ ಅವರನ್ನು ಮಂಕಡಿಂಗ್ ಮಾಡುವ ಅವಕಾಶವಿತ್ತು. ಆದರೆ, ಆರೀತಿ ಮಾಡದೆ ಪುನಃ ಬೌಲಿಂಗ್ ಮಾಡಲು ಹಿಂತಿರುಗಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
18ನೇ ಓವರ್ ಮಾಡಿದ ಅಶ್ವಿನ್:
ಪಂದ್ಯ ರೋಚಕತೆ ಸೃಷ್ಟಿಸಿದ್ದ ಸಂದರ್ಭ 18ನೇ ಓವರ್ ಬೌಲಿಂಗ್ ಮಾಡಲು ಆರ್. ಅಶ್ವಿನ್ ಅವರಿಗೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈರೀತಿಯ ಸಂದರ್ಭದಲ್ಲಿ ಸ್ನಿನ್ನರ್ಗೆ ಬೌಲಿಂಗ್ ನೀಡಿದ್ದು ಸರಿಯೇ? ಎಂದು ಅನೇಕ ಪ್ರಶ್ನಿಸುತ್ತಿದ್ದಾರೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ತಾವು ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ”ಕೊನೆಯ ಓವರ್ನಲ್ಲಿ ಸ್ಪಿನ್ನರ್ಗೆ ಬೌಲಿಂಗ್ ನೀಡಿದರೆ ಏನು ಆಗುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಹೀಗಾಗಿ ನಾನು ಬೇರೆ ದಾರಿಯನ್ನು ಆಯ್ಕೆ ಮಾಡಿಕೊಂಡೆ. ಅಶ್ವಿನ್ ಅವರ ಓವರ್ ಮುಗಿಸಿ ಬಿಟ್ಟರೆ ವೇಗಿಗಳು ಸರಿಯಾದ ಓವರ್ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂಬುದು ತಲೆಯಲ್ಲಿತ್ತು. ಕೆಲ ಸಂದರ್ಭದಲ್ಲಿ ಈರೀತಿಯಾಗಿ ಯೋಜನೆ ಮಾಡಬೇಕಾಗುತ್ತದೆ,” ಎಂದು ರೋಹಿತ್ ಹೇಳಿದ್ದಾರೆ.
ಕಾರ್ತಿಕ್ ಇಂಜುರಿ:
ಸೋಲಿನ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗಾಯಕ್ಕೆ ತುತ್ತಾಗಿದ್ದು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಪಂದ್ಯದ ಮಧ್ಯೆ ಭಾರತ ಫೀಲ್ಡಿಂಗ್ ಮಾಡುವಾಗ 16ನೇ ಓವರ್ ವೇಳೆ ಕಾರ್ತಿಕ್ಗೆ ಜೋರಾಗಿ ಬೆನ್ನು ನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಕಾರ್ತಿಕ್ಗೆ ಕೀಪಿಂಗ್ ಕೂಡ ಮಾಡಲಾಗಿಲ್ಲ. ಹೀಗಾಗಿ ಮೈದಾನ ತೊರೆದು ಇವರ ಬದಲು ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರು. ಕಾರ್ತಿಕ್ ಇಂಜುರಿ ಬಗ್ಗೆ ಬಿಸಿಸಿಐ ಇನ್ನಷ್ಟೆ ಅಧಿಕೃತ ಮಾಹಿತಿ ನೀಡಬೇಕಿದೆ.
ಸೋತ ಭಾರತ:
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿತು. ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 6 ಫೋರ್, 3 ಸಿಕ್ಸರ್ ಬಾರಿಸಿ 68 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 15 ರನ್ ಬಾರಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್ಗಳು ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಪೆವಿಲಿಯನ್ ಸೇರಿಕೊಂಡರು. ಆಫ್ರಿಕಾ ಪರ ಲುಂಗಿ ಎನ್ಗಿಡಿ 4 ವಿಕೆಟ್ ಕಿತ್ತರು. ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಆ್ಯಡಂ ಮರ್ಕ್ರಮ್ (52) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 59) ಅವರ 73 ರನ್ಗಳ ಜೊತೆಯಾಟದ ನೆರವಿನಿಂದ 19.4 ಓವರ್ನಲ್ಲಿ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಹರಿಣಗಳ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದರೆ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.
Published On - 10:32 am, Mon, 31 October 22